Jailer Total Screens: ಬೆಂಗಳೂರಿನಲ್ಲಿ ಕೆಜಿಎಫ್ ಚಾಪ್ಟರ್ 2 ಮಾಡಿದ್ದ ಬೃಹತ್ ದಾಖಲೆ ಮುರಿದು ನಂಬರ್ 1 ಆದ ಜೈಲರ್!
ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಚಿತ್ರ ಸಹ ಒಂದು. ಕೊಲಮಾವು ಕೋಕಿಲ, ಡಾಕ್ಟರ್ ಹಾಗೂ ಬೀಸ್ಟ್ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ನೆಲ್ಸನ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರದ ಟೀಸರ್ ಹಾಗೂ ಹಾಡುಗಳು ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನು ಹುಟ್ಟುಹಾಕುತ್ತಿವೆ.
ಆಗಸ್ಟ್ 2ರಂದು ಚಿತ್ರದ ಟ್ರೈಲರ್ ಬಿಡುಗಡೆಗೊಂಡಿತ್ತು. ಜೈಲರ್ ಶೋಕೇಸ್ ಎಂಬ ಹೆಸರಿನ ಅಡಿಯಲ್ಲಿ ಬಿಡುಗಡೆಗೊಂಡ ಈ ಟ್ರೈಲರ್ ಚಿತ್ರದ ಮೇಲೆ ಸಿನಿ ರಸಿಕರು ಹಾಗೂ ರಜನಿಕಾಂತ್ ಅಭಿಮಾನಿಗಳಿಗಿದ್ದ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿತ್ತು. 2.15 ನಿಮಿಷದ ಈ ಟ್ರೈಲರ್ ಆರಂಭದಿಂದ ಅಂತ್ಯದವರೆಗೂ ಸಾಕಷ್ಟು ಮಾಸ್ ಅಂಶಗಳನ್ನು ಹೊಂದಿದ್ದು, ಟ್ರೈಲರ್ ವೀಕ್ಷಿಸಿದ ಸಿನಿ ರಸಿಕರು ಈ ಚಿತ್ರ ಗೆಲ್ಲುವುದು ಪಕ್ಕಾ ಎಂದು ಭವಿಷ್ಯ ನುಡಿದಿದ್ದರು.

ಚಿತ್ರದ ಬಿಡುಗಡೆಗೆ ಇನ್ನೂ ವಾರ ಬಾಕಿ ಇದೆ ಎನ್ನುವಾಗ ಈ ಹಿಂದಿನ ರಜನಿಕಾಂತ್ ಸಿನಿಮಾಗಳ ಹಾಗೆ ಹೆಚ್ಚೇನೂ ಸದ್ದು ಮಾಡಿರಲಿಲ್ಲ. ಆದರೆ ಚಿತ್ರದ ಟ್ರೈಲರ್ ಬಿಡುಗಡೆಗೊಂಡ ಬಳಿಕ ಸಿನಿ ರಸಿಕರು ಹಾಗೂ ರಜನಿಕಾಂತ್ ಅಭಿಮಾನಿಗಳು ಚಿತ್ರಕ್ಕಾಗಿ ಕಾತರರಾಗಿ ಕಾಯುವಂತಾಗಿತ್ತು. ಹಾಗಾಗಿಯೇ ಜೈಲರ್ ಚಿತ್ರದ ಮುಂಗಡ ಬುಕಿಂಗ್ ಆರಂಭವಾಗುತ್ತಿದ್ದಂತೆಯೇ ಸಿನಿ ರಸಿಕರು ಮುಗಿ ಬಿದ್ದು ಟಿಕೆಟ್‌ಗಳನ್ನು ಖರೀದಿಸಲು ಆರಂಭಿಸಿದ್ದಾರೆ.
ಪರಿಣಾಮ ಜೈಲರ್ ಚಿತ್ರ ದಾಖಲೆಯ ಬುಕಿಂಗ್ ಕಾಣುವುದರ ಜತೆಗೆ ಬೇಡಿಕೆಗೆ ತಕ್ಕ ಹಾಗೆ ಹೆಚ್ಚೆಚ್ಚು ಶೋಗಳನ್ನೂ ಸಹ ಪಡೆದುಕೊಳ್ಳುತ್ತಿದೆ. ಇನ್ನು ಬೆಂಗಳೂರಿನಲ್ಲಿಯೂ ಸಹ ಜೈಲರ್ ಚಿತ್ರದ ಮುಂಗಡ ಬುಕಿಂಗ್ ಕಳೆದ ನಾಲ್ಕು ದಿನಗಳ ಹಿಂದೆಯೇ ಆರಂಭಗೊಂಡಿದ್ದು, ಮೊದಲ ದಿನದ ಶೋಗಳಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಹೌದು, ಜೈಲರ್ ಚಿತ್ರಕ್ಕೆ ಮೊದಲ ದಿನ ಬೆಂಗಳೂರಿನಲ್ಲಿ ಸದ್ಯಕ್ಕೆ ಬರೋಬ್ಬರಿ 1093 ಶೋಗಳನ್ನು ಆಯೋಜಿಸಲಾಗಿದ್ದು, ಈ ಮೂಲಕ ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರ ನಿರ್ಮಿಸಿದ್ದ ದಾಖಲೆಯನ್ನು ಮುರಿದು ಹಾಕಿದೆ.
ಹೌದು, ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯ ದಿನ ಬೆಂಗಳೂರಿನಲ್ಲಿ ಒಟ್ಟು 1037 ಪ್ರದರ್ಶನಗಳನ್ನು ಪಡೆದುಕೊಂಡಿತ್ತು. ಇದು ಬೆಂಗಳೂರಿನಲ್ಲಿ ಚಿತ್ರವೊಂದು ಬಿಡುಗಡೆಯ ದಿನ ಪಡೆದುಕೊಂಡಿದ್ದ ಅತಿಹೆಚ್ಚು ಶೋಗಳ ಸಂಖ್ಯೆ ಎಂಬ ದಾಖಲೆಯಾಗಿತ್ತು. ಆದರೀಗ 1093 ಪಡೆದುಕೊಂಡಿರುವ ಜೈಲರ್ ಈ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ಬೆಂಗಳೂರಿನಲ್ಲಿ ಬಿಡುಗಡೆಯ ದಿನ ಅತಿಹೆಚ್ಚು ಶೋಗಳನ್ನು ಪಡೆದುಕೊಂಡ ಚಿತ್ರಗಳ ಪಟ್ಟಿ:
1. ಜೈಲರ್ - 1093 ಪ್ರದರ್ಶನಗಳು
2. ಕೆಜಿಎಫ್ ಚಾಪ್ಟರ್ 2 - 1037 ಪ್ರದರ್ಶನಗಳು
3. ಅವತಾರ್ ದ ವೇ ಆಫ್ ವಾಟರ್ - 1014 ಪ್ರದರ್ಶನಗಳು


Click it and Unblock the Notifications











