Jailer: ರಜನಿಕಾಂತ್ ಜೊತೆಗಿರುವ ಈ ಪುಟಾಣಿ ಯಾರು ? ತಲೈವಾನ ಮತ್ತೆ ಗೆಲ್ಲಿಸಿದ್ದು ಇವ್ನೇ
ಥಿಯೇಟರ್‌ಗಳಲ್ಲಿ 'ಜೈಲರ್' ಆರ್ಭಟ ಮುಂದುವರೆದಿದೆ. ಕೆಲವೆಡೆ ಇನ್ನು ಟಿಕೆಟ್ ಸಿಗುತ್ತಿಲ್ಲ. ವಾರದ ದಿನಗಳಲ್ಲೂ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ನೆಲ್ಸನ್ ನಿರ್ದೇಶನ, ರಜನಿಕಾಂತ್ ಪರ್ಫಾರ್ಮನ್ಸ್, ಶಿವಣ್ಣ ಗೆಸ್ಟ್ ಅಪಿಯರೆನ್ಸ್ 'ಜೈಲರ್' ಚಿತ್ರವನ್ನು ಗೆಲುವಿನ ಅಲೆಯಲ್ಲಿ ತೇಲುವಂತೆ ಮಾಡಿದೆ. 7 ದಿನಕ್ಕೆ ಸಿನಿಮಾ 450 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಸತತ ಸೋಲುಗಳಿಂದ ಕಂಗೆಟ್ಟಿದ್ದ ತಲೈವಾಗೆ 'ಜೈಲರ್' ದೊಡ್ಡ ಬ್ರೇಕ್ ಕೊಟ್ಟಿದೆ. ಒಂದು ಸಿಂಪಲ್ ಕಥೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟು ನೆಲ್ಸನ್ ಅಂಡ್ ಟೀಮ್ ಸಕ್ಸಸ್ ಕಂಡಿದೆ. ಇನ್ನು ಚಿತ್ರಕ್ಕೆ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕೂಡ ಪ್ಲಸ್ ಆಗಿದೆ. 'ಕಾವಾಲಯ್ಯ' ಸಾಂಗ್ ಜೊತೆಗೆ 'ಹುಕುಂ' ಸಾಂಗ್ ಸೂಪರ್ ಹಿಟ್ ಆಗಿದೆ. ಇನ್ನು ಬಿಜಿಎಂ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲ ಹಾಲಿವುಡ್ ಸಿನಿಮಾಗಳಿಂದ ಟ್ಯೂನ್ ಕದ್ದಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಸಿನಿಮಾ ಸಕ್ಸಸ್ ಅಲೆಯಲ್ಲಿ ಅದೆಲ್ಲಾ ಕಳೆದುಹೋಗಿದೆ.

ಘಟಾನುಘಟಿ ಕಲಾವಿದರು 'ಜೈಲರ್' ಚಿತ್ರದಲ್ಲಿ ನಟಿಸಿದ್ದಾರೆ. ರಜನಿಕಾಂತ್ ಪತ್ನಿಯಾಗಿ ರಮ್ಯಾಕೃಷ್ಣ ಕಾಣಿಸಿಕೊಂಡಿದ್ದಾರೆ. ಇನ್ನು ಶಿವರಾಜ್‌ಕುಮಾರ್, ಮೋಹನ್ ಲಾಲ್ ಹಾಗೂ ಜಾಕೀಶ್ರಾಫ್ ಅತಿಥಿ ಪಾತ್ರಗಳಲ್ಲಿ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಮುತ್ತುವೇಲ್, ನರಸಿಂಹ ಹಾಗೂ ಮ್ಯಾಥ್ಯೂ ಸಿಗರೇಟ್ ಸೇದುವ ಸೀನ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಅಭಿಮಾನಿಗಳಂತೂ ಈ ಸೀನ್ ವೇಳೆ ಹೆಚ್ಚೆದ್ದು ಕುಣಿಯುತ್ತಿದ್ದಾರೆ. ಇನ್ನು ಡೈಲಾಗ್ಸ್, ಕಾಮಿಡಿ, ಸೂಪರ್ ಸ್ಟಾರ್ ಸ್ಟೈಲ್ ಎಲ್ಲವೂ ಕ್ಲಿಕ್ ಆಗಿದೆ.
'ಜೈಲರ್' ಸಿನಿಮಾ ಸಕ್ಸಸ್ ಬೆನ್ನಲ್ಲೇ ರಜನಿಕಾಂತ್ ಪುಟ್ಟ ಮಗುವನ್ನು ಎತ್ತಿಕೊಂಡಿರುವ ಫೋಟೊವೊಂದು ವೈರಲ್ ಆಗುತ್ತಿದೆ. ಆ ಫೋಟೊದಲ್ಲಿ ಇರುವ ಪುಟಾಣಿ ಯಾರು ಎನ್ನುವ ಚರ್ಚೆ ಶುರುವಾಗಿದೆ. ಅಂದಹಾಗೆ ಆ ಪುಟಾಣಿಗೂ 'ಜೈಲರ್' ಸಿನಿಮಾಗೂ ಲಿಂಕ್ ಇದೆ. ಆತನಿಗೂ ಸಿನಿಮಾ ಸಕ್ಸಸ್‌ನಲ್ಲಿ ಪಾಲು ಸಿಗಲೇಬೇಕು. ಅಂದಹಾಗೆ ಈ ಪುಟಾಣಿ ಮತ್ಯಾರು ಅಲ್ಲ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್. ಹೌದು ಕಾಲಿವುಡ್ ರಾಕ್‌ಸ್ಟಾರ್ ಅಂತ್ಲೇ ಕರೆಸಿಕೊಂಡಿರುವ ಅನಿರುದ್ಧ್ ಬಾಲ್ಯದ ಫೋಟೊ ಇದು.
ರಜನಿಕಾಂತ್ ಹಾಗೂ ಅನಿರುದ್ಧ್ ರವಿಚಂದರ್ ಸಂಬಂಧಿಕರೇ ಆಗಬೇಕು. ರಜನಿಕಾಂತ್ ಮಡದಿ ಲತಾ ರಜನಿಕಾಂತ್ ಅವರ ಅಣ್ಣ ರವಿ ರಾಘವೇಂದ್ರ ಮಗನೇ ಅನಿರುದ್ಧ್. ತಾಯಿ ಕ್ಲಾಸಿಕಲ್ ಡ್ಯಾನ್ಸರ್ ಲಕ್ಷ್ಮಿ ರವಿಚಂದರ್. ಹಾಗಾಗಿ ಅನಿರುದ್ಧ್‌ಗೆ ವರಸೆಯಲ್ಲಿ ರಜನಿಕಾಂತ್ ಸೋದರ ಮಾವ ಆಗಬೇಕು. ಚಿಕ್ಕಂದಿನಿಂದ ಮಾವನ ಸಿನಿಮಾ ನೋಡಿಕೊಂಡು ಬೆಳೆದ ಅನಿರುದ್ಧ್ ಇಂದು ಆತನ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಹಿಂದೆ ತಲೈವಾ ನಟನೆಯ 'ದರ್ಬಾರ್', 'ಪೇಟಾ' ಸಿನಿಮಾಗಳಿಗೂ ಅನಿರುದ್ದ್ ಮ್ಯೂಸಿಕ್ ಕಂಪೋಸ್ ಮಾಡಿದ್ದರು.
30 ವರ್ಷಗಳ ಹಿಂದೆ ಲತಾ ರಜನಿಕಾಂತ್ ಅಣ್ಣನ ಮಗನನ್ನು ಸಿನಿಮಾ ಶೂಟಿಂಗ್ ಸೆಟ್‌ಗೆ ಕರೆದುಕೊಂಡು ಹೋಗಿದ್ದರು. ಆಗ ಕ್ಲಿಕ್ಕಿಸಿದ ಫೋಟೊ ಈಗ ವೈರಲ್ ಆಗುತ್ತಿದೆ. ಚಿಕ್ಕಂದಿನಿಂದಲೂ ಅನಿರುದ್ಧ್‌ಗೆ ರಜಿನಿ ಮಾಮ ಅಂದರೆ ಬಹಳ ಇಷ್ಟ. ತಲೈವಾಗೂ ಅನಿರುದ್ಧ್ ಅಚ್ಚುಮೆಚ್ಚು. ಇನ್ನು ರಜನಿಕಾಂತ್ ನಟನೆಯ 'ಬಾಬಾ' ಚಿತ್ರದ ಹಾಡೊಂದರಲ್ಲಿ ಮಕ್ಕಳ ಗುಂಪಿನಲ್ಲಿ ಅನಿರುದ್ಧ್ ಕೂಡ ಕಾಣಿಸಿಕೊಂಡಿದ್ದರು.

ಸಾಲು ಸಾಲು ಹಿಟ್ ಸಿನಿಮಾಗಳಿಗೆ ಅನಿರುದ್ಧ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಹಾಡು ಹಾಡುತ್ತಾರೆ. ಕಾಲೇಜಿನಲ್ಲಿ ಇದ್ದಾಗಲೇ ಧನುಷ್ ನಟನೆಯ '3' ಚಿತ್ರಕ್ಕೆ ಅನಿರುದ್ಧ್ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಆ ಚಿತ್ರವನ್ನು ರಜನಿಕಾಂತ್ ಪುತ್ರಿ ಐಶ್ವರ್ಯ ನಿರ್ದೇಶನ ಮಾಡಿದ್ದರು. 'ಕೊಲವೆರಿ ಡಿ' ಸಾಂಗ್ ಹಿಟ್ ಆಗಿ ಅನಿರುದ್ಧ್ ರಾತ್ರೋರಾತ್ರಿ ಫೇಮಸ್ ಆಗಿದ್ದರು. ಬಳಿಕ ಕತ್ತಿ, ಮಾರಿ, ವೇದಾಳಂ, ಹೀಗೆ ಹಲವು ಹಿಟ್ ಸಿನಿಮಾಗಳಿಗೆ ಟ್ಯೂನ್ ಹಾಕಿದ್ದಾರೆ.


Click it and Unblock the Notifications











