Rajinikanth Net Worth: 'ಜೈಲರ್' ಸಕ್ಸಸ್.. ₹110 ಕೋಟಿ ಸಂಭಾವನೆ.. 2023ರಲ್ಲಿ ರಜನಿ ಗಳಿಸಿದ ಆಸ್ತಿ ಎಷ್ಟು ಗೊತ್ತಾ?
ಕಳೆದೊಂದು ತಿಂಗಳಿಂದ ಸೂಪರ್‌ಸ್ಟಾರ್ ರಜನಿಕಾಂತ್ ಮೇನಿಯಾ ಶುರುವಾಗಿದೆ. ರಜನಿ ಅಭಿನಯದ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದ್ದು, ಮತ್ತೊಮ್ಮೆ ಸೂಪರ್‌ಸ್ಟಾರ್ ತಾನೇ ಅನ್ನೋದನ್ನು ಸಾಬೀತು ಮಾಡಿದ್ದಾರೆ.
ರಜನಿಕಾಂತ್ ತನ್ನ 72ನೇ ವಯಸ್ಸಿನಲ್ಲೂ ಅದೇ ಖದರ್ ಉಳಿಸಿಕೊಂಡಿದ್ದಾರೆ. ಇಂದಿನ ಸ್ಟಾರ್ ನಟರಿಗೂ ಸೆಡ್ಡು ಹೊಡೆದು ನಿಂತಿದ್ದಾರೆ. ತಾನೇ ಬೇರೆ ತನ್ನ ಖದರೇ ಬೇರೆ ಅನ್ನೋದನ್ನು 'ಜೈಲರ್' ಮೂಲಕ ಸಾರಿ ಹೇಳಿದ್ದಾರೆ. ರಜನಿಕಾಂತ್ ಇನ್ನೂ ಕೆಲವು ವರ್ಷ ಬಾಕ್ಸಾಫೀಸ್‌ನಲ್ಲಿ ರಾರಾಜಿಸಬಹುದು ಅಂತ ಭವಿಷ್ಯ ನುಡಿಯುತ್ತಿದ್ದಾರೆ.

'ಜೈಲರ್' ಮೂಲಕ ಮತ್ತೆ ರಜನಿಕಾಂತ್ ದುಬಾರಿ ನಟ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಈ ಸಿನಿಮಾಗಾಗಿ ಸುಮಾರು 110 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಅಂತ ವರದಿಯಾಗಿತ್ತು. ಈಗ 'ಜೈಲರ್' ಗೆದ್ದ ಬೆನ್ನಲ್ಲೇ ಸೂಪರ್‌ಸ್ಟಾರ್ ರಜನಿಕಾಂತ್ 2023ರಲ್ಲಿ ಗಳಿಸಿದ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ತಲೈವಾ ಬಳಿ ಇರುವ ಒಟ್ಟು ಆಸ್ತಿ ಎಷ್ಟು?
ಶ್ರೀಮಂತ ನಟ.. ಸರಳ ವ್ಯಕ್ತಿತ್ವ
ಸೂಪರ್‌ಸ್ಟಾರ್ ರಜನಿಕಾಂತ್ ಭಾರತದ ಶ್ರೀಮಂತ ನಟ ಅನ್ನೋದರಲ್ಲಿ ಡೌಟೇ ಇಲ್ಲ. ರಜನಿ ನಟಿಸಿದ ಸಿನಿಮಾ ಗೆಲ್ಲಲಿ ಇಲ್ಲ ಸೋಲಲಿ ನೂರಾರು ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡುತ್ತಾರೆ. ಆದರೆ, ಅವರು ಪಡೆಯೋ ಸಂಭಾವನೆಗೆ ತಕ್ಕಂತೆ ಅವರ ಲೈಫ್ ಸ್ಟೈಲ್ ಇಲ್ಲ ಅನ್ನೋದೇ ವಿಶೇಷ. ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ತುಂಬಾನೇ ಸಿಂಪಲ್‌ಗಾಗಿ ಜೀವನ ನಡೆಸುತ್ತಾರೆ. ಇವರ ಸರಳ ವ್ಯಕ್ತಿತ್ವವೇ ಅದೆಷ್ಟೋ ಅಭಿಮಾನಿಗಳನ್ನು ಸೆಳೆದಿದೆ.

2023ಯಲ್ಲಿ ರಜನಿ ಗಳಿಸಿದ ಆಸ್ತಿ ಎಷ್ಟು?
2023 ಸೂಪರ್‌ಸ್ಟಾರ್ ರಜನಿಕಾಂತ್ ಪಾಲಿಗೆ ಅದೃಷ್ಟದ ವರ್ಷ. ಈ ವರ್ಷ ರಜನಿಗೆ ಸೂಪರ್ ಸಕ್ಸಸ್ ಸಿಕ್ಕಿದೆ. ಈ ಬೆನ್ನಲ್ಲೇ ರಜನಿಕಾಂತ್ ಒಟ್ಟು ಆಸ್ತಿ ಬಗ್ಗೆ ಹಲವು ಮಾಧ್ಯಮಗಳು ವರದಿಯಾಗಿವೆ. ರಜನಿ ಬಳಿ 430 ಕೋಟಿ ರೂ. ಆಸ್ತಿ ಇದೆ ಎಂದು ವರದಿ ಮಾಡಲಾಗಿದೆ. ಹಾಗೇ ಸೂಪರ್‌ಸ್ಟಾರ್ ಸಂಪಾಧಿಸಿದ ಒಟ್ಟು ಆಸ್ತಿಯಲ್ಲಿ ಬಹುಪಾಲನ್ನು ಸಮಾಜಮುಖಿ ಕೆಲಸಗಳಿಗೆ ಬಳಸುತ್ತಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆ, ರಜನಿ ಸಿನಿಮಾ ಸೋತರೆ, ನಿರ್ಮಾಪಕರ ನೆರವಿಗೆ ಬರುತ್ತಾರೆ. ಹೀಗಾಗಿ ತಾನು ದುಡಿದ ಹಣದಲ್ಲಿ ಹೆಚ್ಚು ಪಾಲನ್ನು ಸಾಮಾಜಿಕ ಕೆಲಸಗಳಿಗೆ ಬಳಸುತ್ತಾರೆ ಎನ್ನಲಾಗಿದೆ.
ಹಳೇ ಮನೆ.. ಮೂರೇ ಕಾರು
ರಜನಿಕಾಂತ್ 2002ರಲ್ಲಿ ಚೆನ್ನೈನಲ್ಲಿ ಮನೆಯನ್ನು ಕಟ್ಟಿದ್ದರು. ಈಗಲೂ ಅದೇ ಮನೆಯಲ್ಲಿ ವಾಸವಿದ್ದಾರೆ. ಇದರ ಬೆಲೆ 40 ರಿಂದ 50 ಲಕ್ಷ ರೂ. ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಚೆನ್ನೈನ ದುಬಾರಿ ಏರಿಯಾದಲ್ಲಿ ರಜನಿ ಬಂಗಲೆ ಇದ್ದು, ಕೋಟಿ ಬೆಲೆ ಬಾಳುತ್ತೆ. ಇನ್ನು ಸೂಪರ್‌ಸ್ಟಾರ್ ಬಳಿ ಕೇವಲ ಮೂರು ಕಾರುಗಳಿವೆಯಷ್ಟೇ. ರೇಂಜ್ ರೋವರ್, ಬೆಂಟ್ಲಿ ಹಾಗೂ ಇನ್ನೋವಾ. ರಜನಿ ಹಲವು ಬಾರಿ ಇನ್ನೋವಾ ಕಾರಿನಲ್ಲಿ ಓಡಾಡುವುದನ್ನು ಕಾಣಬಹುದಾಗಿದೆ.
ರಜನಿ ಹೂಡಿಕೆ ಮಾಡಿದ್ದೆಷ್ಟು?
ರಜನಿಕಾಂತ್ ಸುಮಾರು 100 ರಿಂದ 150 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ರಜನಿಕಾಂತ್ ತಮಿಳುನಾಡು ಹಾಗೂ ಚೆನ್ನೈನಲ್ಲಿ ಆಸ್ತಿಯನ್ನು ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ಸದ್ಯ 'ಜೈಲರ್' ಯಶಸ್ಸಿನ ಖುಷಿಯಲ್ಲಿರೋ ರಜನಿಕಾಂತ್ ಮುಂದಿನ ಸಿನಿಮಾ ಅನೌನ್ಸ್ ಮಾಡಬೇಕಿದೆ. ಇದೇ ವೇಳೆ ಸಂಭಾವನೆ ಹೆಚ್ಚಿಸಿಕೊಳ್ಳುತ್ತಾರಾ? ಅನ್ನೋ ಪ್ರಶ್ನೆನೂ ಕಾಡುತ್ತಿದೆ.


Click it and Unblock the Notifications











