Jailer: ಯಾವ ಊರಿನ ಯಾವ ಚಿತ್ರಮಂದಿರಗಳಲ್ಲಿ ಜೈಲರ್ ಕನ್ನಡ ವರ್ಷನ್ ಬಿಡುಗಡೆ? ಇಷ್ಟು ಶೋಸ್ ಸಾಕಾ?
ರಜನಿಕಾಂತ್ ನಟನೆಯ ಜೈಲರ್ ಬಿಡುಗಡೆಯಾಗಲು ತಯಾರಾಗಿರುವ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಕೊಲಮಾವು ಕೋಕಿಲ, ಡಾಕ್ಟರ್ ಹಾಗೂ ಬೀಸ್ಟ್ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ನೆಲ್ಸನ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಶುಕ್ರವಾರ ( ಆಗಸ್ಟ್ 10 ) ಚಿತ್ರ ಬೆಳ್ಳಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.
ಮೊದಲಿಗೆ ಕಾವಾಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ಸಾಮಾಜಿಕ ಜಾಲತಾಣದ ತುಂಬಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಜೈಲರ್ ಚಿತ್ರ ಬಳಿಕ ಚಿತ್ರದ ಟ್ರೈಲರ್ ರಿಲೀಸ್ ಮಾಡುವ ಮೂಲಕ ಹೈಪ್ ಹೆಚ್ಚಿಸಿದೆ. ಆಗಸ್ಟ್ 2ರಂದು ಜೈಲರ್‌ನ ಟ್ರೈಲರ್ ಬಿಡುಗಡೆಗೊಂಡಿತ್ತು. 2.15 ನಿಮಿಷದ ಈ ಟ್ರೈಲರ್ ಆರಂಭದಿಂದ ಅಂತ್ಯದವರೆಗೂ ಸಾಕಷ್ಟು ಮಾಸ್ ಅಂಶಗಳನ್ನು ಹೊಂದಿದ್ದು, ಟ್ರೈಲರ್ ವೀಕ್ಷಿಸಿದ ಸಿನಿ ರಸಿಕರು ಈ ಚಿತ್ರ ಗೆಲ್ಲುವುದು ಪಕ್ಕಾ ಎಂದು ಕಾಮೆಂಟ್ ಮಾಡಿದ್ದರು.

ಜೈಲರ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಮೂಲ ತಮಿಳು ಭಾಷೆಯ ಈ ಸಿನಿಮಾ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಅವತರಣಿಕೆಗಳಲ್ಲಿಯೂ ತೆರೆ ಕಾಣುತ್ತಿದೆ. ಇನ್ನು ಪ್ರತಿ ಪರಭಾಷಾ ಪ್ಯಾನ್ ಇಂಡಿಯಾ ಸಿನಿಮಾದ ಹಾಗೆ ಜೈಲರ್ ಸಹ ಕನ್ನಡ ವರ್ಷನ್‌ನಲ್ಲಿ ಹೆಚ್ಚು ಬಿಡುಗಡೆಯಾಗದೆ ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ. ಹೌದು, ಜೈಲರ್ ತಮಿಳು ವರ್ಷನ್‌ನ ಸಿನಿಮಾ ರಾಜ್ಯದಲ್ಲಿ ಹೆಚ್ಚಿನ ಶೋಗಳನ್ನು ಪಡೆದುಕೊಂಡಿದ್ದು, ಕನ್ನಡ ಅವತರಣಿಕೆ ಮಾತ್ರ ಬೆರಳೆಣಿಕೆಯಷ್ಟು ಪ್ರದರ್ಶನಗಳಿಗೆ ತೃಪ್ತಿಪಟ್ಟುಕೊಂಡಿದೆ.
ಬೆಂಗಳೂರಿನಲ್ಲಿ ಬಿಡುಗಡೆಯ ದಿನ ಜೈಲರ್ 1100ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡಿದ್ದು, ಈ ಪೈಕಿ ಕನ್ನಡ ವರ್ಷನ್‌ಗೆ ಕೇವಲ 16 ಪ್ರದರ್ಶನಗಳನ್ನು ನೀಡಲಾಗಿದೆ. ಹೌದು, ಬೆಂಗಳೂರಿನ ಕೇವಲ 6 ಚಿತ್ರಮಂದಿರಗಳಲ್ಲಿ ಜೈಲರ್ ಕನ್ನಡ ವರ್ಷನ್ ಮೊದಲ ದಿನ ಪ್ರದರ್ಶನಗೊಳ್ಳುತ್ತಿದೆ. ಗಾಂಧಿನಗರದ ಅಭಿನಯ ಚಿತ್ರಮಂದಿರದಲ್ಲಿ ಆರು ಪ್ರದರ್ಶನಗಳು, ಮೈಸೂರು ರಸ್ತೆಯ ಗೋಪಾಲನ್ ಸಿನಿಮಾಸ್‌ನಲ್ಲಿ ಒಂದು ಪ್ರದರ್ಶನ, ಸಿರಸಿ ಸರ್ಕಲ್‌ನ ಗೋಪಾಲನ್ ಸಿನಿಮಾಸ್‌ನಲ್ಲಿ ಒಂದು ಪ್ರದರ್ಶನ, ಕೆಂಗೇರಿಯ ರಾಬಿನ್ ಚಿತ್ರಮಂದಿರದಲ್ಲಿ ಮೂರು ಪ್ರದರ್ಶನಗಳು, ಗಿರಿನಗರದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ನಾಲ್ಕು ಪ್ರದರ್ಶನಗಳು ಹಾಗೂ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದಲ್ಲಿ ಒಂದು ಪ್ರದರ್ಶನವನ್ನು ಜೈಲರ್ ಕನ್ನಡ ವರ್ಷನ್ ಪಡೆದುಕೊಂಡಿದೆ.
ಇದು ಬೆಂಗಳೂರಿನ ಕಥೆಯಾದರೆ ಮೈಸೂರಿನಲ್ಲಿ ಬಿಡುಗಡೆಯ ದಿನ ಜೈಲರ್ ಡಿಆರ್‌ಸಿ ಸಿನಿಮಾಸ್‌ನಲ್ಲಿ ಒಂದು ಪ್ರದರ್ಶನ, ವಿಷನ್ ಸಿನಿಮಾಸ್‌ನಲ್ಲಿ ನಾಲ್ಕು ಪ್ರದರ್ಶನಗಳನ್ನು ಪಡೆದುಕೊಂಡಿದೆ. ಈ ಮೂಲಕ ಮೈಸೂರಿನಲ್ಲಿ ಒಟ್ಟು 5 ಪ್ರದರ್ಶನಗಳನ್ನು ಮಾತ್ರ ಜೈಲರ್ ಬಿಡುಗಡೆಯ ದಿನ ಪಡೆದುಕೊಂಡಿದೆ. ಶಿವಮೊಗ್ಗದ ಭಾರತ್ ಸಿನಿಮಾಸ್‌ನಲ್ಲಿ ಎರಡು ಪ್ರದರ್ಶನಗಳನ್ನು ಪಡೆದುಕೊಂಡಿರುವ ಜೈಲರ್ ಕನ್ನಡ ವರ್ಷನ್ ಹುಬ್ಬಳ್ಳಿಯ ಅಪ್ಸರ ಚಿತ್ರಮಂದಿರದಲ್ಲಿ ಎರಡು ಪ್ರದರ್ಶನಗಳನ್ನು ಪಡೆದುಕೊಂಡಿದೆ. ಹೀಗೆ ಕನ್ನಡ ವರ್ಷನ್‌ಗೆ ಕಡಿಮೆ ಸಂಖ್ಯೆಯ ಪ್ರದರ್ಶನಗಳು ಮಾತ್ರ ಲಭಿಸಿದ್ದು, ಜೈಲರ್ ತೆಲುಗು ವರ್ಷನ್‌ಗೆ ಬೆಂಗಳೂರಿನಲ್ಲಿ ಕನ್ನಡಕ್ಕಿಂತ ಹೆಚ್ಚಿನ ಶೋ ಸಿಕ್ಕಿರುವುದು ವಿಪರ್ಯಾಸವೇ ಸರಿ.


Click it and Unblock the Notifications











