Jailer: ಕರ್ನಾಟಕದಲ್ಲಿ 40 ಕೋಟಿ ದಾಟಿದ ಜೈಲರ್; 5 ದಿನಕ್ಕೆ ಚಿತ್ರ ಗಳಿಸಿದ ಲಾಭವೆಷ್ಟು?
ಜೈಲರ್ ಸದ್ಯ ಭಾರತದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸಿನಿಮಾ. ಈ ಹಿಂದೆ ಬೀಸ್ಟ್ ಸಿನಿಮಾ ಮೂಲಕ ಹೀನಾಯ ಸೋಲನ್ನು ಕಂಡಿದ್ದ ನಿರ್ದೇಶಕ ನೆಲ್ಸನ್ ಕುಮಾರ್ ನಿರ್ದೇಶನದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡ್ತಿದೆ. ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿದ್ದು, ಈ ಹಿಂದಿನ ಸಿನಿಮಾ ಅಣ್ಣಾತ್ತೆ ಮೂಲಕ ಕಂಡಿದ್ದ ಸೋಲಿನಿಂದ ಹೊರಬಂದು ದೊಡ್ಡ ಮಟ್ಟದಲ್ಲಿ ಕಮ್‌ಬ್ಯಾಕ್ ಮಾಡಿದ್ದಾರೆ.
ತನಿಖೆಯೊಂದರ ಹಿಂದೆ ಬೀಳುವ ತನ್ನ ಮಗ ಪೊಲೀಸ್ ಅಧಿಕಾರಿ ದಿಢೀರ್ ನಾಪತ್ತೆಯಾಗಲಿದ್ದು, ಆತನ ನಾಪತ್ತೆಗೆ ಕಾರಣರಾದವರನ್ನು ಬೆನ್ನತ್ತುವ ನಾಯಕ ಹೇಗೆ ಅವರನ್ನು ಹುಡುಕುತ್ತಾನೆ ಹಾಗೂ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದೇ ಜೈಲರ್ ಚಿತ್ರದ ಒನ್‌ಲೈನ್ ಸ್ಟೋರಿ. ಸಿಂಪಲ್ ಎನಿಸುವ ಕಥೆ ಇದ್ದರೂ ಸಹ ಈಗಿನ ಸಿನಿ ರಸಿಕರು ಇಷ್ಟಪಡುವಂತಹ ಸ್ಕ್ರೀನ್‌ಪ್ಲೇಯನ್ನು ಹೆಣೆದಿರುವ ನೆಲ್ಸನ್ ಕುಮಾರ್ ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ದೇಶದಲ್ಲಿ ಜೈಲರ್ ಮಾಡಿರುವ ಒಟ್ಟು ಗಳಿಕೆಯಲ್ಲಿ ಸಿಂಹಪಾಲು ತಮಿಳುನಾಡಿನ ಬಾಕ್ಸ್ ಆಫೀಸ್‌ನದ್ದಾದರೆ, ಎರಡನೇ ಸ್ಥಾನ ಕರ್ನಾಟಕದ ಪಾಲು. ಹೌದು, ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಓಪನಿಂಗ್ ಪಡೆದುಕೊಂಡಿದ್ದ ಜೈಲರ್ ಮೊದಲ 5 ದಿನಗಳಲ್ಲಿ 36.05 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಈ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರದ ಬಳಿಕ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದೆ.
ಇನ್ನು ಜೈಲರ್ ಚಿತ್ರದ ಕರ್ನಾಟಕ ವಿತರಣಾ ಹಕ್ಕನ್ನು ವೆಂಕೆಟ್ ಮೀಡಿಯಾ ಸಂಸ್ಥೆ ಬರೋಬ್ಬರಿ 10 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ಜೈಲರ್ 5 ದಿನಗಳ ಬಳಿಕ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ 18.7 ಕೋಟಿ ಶೇರ್ ಕಲೆಕ್ಷನ್ ಅನ್ನು ಮಾಡಿದೆ. ಈ ಮೂಲಕ ಜೈಲರ್ ಈಗಾಗಲೇ 8 ಕೋಟಿಗೂ ಅಧಿಕ ಲಾಭ ಗಳಿಸಿದ್ದು, ನಿನ್ನೆ ( ಆಗಸ್ಟ್ 15 ) ಆರನೇ ದಿನದಂದೂ ಸಹ ಉತ್ತಮ ಗಳಿಕೆ ಮಾಡಿದೆ. ಹೌದು, ನಿನ್ನೆ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ರಜಾ ದಿನವಾದ್ದರಿಂದ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಒಳ್ಳೆಯ ಕಲೆಕ್ಷನ್ ಆಗಿದ್ದು ಜೈಲರ್ ತೆಕ್ಕೆಗೆ ಮತ್ರಷ್ಟು ಕೋಟಿಗಳು ಸೇರುವುದಂತೂ ಖಚಿತ.


Click it and Unblock the Notifications











