Jailer: ಥಿಯೇಟರ್‌ನಲ್ಲಿಯೇ ಹಾಡು ಹೇಳಿ ಸಂಭ್ರಮಿಸಿದ 'ಜೈಲರ್' ಸಂಗೀತ ನಿರ್ದೇಶಕ!
ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಜೈಲರ್' ಆಗಸ್ಟ್ 10 ರಂದು ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟಿದೆ. ಅಭಿಮಾನಿಗಳು ಬೆಳಕು ಹರಿಯುವ ಮುನ್ನವೆ ಥಿಯೇಟರ್‌ಗಳ ಬಳಿ ಜಮಾಯಿಸಿದ್ದರು. ಸೂಪರ್‌ಸ್ಟಾರ್ ಸಿನಿಮಾ ಬಿಡುಗಡೆಯನ್ನು ದೇಶಾದ್ಯಂತ ಅದ್ಧೂರಿಯಾಗಿ ಆಚರಿಸಲಾಗಿದೆ. ಬೆಂಗಳೂರಿನಲ್ಲಿಯೂ ಜೈಲರ್ ಆರ್ಭಟ ಜೋರಾಗಿತ್ತು.
ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ಜೈಲರ್' ಚಿತ್ರಕ್ಕೆ ಗಾಯಕ ಅನಿರುದ್ಧ ರವಿಚಂದರ್ ಸಂಗೀತ ನಿರ್ದೇಶನ ನೀಡಿದ್ದಾರೆ. ಸಿನಿಮಾ ಬಿಡುಗಡೆಯನ್ನು ಸಂಭ್ರಮಿಸಿರುವ ಅವರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಚೆನ್ನೈನ ಥಿಯೇಟರ್ ಒಂದರಲ್ಲಿ ಅನಿರುದ್ಧ್ ಜೈಲರ್ ಸಿನಿಮಾ ಹಾಡು ಹಾಡುತ್ತಿರುವುದನ್ನು ನೋಡಬಹುದು.

'ಜೈಲರ್' ಮೊದಲ ದಿನದ ಮೊದಲ ಪ್ರದರ್ಶನದಲ್ಲಿ ಅನಿರುದ್ಧ್ ರವಿಚಂದರ್ ಸಂಭ್ರಮ
ಬಹುನಿರೀಕ್ಷಿತ 'ಜೈಲರ್' ಚಿತ್ರ ಬಿಡುಗಡೆಗೆ ಮುನ್ನವೇ, ರಜನಿಕಾಂತ್ ಹಿಮಾಲಯಕ್ಕೆ ಪ್ರಯಾಣ ಬೆಳೆಸಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಪ್ರಾರ್ಥನೆ ಸಲ್ಲಿಸುವುದರಿಂದ ಹಿಡಿದು ಪಟಾಕಿ ಸಿಡಿಸುವವರೆಗೆ ಅಭಿಮಾನಿಗಳು ತಲೈವಾ ಸಿನಿಮಾವನ್ನು ತಲೆಯ ಮೇಲೆ ಹೊತ್ತು ಸಾಗಿದ್ದಾರೆ. ಜೈಲರ್ ಬಿಡುಗಡೆಯನ್ನು ರಜನಿಕಾಂತ್‌ಗಿಂತ ಹೆಚ್ಚಾಗಿ ಸಂಭ್ರಮಿಸಿದ್ದಾರೆ.
ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಚೆನ್ನೈನಲ್ಲಿ ಮೊದಲ ದಿನದ ಮೊದಲ ಪ್ರದರ್ಶನ ನೋಡಲು ಹೋಗಿದ್ದು, ಸಿನಿಮಾ ಪ್ರದರ್ಶನದ ಬಳಿಕ ಅಭಿಮಾನಿಗಳ ಜೊತೆಗೆ ಚಿತ್ರದ ಹಾಡು ಹಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಗಾಯಕ ಅನಿರುದ್ಧ್ ರವಿಚಂದರ್ ಅವರು ಚೆನ್ನೈನ ವೆಟ್ರಿ ಥಿಯೇಟರ್‌ನಲ್ಲಿ ಜೈಲರ್ ಹಾಡುಗಳನ್ನು ಲೈವ್ ಆಗಿ ಹಾಡಿದ್ದಾರೆ.

ಸಿನಿಮಾ ವಿಶ್ಲೇಷಕ ಅಮುತಾ ಭಾರತಿ ಅವರು ಟ್ವಿಟರ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. "ಅನಿರುದ್ಧ್ ಅವರು ವೆಟ್ರಿ ಥಿಯೇಟರ್‌ನಲ್ಲಿ ಜೈಲರ್ ಮೊದಲ ದಿನದ ಮೊದಲ ಪ್ರದರ್ಶನದಲ್ಲಿ ಸಂಗೀತ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ವಾಟ್ ಎ ಡೆಡಿಕೇಷನ್" ಎಂದು ಹೇಳಿದ್ದಾರೆ.
ಇನ್ನು, ಚೆನ್ನೈನಲ್ಲಿ ಕೈಯಲ್ಲಿ ಜೈಲರ್ ಸಿನಿಮಾದ ಪೋಸ್ಟರ್ ಹಿಡಿದು, ರಜನಿಕಾಂತ್ ಸಿನಿಮಾಗಳ ಬಗ್ಗೆ ಮಾತನಾಡುತ್ತಾ ಇದ್ದ ಜಪಾನ್ ದಂಪತಿ ಕಾಣಿಸಿಕೊಂಡಿದ್ದಾರೆ. ಜಪಾನ್‌ನಿಂದ ಬಂದಿದ್ದ ಯಸುದಾ ಹಿಡೆತೋಶಿ ದಂಪತಿ, ತಾವು ರಜನಿಕಾಂತ್ ಅವರ ಬಿಗ್ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಜೈಲರ್ ಚಿತ್ರವನ್ನು ನೋಡಲು, ನಾವು ಜಪಾನ್‌ನಿಂದ ಚೆನ್ನೈಗೆ ಬಂದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದಲ್ಲದೇ ತಾವು ಜಪಾನ್‌ನಲ್ಲಿರುವ ರಜನಿಕಾಂತ್ ಅಭಿಮಾನಿಗಳ ಸಂಘದ ನಾಯಕ ಎಂದು ಯಸುದಾ ಹಿಡೆತೋಶಿ ಹೇಳಿದ್ದಾರೆ.
ರಜನಿಕಾಂತ್‌ರ 'ಜೈಲರ್'
ರಜನಿಕಾಂತ್ ಅವರ ಜೈಲರ್ ವರ್ಷದ ಬಹು ನಿರೀಕ್ಷಿತ ತಮಿಳು ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವನ್ನು ನೆಲ್ಸನ್ ನಿರ್ದೇಶಿಸಿದ್ದಾರೆ ಮತ್ತು ಜಾಕಿ ಶ್ರಾಫ್, ಮೋಹನ್ ಲಾಲ್ ಮತ್ತು ಶಿವರಾಜ್ ಕುಮಾರ್ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ತಮನ್ನಾ ಭಾಟಿಯಾ, ವಿನಾಯಕನ್ ಸೇರಿದಂತೆ ಹಲವರು ಚಿತ್ರದ ಭಾಗವಾಗಿದ್ದಾರೆ. 'ಜೈಲರ್' ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. 'ಕಾವಲಾ' ಮತ್ತು 'ಹುಕುಂ' ಎರಡು ಹಾಡುಗಳು ಈಗಾಗಲೇ ಹಿಟ್ ಆಗಿವೆ. ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಬಂದಿದ್ದು, ಒಂದು ದಿನದಲ್ಲಿಯೇ 50 ಕೋಟಿ ಗಳಿಸುವ ಸಾಧ್ಯತೆಯಿದೆ.


Click it and Unblock the Notifications











