Sun Pictures: 'ಜೈಲರ್' ಲಾಭದಲ್ಲಿ ಬಡ ರೋಗಿಗಳಿಗೆ ಕೋಟಿ ಕೋಟಿ ನೆರವು: ನಿರ್ಮಾಪಕರಿಂದ ಚೆಕ್ ವಿತರಣೆ
ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಓಟಿಟಿಗೆ ಬಂದ್ರು ಥಿಯೇಟರ್‌ಗಳಲ್ಲಿ ಆರ್ಭಟ ನಿಂತಿಲ್ಲ. ಇನ್ನು 'ಜೈಲರ್' ಬ್ಲಾಕ್‌ಬಸ್ಟರ್ ಸಕ್ಸಸ್ ಸಂಭ್ರಮಾಚರಣೆ ಮುಂದುವರೆದಿದೆ. ಚಿತ್ರದಿಂದ ದೊಡ್ಡಮಟ್ಟದಲ್ಲಿ ನಿರ್ಮಾಪಕರಿಗೆ ಲಾಭ ಬಂದಿದೆ. ಅದರಲ್ಲಿ ಕೊಂಚ ಪಾಲನ್ನು ಚಿತ್ರತಂಡಕ್ಕೆ ನಿರ್ಮಾಪಕರು ಹಂಚಿದ್ದಾರೆ. ಅಷ್ಟೇ ಅಲ್ಲ ಬಡ ರೋಗಿಗಳ ಚಿಕಿತ್ಸೆಗೆ ನೆರವು ನೀಡುತ್ತಿದ್ದಾರೆ.
ನೆಲ್ಸನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಜೈಲರ್' ಸಿನಿಮಾ ಆಗಸ್ಟ್ 10ಕ್ಕೆ ರಿಲೀಸ್ ಆಗಿತ್ತು. ಎಲ್ಲರ ನಿರೀಕ್ಷೆ ಮೀರಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡ್ತಿದೆ. ಕಲಾವಿದರ ಸಂಭಾವನೆ ಬಿಟ್ಟರೆ ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ಖರ್ಚು ಆಗಿಲ್ಲ. ಹಾಗಾಗಿ ಸನ್ ಪಿಕ್ಚರ್ಸ್ ಸಂಸ್ಥೆ ಬಹಳ ಲಾಭದಲ್ಲಿದೆ.

ಚಿತ್ರವನ್ನು ದೊಡ್ಡಮಟ್ಟದಲ್ಲಿ ಗೆಲ್ಲಿಸಿದ ತಂಡಕ್ಕೆ ಲಾಭ ಪಾಲನ್ನು ನಿರ್ಮಾಪಕರು ನೀಡುತ್ತಿದ್ದಾರೆ. ಲಾಭ ಪಾಲಿನ ಚೆಕ್ ಜೊತೆಗೆ ದುಬಾರಿ ಉಡುಗೊರೆ ಕೂಡ ಸಿಗುತ್ತಿದೆ. ತಲೈವಾಗೆ ಭಾರೀ ಮೊತ್ತದ ಚೆಕ್ ಜೊತೆಗೆ ಬಿಎಂಡಬ್ಲ್ಯೂ ಕಾರನ್ನು ನಿರ್ಮಾಪಕ ಕಲಾನಿಧಿ ಮಾರನ್ ಉಡುಗೊರೆಯಾಗಿ ಕೊಟ್ಟಿದ್ದರು. ಇನ್ನು ನಿರ್ದೇಶಕ ನೆಲ್ಸನ್ ಹಾಗೂ ಸಂಗೀತ ನಿರ್ದೇಶನ ಅನಿರುದ್ದ್ ರವಿಚಂದರ್‌ಗೆ ಚೆಕ್ ಜೊತೆಗೆ ಪೋರ್ಷ್ ಕಾರುಗಳು ಉಡುಗೊರೆ ಆಗಿ ಸಿಕ್ಕಿತ್ತು. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋ ವೈರಲ್ ಆಗುತ್ತಿದೆ.
ಇದೀಗ 'ಜೈಲರ್' ಸಿನಿಮಾ ನಿರ್ಮಾಪಕರು ಬಡ ರೋಗಿಗಳ ಚಿಕಿತ್ಸೆಗೆ ನೆರವು ನೀಡಲು ಮುಂದಾಗಿದ್ದಾರೆ. ಇತ್ತೀಚೆಗೆ 100 ಮಂದಿ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಅಪೋಲೊ ಆಸ್ಪತ್ರೆಗೆ 1 ಕೋಟಿ ರೂ. ಮೊತ್ತವನ್ನು ನಿರ್ಮಾಪಕರು ದೇಣಿಗೆ ನೀಡಿದ್ದರು. 'ಜೈಲರ್' ಸಿನಿಮಾ ನಿರ್ಮಾಪಕ ಕಲಾನಿಧಿ ಮಾರನ್ ಪತ್ನಿ ಕಾವೇರಿ, ಅಪೋಲೋ ಸಮೂಹ ಸಂಸ್ಥೆಯ ಚೇರ್ಮನ್ ಡಾ. ಪ್ರತಾಪ್ ರೆಡ್ಡಿಗೆ ಚೆಕ್ ನೀಡಿದ್ದರು.
ಅಪೋಲೊ ಆಸ್ಪತ್ರೆ ಬಳಿಕ ಅಡ್ಯಾನ್ ಕ್ಯಾನ್ಸರ್ ಇನ್ಸಿಟ್ಯೂಟ್‌ಗೆ 60 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಕಲ್ಪನಾ ಬಾಲಕೃಷ್ಣನ್ ಹಾಗೂ ಹೇಮಂತ್ ರಾಜಾಗೆ ನೆರವಿನ ಚೆಕ್ ಹಸ್ತಾಂತರ ಮಾಡಿದ್ದಾರೆ. ಸಾಮಾನ್ಯವಾಗಿ ನಿರ್ಮಾಪಕರು ಸಿನಿಮಾಗಳಿಂದ ಭಾರೀ ಮೊತ್ತದಲ್ಲಿ ಲಾಭ ಮಾಡುತ್ತಾರೆ. ಕೆಲವರು ಮಾತ್ರ ಚಿತ್ರತಂಡಕ್ಕೆ ಹೆಚ್ಚಿನ ಸಂಭಾವನೆ, ಉಡುಗೊರೆ ನೀಡುತ್ತಾರೆ. ಆದರೆ ಸನ್ ಪಿಕ್ಚರ್ಸ್ ಸಂಸ್ಥೆ ಅದರ ಜೊತೆ ಬಡ ರೋಗಿಗಳ ನೆರವಿಗೆ ನಿಂತಿರುವುದು ಮೆಚ್ಚುವಂಥದ್ದು ಎಂದು ಸಿನಿರಸಿಕರು ಕೊಂಡಾಡುತ್ತಿದ್ದಾರೆ.
'ಜೈಲರ್' ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಶಿವರಾಜ್‌ಕುಮಾರ್, ಮೋಹನ್ ಲಾಲ್, ರಮ್ಯಾಕೃಷ್ಣನ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದರು. ರಜನಿಕಾಂತ್ ಸ್ಟೈಲ್, ಪರ್ಫಾರ್ಮೆನ್ಸ್ ಸಿನಿರಸಿಕರಿಗೆ ಇಷ್ಟವಾಗಿತ್ತು. ಇನ್ನು ಶಿವಣ್ಣ ಗೆಸ್ಟ್ ಅಪಿಯರೆನ್ಸ್ ಚಿತ್ರಕ್ಕೆ ಪ್ಲಸ್ ಆಗಿದೆ. ಅನಿರುದ್ಧ್ ರವಿಚಂದರ್ ಸಂಗೀತ ಮತ್ತೊಂದು ಹೈಲೆಟ್. ಎಲ್ಲಾ ಸೇರಿ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗಿದೆ.
ಶಿವರಾಜ್‌ಕುಮಾರ್ ಹಾಗೂ ಮೋಹನ್ ಲಾಲ್‌ಗೂ ನಿರ್ಮಾಪಕರು ಉಡುಗೊರೆ ಜೊತೆಗೆ ಮತ್ತೊಂದು ಚೆಕ್ ನೀಡುತ್ತಾರಾ? ಎನ್ನುವ ಚರ್ಚೆ ನಡೀತಿದೆ. ಸಿಂಪಲ್ ಕಥೆಯನ್ನು ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟು 'ಜೈಲರ್' ಚಿತ್ರತಂಡ ಸಕ್ಸಸ್ ಕಂಡಿದೆ.
ಬರೀ ಓಟಿಟಿ ರೈಟ್ಸ್‌ನಿಂದಲೇ 100 ಕೋಟಿ ರೂ. ಸಿಕ್ಕಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಆದರೂ ಕೂಡ ಕೆಲವೆಡೆ ಸಿನಿಮಾ ಇನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ. ರಜನಿಕಾಂತ್ ಕಾಂಬಿನೇಷನ್‌ನಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ ಮತ್ತೊಂದು ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದೆ.


Click it and Unblock the Notifications











