Rajinikanth: ಯುಪಿ ಸಿಎಂ ಯೋಗಿ ಕಾಲಿಗೆ ಎರಗಿದ ವಿವಾದಕ್ಕೆ ಸ್ಪಷ್ಟನೆ ನೀಡಿದ ತಲೈವಾ
'ಜೈಲರ್' ಸಿನಿಮಾ ಬಿಡುಗಡೆಗೂ ಮುನ್ನ ಉತ್ತರಭಾರತ ಪ್ರವಾಸ ಕೈಗೊಂಡಿದ್ದ ನಟ ರಜನಿಕಾಂತ್ ಚೆನ್ನೈಗೆ ವಾಪಸ್ ಆಗಿದ್ದಾರೆ. ಈ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಪ್ರವಾಸದ ವೇಳೆ ತಲೈವಾ ಹಿಮಾಲಯಕ್ಕೆ ತೆರಳಿದ್ದರು. ತಮ್ಮ ಆಧ್ಯಾತ್ಮ ಗುರುಗಳನ್ನು ಭೇಟಿ ಮಾಡಿ ಬಂದಿದ್ದಾರೆ.
ಹಿಮಾಲಯದಿಂದ ವಾಪಸ್ ಬರುವಾಗ ರಜನಿಕಾಂತ್ ಒಂದಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಶನಿವಾರ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಅವರ ಕಾಲಿಗೆ ಎರಗಿ ತಲೈವಾ ಆಶಿರ್ವಾದ ಪಡೆದಿದ್ದರು. ಬಳಿಕ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಜೊತೆ 'ಜೈಲರ್' ಸಿನಿಮಾ ವೀಕ್ಷಿಸಿದ್ದರು. ಈ ವಿಚಾರ ಭಾರೀ ಸುದ್ದಿಯಾಗಿತ್ತು. ರಜನಿಕಾಂತ್ ಯುಪಿ ಸಿಎಂ ಪಾದಕ್ಕೆ ಎರಗಿದ್ದು ಭಾರೀ ಚರ್ಚೆ ಹುಟ್ಟುಹಾಕಿತ್ತು.

ರಜನಿಕಾಂತ್ ಖ್ಯಾತ ನಟ. ವಯಸ್ಸಿನಲ್ಲೂ ಯೋಗಿ ಆದಿತ್ಯಾನಾಥ್‌ಗಿಂತ 21 ವರ್ಷ ದೊಡ್ಡವರು. ಹಾಗಿದ್ದರೂ ತಲೈವಾ ಹೋಗಿ ಯೋಗಿ ಆದಿತ್ಯಾನಾಥ್ ಕಾಲಿಗೆ ಬಿದ್ದಿದ್ದು ಸರಿಯಲ್ಲ ಎಂದು ಕೆಲವರು ಟ್ರೋಲ್ ಮಾಡಿದ್ದರು. ರಜನಿಕಾಂತ್ ತಮ್ಮ ಸ್ವಾಭಿಮಾನವನ್ನು ಯುಪಿ ಸಿಎಂ ಕಾಲಡಿ ಇಟ್ಟಿದ್ದಾರೆ. ಅಂತೆಲ್ಲಾ ಬೇಸರ ವ್ಯಕ್ತಪಡಿಸಿದ್ದರು. ಚೆನ್ನೈಗೆ ವಾಪಸ್ ಆಗಿರುವ ತಲೈವಾ ವಿಮಾನ ನಿಲ್ದಾಣದಲ್ಲಿ ಈ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.
"ಒಬ್ಬ ಸನ್ಯಾಸಿ ಅಥವಾ ಯೋಗಿ, ವಯಸ್ಸಿನಲ್ಲಿ ನನಗಿಂತ ಚಿಕ್ಕವರಾಗಿದ್ದರೂ ಅವರ ಪಾದಕ್ಕೆರಗಿ ಆಶಿರ್ವಾದ ಪಡೆಯುವುದು ನನ್ನ ಅಭ್ಯಾಸ. ನಾನು ಅದನ್ನೇ ಮಾಡಿದ್ದೇನೆ" ಎಂದು ರಜನಿಕಾಂತ್ ಹೇಳಿದ್ದಾರೆ. ಇನ್ನು 'ಜೈಲರ್' ಚಿತ್ರವನ್ನು ದೊಡ್ಡಮಟ್ಟದಲ್ಲಿ ಗೆಲ್ಲಿಸಿದ ತಮಿಳುನಾಡಿ ಜನತೆ ಹಾಗೂ ಇತರೆ ರಾಜ್ಯ, ದೇಶಗಳ ಜನರಿಗೆ ಧನ್ಯವಾದ" ಎಂದು ರಜನಿಕಾಂತ್ ಹೇಳಿದ್ದಾರೆ.
ಇನ್ನು ರಜನಿಕಾಂತ್ ತಮ್ಮ ಉತ್ತರ ಭಾರತ ಪ್ರವಾಸದ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭೇಟಿ ಮಾಡಿದ್ದರು. 9 ವರ್ಷಗಳ ಬಳಿಕ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದಾಗಿ ರಜನಿಕಾಂತ್ ಹೇಳಿದ್ದರು. ನಾವಿಬ್ಬರು ಒಳ್ಳೆ ಸ್ನೇಹಿತರು. ಫೋನ್‌ನಲ್ಲಿ ಮಾತನಾಡುತ್ತಿರುತ್ತೇವೆ. ಈಗ ಭೇಟಿಯ ಅವಕಾಶ ಸಿಕ್ಕಿದೆ ಎಂದಿದ್ದರು.
ತಲೈವಾ ಭೇಟಿ ಬಳಿಕ ಅಖಿಲೇಶ್ ಯಾದವ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. "ಮೈಸೂರಿನಲ್ಲಿ ಇಂಜಿನಿಯರಿಂಗ್ ಓದುವಾಗ ರಜನಿಕಾಂತ್ ಅವರನ್ನು ತೆರೆಮೇಲೆ ನೋಡಿದ ಖುಷಿ ಈಗಲೂ ಇದೆ. 9 ವರ್ಷಗಳ ಬಳಿಕ ಭೇಟಿ ಆದೆವು. ಆ ಸ್ನೇಹ ಹಾಗೆಯೇ ಉಳಿದಿದೆ ಎಂದಿದ್ದರು.
ಸದ್ಯ 'ಜೈಲರ್' ಸಿನಿಮಾ 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ನೆಲ್ಸನ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಸ್ಟ್ 10ಕ್ಕೆ ರಿಲೀಸ್ ಆಗಿತ್ತು. ಇನ್ನು ಚಿತ್ರದಲ್ಲಿ ಶಿವಣ್ಣ, ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ಅಬ್ಬರಿಸಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿದೆ.

ಇತ್ತೀಚಿನ ವರ್ಷಗಳ ಒಂದೊಳ್ಳೆ ಬ್ರೇಕ್‌ಗಾಗಿ ರಜನಿಕಾಂತ್ ಕಾಯುತ್ತಿದ್ದರು. 'ಜೈಲರ್' ಆಗಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಇದೀಗ ಮತ್ತೆರಡು ಸಿನಿಮಾಗಳಲ್ಲಿ ತಲೈವಾ ನಟಿಸುತ್ತಿದ್ದಾರೆ. ಮಗಳು ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು ಜ್ಞಾನವೇಲ್ ನಿರ್ದೇಶನದ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಎರಡು ಸಿನಿಮಾ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ತೆರೆಗೆ ಬರಲಿದೆ.


Click it and Unblock the Notifications











