Jailer: ತಲೈವಾ ಮನೆಮುಂದೆ 2 BMW ಕಾರು ನಿಲ್ಲಿಸಿ ಯಾವ್ದು ಬೇಕೋ ತಗೊಳ್ಳಿ ಎಂದ ನಿರ್ಮಾಪಕ
ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಯ ಪ್ರದರ್ಶನ ಮುಂದುವರೆಸಿದೆ. ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ ಸಿನಿಮಾ ಈಗಾಗಲೇ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇತ್ತೀಚೆಗೆ ತಲೈವಾ ಚಿತ್ರತಂಡದ ಜೊತೆ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದರು. ಈ ಸಂಭ್ರಮಾಚರಣೆ ಮುಂದುವರೆದಿದೆ. ಪಡೆಯಪ್ಪಗೆ ನಿರ್ಮಾಪಕರಿಂದ ಭರ್ಜರಿ ಉಡುಗೊರೆ ಸಿಕ್ಕಿದೆ.
'ಜೈಲರ್' ಸಿನಿಮಾ ಸಕ್ಸಸ್ ಖುಷಿಯಲ್ಲಿ ತಲೈವಾಗೆ ನಿರ್ಮಾಪಕ ಕಲೈನಿಧಿ ಮಾರನ್ ಸಂಭಾವನೆಯ ಮತ್ತೊಂದು ಚೆಕ್ ನೀಡಿದ್ದರು. ಇದೀಗ ಐಷಾರಾಮಿ ಬಿಎಂಡಬ್ಲೂ ಕಾರು ಉಡುಗೊರೆ ನೀಡಿದ್ದಾರೆ. ಅದನ್ನು ಅಧಿಕೃತವಾಗಿ ಸನ್ ಪಿಕ್ಚರ್ಸ್ ಸಂಸ್ಥೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಬ್ಯಾನರ್‌ನಲ್ಲಿ ಈವರೆಗೆ ನಿರ್ಮಾಣವಾದ ಸಿನಿಮಾಗಳಲ್ಲಿ 'ಜೈಲರ್' ಅತಿಹೆಚ್ಚು ಲಾಭ ತಂದುಕೊಟ್ಟಿರುವ ಕಾರಣ ನಿರ್ಮಾಪಕರು ಖುಷಿಯಾಗಿದ್ದಾರೆ. ಆ ಖುಷಿಯಲ್ಲಿ ಈ ರೀತಿ ಹಂಚಿಕೊಳ್ಳುತ್ತಿದ್ದಾರೆ.

ನಿರ್ದೇಶಕ ನೆಲ್ಸನ್ ಸೇರಿದಂತೆ 'ಜೈಲರ್' ಚಿತ್ರದಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರಿಗೂ ಶೀಘ್ರದಲ್ಲೇ ಉಡುಗೊರೆ ಸಿಗುವ ಸಾಧ್ಯತೆಯಿದೆ. ಪೋಸಯ್ ಗಾರ್ಡನ್‌ನಲ್ಲಿರುವ ರಜನಿಕಾಂತ್ ಮನೆ ಮುಂದೆ ಬಿಎಂಡಬ್ಲೂ ಬ್ರ್ಯಾಂಡ್‌ನ 2 ಕಾರುಗಳನ್ನು ತಂದು ನಿಲ್ಲಿಸಿದ ಕಲಾನಿಧೀ ಮಾರನ್ ನಿಮಗೆ ಯಾವುದು ಬೇಕೋ ಆಯ್ಕೆ ಮಾಡಿಕೊಳ್ಳಿ ಎಂದು ತಲೈವಾಗೆ ಹೇಳಿದ್ದಾರೆ. ಸೂಪರ್ ಸ್ಟಾರ್ ಬಿಎಂಡಬ್ಲೂ ಎಕ್ಸ್7 ಕಾರು ಆಯ್ಕೆ ಮಾಡಿಕೊಂಡಿದ್ದಾರೆ. ಸದ್ಯ ಆ ವಿಡಿಯೋ ವೈರಲ್ ಆಗುತ್ತಿದೆ.
ಆಕ್ಷನ್ ಎಂಟರ್‌ಟೈನರ್ 'ಜೈಲರ್' ಸಿನಿಮಾ ಆಗಸ್ಟ್ 10ರಂದು ಬಿಡುಗಡೆಯಾಗಿತ್ತು. ಮೊದಲ ಶೋನಿಂದಲೇ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದ್ದ ಸಿನಿಮಾ ನೋಡ ನೋಡುತ್ತಲೇ ಎಲ್ಲಾ ಕಡೆ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣಲು ಶುರುವಾಯಿತು. ದೇಶ ವಿದೇಶಗಳಲ್ಲೂ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಾ ಮುಂದೆ ಸಾಗಿದೆ. ರಜನಿಕಾಂತ್ ಸ್ಟೈಲ್, ಪರ್ಫಾರ್ಮನ್ಸ್, ಶಿವಣ್ಣ ಹಾಗೂ ಮೋಹನ್ ಲಾಲ್ ಗೆಸ್ಟ್ ಅಪಿಯರೆನ್ಸ್ ಚಿತ್ರಕ್ಕೆ ಪ್ಲಸ್ ಆಗಿದೆ. ಇನ್ನು ಅನಿರುದ್ಧ್ ಮ್ಯೂಸಿಕ್ ಚಿತ್ರಕ್ಕೆ ಮತ್ತಷ್ಟು ಬಲ ತುಂಬಿದೆ.
'ಜೈಲರ್' ಸಿನಿಮಾ ಕನ್ನಡಕ್ಕೂ ಡಬ್ ಆಗಿ 5 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಒಟ್ಟಾರೆ ಕರ್ನಾಟಕದಲ್ಲಿ ಸಿನಿಮಾ ಗಳಿಕೆ 50 ಕೋಟಿ ರೂ. ಗಡಿ ದಾಟಿದೆ. ಸಿನಿಮಾ ರಿಲೀಸ್ ಆಗಿ 20 ದಿನ ಕಳೆದರೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಿರ್ಮಾಪಕ ಕಲೈನಿಧಿ ಮಾರನ್ ಇತ್ತೀಚಿಗೆ ರಜನಿಕಾಂತ್‌ಗೆ ಚೆಕ್ ಒಂದನ್ನು ನೀಡಿದ್ದರು. ಚಿತ್ರದಿಂದ ಬಂದ ಲಾಭದ ಭಾಗವನ್ನು ನೀಡಿದ್ದಾರೆ ಎಂದು ಕಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ.
ಇನ್ನು ನಿರ್ಮಾಪಕರು ರಜನಿಕಾಂತ್‌ಗೆ ನೀಡಿರುವ ಬಿಎಂಡಬ್ಲೂ ಎಕ್ಸ್7 ಬೆಲೆ 1.50 ಕೋಟಿ ರೂ.ಗೂ ಹೆಚ್ಚು ಎನ್ನಲಾಗುತ್ತಿದೆ. ಈಗಾಗಲೇ ರಜನಿಕಾಂತ್ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿವೆ. ಆ ಸಾಲಿಗೆ ಹೊಸ ಸೇರ್ಪಡೆ ಬಿಎಂಡಬ್ಲೂ ಎಕ್ಸ್7. ಇನ್ನು ರಜನಿಕಾಂತ್ ಮನೆ ಮುಂದೆ ನಿಲ್ಲಿಸಿದ ಮತ್ತೊಂದು ಕಾರ್ ಬಿಎಂಡಬ್ಲೂ ಐ7 ಬೆಲೆ 2 ಕೋಟಿ ರೂ. ಎಂದು ಅಂದಾಜಿಸಲಾಗುತ್ತಿದೆ. ತಲೈವಾ 20 ಲಕ್ಷ ಕಡಿಮೆ ಬೆಲೆಯ ಕಾರ್ ಆಯ್ಕೆ ಮಾಡಿಕೊಂಡ್ರಾ? ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.
'ಜೈಲರ್' ಬಳಿಕ ರಜನಿಕಾಂತ್ 'ಲಾಲ್ ಸಲಾಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶನದ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಸೂಪರ್ ಸ್ಟಾರ್ ಬಣ್ಣ ಹಚ್ಚಿದ್ದಾರೆ. ಲೈಕಾ ಸಂಸ್ಥೆಯ ಮತ್ತೊಂದು ಚಿತ್ರದಲ್ಲೂ ತಲೈವಾ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರವನ್ನು ಜ್ಞಾನವೇಲ್ ನಿರ್ದೇಶನ ಮಾಡಲಿದ್ದು ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. 2 ಎರಡೂ ಚಿತ್ರಕ್ಕೂ ಸೇರಿ ಲೈಕಾ ಸಂಸ್ಥೆ ಬಳಿ ರಜನಿಕಾಂತ್ 200 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











