Jailer: ರಜನಿಕಾಂತ್ ಜೈಲರ್‌ಗೆ ಮತ್ತೊಂದು ಜೈಲರ್ ಚಿತ್ರದ ಟಕ್ಕರ್; ಎರಡೂ ಚಿತ್ರಗಳೂ ಒಂದೇ ದಿನ ರಿಲೀಸ್!
ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಚಿತ್ರ ಸಹ ಒಂದು. ಕೊಲಮಾವು ಕೋಕಿಲ, ಡಾಕ್ಟರ್ ಹಾಗೂ ಬೀಸ್ಟ್ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ನೆಲ್ಸನ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರದ ಟೀಸರ್ ಹಾಗೂ ಹಾಡುಗಳು ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನು ಹುಟ್ಟುಹಾಕುತ್ತಿವೆ.
ಇನ್ನು ಜೈಲರ್ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ಮುಕ್ತಾಯಗೊಂಡಿದ್ದು, ಚಿತ್ರದ ಬಿಡುಗಡೆ ದಿನಾಂಕವೂ ಸಹ ಹತ್ತಿರ ಬರುತ್ತಿರುವ ಕಾರಣ ಜೈಲರ್ ಚಿತ್ರತಂಡ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಪ್ರಚಾರ ಗಿಟ್ಟಿಸುವ ಕೆಲಸಕ್ಕೆ ಕೈಹಾಕಿದೆ.

ಸದ್ಯ ಚಿತ್ರದ ಪ್ರಚಾರದ ಕೆಲಸಗಳು ಭರ್ಜರಿಯಾಗಿ ಸಾಗುತ್ತಿದ್ದು, ಜೈಲರ್ ಚಿತ್ರವನ್ನು ಆಗಸ್ಟ್ 10ರಂದು ಬಿಡುಗಡೆ ಮಾಡಲು ಸನ್ ನೆಟ್‌ವರ್ಕ್ಸ್ ಚಿಂತನೆ ಸಿದ್ಧಗೊಂಡಿದೆ. ಹೀಗೆ ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ಜೈಲರ್ ಚಿತ್ರತಂಡಕ್ಕೆ ಇತ್ತೀಚೆಗಷ್ಟೆ ಮಲಯಾಳಂನ ನಿರ್ದೇಶಕರೊಬ್ಬರು ಶಾಕ್ ನೀಡಿದ್ದರು.
ಜೈಲರ್ ಎಂಬ ಹೆಸರಿನ ಅಡಿಯಲ್ಲಿ ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದು ನಾನು, ಮೊದಲು ಟೈಟಲ್ ಘೋಷಣೆ ಮಾಡಿದ್ದು ನಾನು ಹೀಗಾಗಿ ಜೈಲರ್ ಟೈಟಲ್ ನಂದು ಎಂದು ಮಲಯಾಳಂನ ನಿರ್ದೇಶಕ ಸಕ್ಕಿರ್ ಮಡತ್ತಿಲ್ ಕೋರ್ಟ್ ಮೆಟ್ಟಿಲೇರಿದ್ದರು.
ಆದರೆ ಈ ಬದಲಾವಣೆಗೆ ಸನ್ ಪಿಕ್ಚರ್ಸ್ ಸೊಪ್ಪು ಹಾಕದೇ ಇರುವ ಕಾರಣ ಜೈಲರ್ ಶೀರ್ಷಿಕೆ ಅಡಿಯಲ್ಲಿಯೇ ಚಿತ್ರ ಬಿಡುಗಡೆಯಾಗುವುದು ಬಹುತೇಕ ಪಕ್ಕಾ ಆಗಿದೆ. ಹೀಗೆ ಜೈಲರ್ ಚಿತ್ರತಂಡದ ಜತೆ ಟೈಟಲ್ ಕಾರಣಕ್ಕಾಗಿ ಕಿರಿಕ್ ಮಾಡಿಕೊಂಡಿದ್ದ ಮಲಯಾಳಂನ ಜೈಲರ್ ಚಿತ್ರತಂಡ ಇದೀಗ ಬಿಡುಗಡೆ ದಿನಾಂಕದ ವಿಷಯದಲ್ಲಿಯೂ ತಮಿಳು ಜೈಲರ್ ಚಿತ್ರತಂಡಕ್ಕೆ ಟಕ್ಕರ್ ನೀಡಿದೆ.
ಹೌದು, ಮೊದಲಿಗೆ ರಜನಿಕಾಂತ್ ನಟನೆಯ ಜೈಲರ್ ಚಿತ್ರವನ್ನು ಆಗಸ್ಟ್ 10ರಂದು ಬಿಡುಗಡೆ ಮಾಡಲು ಘೋಷಿಸಲಾಗಿತ್ತು. ಇದೀಗ ಮಲಯಾಳಂ ಜೈಲರ್ ಚಿತ್ರತಂಡ ಸಹ ಆಗಸ್ಟ್ 10ರಂದೇ ತಮ್ಮ ಚಿತ್ರವನ್ನೂ ಸಹ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಹೀಗೆ ಎರಡೆರಡು ಜೈಲರ್ ಚಿತ್ರಗಳು ಒಂದೇ ದಿನ ಬಿಡುಗಡೆಗೊಳ್ಳಲಿವೆ.
ಇನ್ನು ಈ ಚಿತ್ರದಲ್ಲಿ ರಜನಿಕಾಂತ್ ಮುತ್ತುವೇಲು ಪಾಂಡಿಯನ್ ಎಂಬ ಹೆಸರಿನ ಜೈಲರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದೇ ಮೊದಲ ಬಾರಿಗೆ ತಮಿಳು ಸಿನಿಮಾಗಾಗಿ ಬಣ್ಣ ಹಚ್ಚಿರುವ ಶಿವರಾಜ್‌ಕುಮಾರ್ ಈ ಚಿತ್ರದಲ್ಲಿ ರಾವಣ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಶಿವರಾಜ್‌ಕುಮಾರ್ ಮಾತ್ರವಲ್ಲದೇ ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್ ಹಾಗೂ ಟಾಲಿವುಡ್ ನಟ ಸುನಿಲ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.
ಜೈಲರ್ ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಜಾಕಿ ಶ್ರಾಫ್ ಸಹ ಅಭಿನಯಿಸಿದ್ದು, ತಮನ್ನಾ ಭಾಟಿಯಾ ಹಾಗೂ ರಮ್ಯಾಕೃಷ್ಣ ಸಹ ಬಣ್ಣ ಹಚ್ಚಿದ್ದಾರೆ. ಚಿತ್ರದ ಹಾಡುಗಳು ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಚಿತ್ರತಂಡ ಭರ್ಜರಿಯಾಗಿ ಚಿತ್ರದ ಆಡಿಯೊ ಬಿಡುಗಡೆ ಕಾರ್ಯಕ್ರಮ ಮಾಡಲು ತಯಾರಿ ನಡೆಸಿಕೊಳ್ಳುತ್ತಿದೆ.
ಈ ಚಿತ್ರ ಗೆದ್ದರೆ ರಜನಿಕಾಂತ್ ಹಾಗೂ ನಿರ್ದೇಶಕ ನೆಲ್ಸನ್ ಕುಮಾರ್ ಇಬ್ಬರೂ ಸಹ ಕಮ್‌ಬ್ಯಾಕ್ ಮಾಡಲಿದ್ದಾರೆ. ಹೌದು, ರಜನಿಕಾಂತ್ ನಟನೆಯ ಕೊನೆಯ ಸಿನಿಮಾ ಅಣ್ಣಾತ್ತೆ ಸೋಲನ್ನು ಕಂಡಿತ್ತು. ಅದೇ ರೀತಿ ನೆಲ್ಸನ್ ಕುಮಾರ್ ನಿರ್ದೇಶನದ ಕೊನೆಯ ಚಿತ್ರ ಬೀಸ್ಟ್ ನೆಲಕಚ್ಚಿತ್ತು. ಈ ರೀತಿ ದೊಡ್ಡ ಮಟ್ಟದಲ್ಲಿ ಹಿನ್ನಡೆ ಅನುಭವಿಸಿದ ಚಿತ್ರಗಳನ್ನು ನೀಡಿರುವ ಈ ಇಬ್ಬರಿಗೂ ಜೈಲರ್ ಗೆದ್ದು ಕೈ ಹಿಡಿಯಬೇಕಾದ ಅವಶ್ಯಕತೆ ಇದೆ.


Click it and Unblock the Notifications











