ದೆಹಲಿಯಲ್ಲಿ ವಿಜಯ್ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನಿರ್ಮಾಪಕ ವೆಂಕಟ್ ನಾರಾಯಣ ನೇಮಕ
ಕೆವಿಎನ್ ಪ್ರೊಡಕ್ಷನ್ಸ್ ಚಿತ್ರ ನಿರ್ಮಾಣ ಸಂಸ್ಥೆಯ ಸ್ಥಾಪಕ, ನಿರ್ಮಾಪಕ ವೆಂಕಟ್ ಕೊನಂಕಿ ದೆಹಲಿಯಲ್ಲಿ ತಮಿಳುನಾಡು ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ. ವಿಜಯ್ ನಟನೆಯ 'ಜನನಾಯಗನ್' ಚಿತ್ರವನ್ನು ವೆಂಕಟ್ ಕೊನಂಕಿ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಸಿಎಂ ವಿಜಯ್ ತಮ್ ಆಪ್ತ ನಿರ್ಮಾಪಕನಿಗೆ ಬಂಫರ್ ಗಿಫ್ಟ್ ಕೊಟ್ಟಿದ್ದಾರೆ. ಈ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ.
ಕೇಂದ್ರ ಸರ್ಕಾರ ಮತ್ತು ಸಚಿವರೊಂದಿಗೆ ಸಮನ್ವಯ ಸಾಧಿಸುವುದು, ಮುಖ್ಯಮಂತ್ರಿಗಳು ದೆಹಲಿಯಲ್ಲಿದ್ದಾಗ ಅವರ ಸಭೆಗಳನ್ನು ನಿಗದಿಪಡಿಸುವುದು ಮತ್ತು ಕೇಂದ್ರ ಸರ್ಕಾರದ ನೀತಿಗಳಿಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು ಮತ್ತು ರಾಜ್ಯ ಸರ್ಕಾರದ ಬಗ್ಗೆ ಅವರ ದೃಷ್ಟಿಕೋನಗಳ ಬಗ್ಗೆ ಮಾಹಿತಿ ನೀಡುವುದು ಸರ್ಕಾರದ ವಿಶೇಷ ಪ್ರತಿನಿಧಿ ಜವಾಬ್ದಾರಿ ಆಗಿರುತ್ತದೆ. ಸಿನಿಮಾ ನಿರ್ಮಾಪಕನಿಗೆ ಈ ಸ್ಥಾನಕ್ಕೆ ನೇಮಿಸಿರುವುದಕ್ಕೆ ಡಿಎಂಕೆ ರಾಜ್ಯಸಭಾ ಸದಸ್ಯ ಪಿ ವಿಲ್ಸನ್ ಟೀಕಿಸಿದ್ದಾರೆ. ಇದು ಆ ಸ್ಥಾನಕ್ಕೆ ಧಕ್ಕೆಯಾಗಲಿದ್ದು ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯವನ್ನು ನಗೆಪಾಟಲಿಗೆ ಈಡು ಮಾಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಬಗ್ಗೆ ಚರ್ಚೆ ನಡೀತಿದೆ.

ಈ ಹುದ್ದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಸಂಪರ್ಕಿಸುವ ಮಹತ್ವದ ಹುದ್ದೆ. ಇದರಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಆಗಬಾರದು ಎಂದು ಪಿ ವಿಲ್ಸನ್ ಕಳವಳ ವ್ಯಕ್ತಪಡಿಸಿದ್ದಾರೆ. ಟಿವಿಕೆ ಪಕ್ಷಕ್ಕೆ ಚುನಾವಣೆಯಲ್ಲಿ ಬಹುಮತ ಸಿಗುತ್ತಿದ್ದಂತೆ ಸರ್ಕಾರ ರಚನೆಗೆ ಅವಕಾಶ ಕೋರಿ ರಾಜ್ಯಪಾಲರನ್ನು ವಿಜಯ್ ಭೇಟಿ ಮಾಡಿದ್ದರು. ಈ ವೇಳೆ ವೆಂಕಟ್ ನಾರಾಯಣ ಸಹ ಜೊತೆಗಿದ್ದರು. ವಿಜಯ್ ರಾಜಕೀಯ ಹಾದಿಯಲ್ಲಿ ಸಿನಿಮಾ ನಿರ್ಮಾಪಕರು ಯಾಕೆ ಕಂಡರು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ವೆಂಕಟ್ ಅವರಿಗೆ ವಿಶೇಷ ಹುದ್ದೆ ನೀಡಿ ಅವರು ತನಗೆ ಆಪ್ತರು ಎಂದು ವಿಜಯ್ ತೋರಿಸಿಕೊಂಡಿದ್ದಾರೆ. ಈ ಮೂಲಕ ಇಬ್ಬರ ಬಂಧ ಮತ್ತಷ್ಟು ಗಟ್ಟಿಯಾಗಿದೆ.
ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯ ಹುದ್ದೆ ಸಾಮಾನ್ಯವಾಗಿ ರಾಜ್ಯ ಸಚಿವರ (ಕ್ಯಾಬಿನೆಟ್ ಶ್ರೇಣಿ) ಪಂಕ್ತಿಯಲ್ಲಿರುತ್ತದೆ. ಕ್ಯಾಬಿನೆಟ್ ಶ್ರೇಣಿಯೊಂದಿಗೆ ಕರ್ನಾಟಕ ಸರ್ಕಾರ ಕೂಡ ದೆಹಲಿ ವಿಶೇಷ ಪ್ರತಿನಿಧಿಯನ್ನು ನೇಮಿಸಿದೆ. ತಮಿಳುನಾಡು ಸರ್ಕಾರ ಹಾಗೂ ಕೇಂದ್ರದ ಅಧಿಕಾರಿಗಳ ನಡುವಿನ ಸಮನ್ವಯಕ್ಕಾಗಿ ನೋಡಲ್ ಅಧಿಕಾರಿಯಾಗಿ ಅವರು ಕಾರ್ಯನಿರ್ವಹಿಸುತ್ತಾರೆ. ಮುಖ್ಯಮಂತ್ರಿಯ ದೆಹಲಿ ಭೇಟಿಗಳನ್ನು ನೋಡಿಕೊಳ್ಳುತ್ತಾರೆ. ಒಟ್ಟಾರೆ ಕನ್ನಡ ಸಿನಿಮಾ ನಿರ್ಮಾಪಕನಿಗೆ ಇಂತಹ ಜವಾಬ್ದಾರಿ ಕೊಟ್ಟಿದ್ದು ಯಾಕೆ ಎಂದು ಭಾರೀ ಚರ್ಚೆ ಶುರುವಾಗಿದೆ.
ವೆಂಕಟ್ ನಾರಾಯಣ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೇ ಉದ್ಯಮ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದಾರೆ. ಅದೆಲ್ಲದರ ನಡುವೆ ದೆಹಲಿಯಲ್ಲಿ ತಮಿಳುನಾಡು ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
350 ಕೋಟಿ ರೂ. ಬಜೆಟ್‌ನಲ್ಲಿ ವಿಜಯ್ ನಟನೆಯ 'ಜನನಾಯಗನ್' ಚಿತ್ರವನ್ನು ವೆಂಕಟ್ ನಾರಾಯಣ ನಿರ್ಮಾಣ ಮಾಡಿದ್ದಾರೆ. ಆದರೆ ಸೆನ್ಸಾರ್ ಸಮಸ್ಯೆಯಿಂದ ಚಿತ್ರ ಬಿಡುಗಡೆಗೆ ತೊಡಕಾಗಿದೆ. 6 ತಿಂಗಳಿಂದ ಸಿನಿಮಾ ಬಿಡುಗಡೆ ಆಗಲೇ ಇಲ್ಲ. ಸದ್ಯಕ್ಕೆ ಯಾರು ಸಿನಿಮಾ ತೆರೆಗೆ ತರುವ ಮನಸ್ಸು ಮಾಡುತ್ತಿಲ್ಲ. ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ 'ಜನನಾಯಗನ್' ಸಿನಿಮಾ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು. ಈ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
'ಟಾಕ್ಸಿಕ್' ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಸಾಕಷ್ಟು ಸಿನಿಮಾಗಳನ್ನು ಸಂಸ್ಥೆ ವಿತರಣೆ ಮಾಡುತ್ತಿದೆ. 'ಜನನಾಯಗನ್' ಚಿತ್ರ ಲೀಕ್ ಆಗಿ ನಿರ್ಮಾಪಕರಿಗೆ ಆಗಿರುವ ನಷ್ಟ ಭರಿಸಲು ವಿಜಯ್ ಈ ಜವಾಬ್ದಾರಿ ಹುದ್ದೆ ನೀಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications