"ನಾನು ಒಂದು ಹುಡುಗಿ ಬೇಕು ಅಂತ ಕೇಳಿದ್ರೆ, ಆ ದೇವರು..: 'ಜವಾನ್' ನಿರ್ದೇಶಕ ಅಟ್ಲಿ
'ಜವಾನ್' ಸಿನಿಮಾ ಮಾಡಿ ತಮಿಳು ನಿರ್ದೇಶಕ ಅಟ್ಲಿ ರಾತ್ರೋರಾತ್ರಿ ಪ್ಯಾನ್ ಇಂಡಿಯಾ ಸ್ಟಾರ್ ಡೈರೆಕ್ಟರ್ ಆಗಿಬಿಟ್ಟರು. ಒಂದಷ್ಟು ಟೀಕೆಗಳ ನಡುವೆಯೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿತ್ತು. ಮುಂದೆ ಶಾರುಖ್ ಖಾನ್ ಹಾಗೂ ದಳಪತಿ ವಿಜಯ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡೋದಾಗಿ ಹೇಳಿದ್ದಾರೆ.
ಸ್ಟಾರ್ ನಿರ್ದೇಶಕ ಶಂಕರ್ ಗರಡಿಯಲ್ಲಿ ಪಳಗಿನ ಅಟ್ಲಿ ತಮ್ಮ ಪ್ರತಿಭೆಯಿಂದ ಭಾರತೀಯ ಚಿತ್ರರಂಗದ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದಾರೆ. ಆದರೆ ಅಟ್ಲಿ ಸಾಕಷ್ಟು ಕಾರಣಗಳಿಗೆ ಟ್ರೋಲ್ ಎದುರಿಸಬೇಕಾಯಿತು. ಕೊನೆಗೆ ತಮ್ಮ ಮೈಬಣ್ಣದ ಕಾರಣಕ್ಕೂ ಟೀಕೆಗೆ ಗುರಿಯಾಗುವಂತಾಯಿತು. ಅದನ್ನೆಲ್ಲಾ ಮೀರಿ ತಮ್ಮ ಪ್ರತಿಭೆಯಿಂದ ಚಿತ್ರರಂಗದಲ್ಲಿ ಕಮಾಲ್ ಮಾಡುತ್ತಿದ್ದಾರೆ.

ಮಧುರೆ ಮೂಲದ ಅರುಣ್‌ಕುಮಾರ್ ಚಿತ್ರರಂಗದಲ್ಲಿ ಅಟ್ಲಿ ಎಂದೇ ಗುರ್ತಿಸಿಕೊಂಡದ್ದಾರೆ. ರಜನಿಕಾಂತ್ ನಟನೆಯ 'ರೋಬೊ' ಹಾಗೂ ವಿಜಯ್ ನಟನೆಯ 'ನನ್ಬನ್' ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಬಳಿಕ ನಯನತಾರಾ ನಟನೆಯ 'ರಾಜಾ ರಾಣಿ' ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. 'ತೇರಿ', 'ಮೆರ್ಸಲ್', 'ಬಿಗಿಲ್' ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿ ಗೆದ್ದರು. ಬಳಿಕ ಶಾರುಖ್ ಜೊತೆ ಸಿನಿಮಾ ಘೋಷಿಸಿದ್ದರು.
ಕಿಂಗ್ ಖಾನ್ ಜೊತೆ ಅಟ್ಲಿ ಸಿನಿಮಾ ಘೋಷಿಸಿದಾಗಲೂ ಸಾಕಷ್ಟು ಟ್ರೋಲ್‌ಗೆ ಗುರಿಯಾಗಿದ್ದರು. ತಮಿಳು ನಿರ್ದೇಶಕ ಬಾಲಿವುಡ್ ಸಿನಿಮಾ ಮಾಡೋಕೆ ಸಾಧ್ಯಾನಾ? ಎಂದಿದ್ದರು. ಅಟ್ಲಿಗೆ ಶಾರುಖ್ ಅವಕಾಶ ಕೊಟ್ಟಾಗಲೇ ಕೆಲವರು ಮೂದಲಿಸಿದ್ದರು. ಬಾಲಿವುಡ್‌ನಲ್ಲಿ ನಿರ್ದೇಶಕರು ಇರಲಿಲ್ವಾ? ಎಂದಿದ್ದರು. ಅಟ್ಲಿ 'ರಾಜಾ ರಾಣಿ' ಸಿನಿಮಾ ಮಾಡಿ ಗೆದ್ದ ಸಮಯದಲ್ಲಿ ಶಾರುಖ್ ಖಾನ್‌ನ ಭೇಟಿ ಮಾಡಿದ್ದರು. ಆ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕೆಲವರು ಇದು ಫೋಟೊಶಾಪ್ ಮಾಡಿರುವುದು ಎಂದು ಕಾಮೆಂಟ್ ಮಾಡಿದ್ದರು. ಆದರೆ 10 ವರ್ಷಗಳ ಬಳಿಕ ಅದೇ ಕಿಂಗ್‌ಖಾನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮಟ್ಟಿಗೆ ಬೆಳೆದರು.
2014ರಲ್ಲಿ ಕೃಷ್ಣ ಪ್ರಿಯಾ ಎಂಬುವವರನ್ನು ನಿರ್ದೇಶಕ ಅಟ್ಲಿ ಮದುವೆ ಆಗಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಪ್ರಿಯಾ ಬೆಳ್ಳಗೆ ಇರುವುದು, ಅಟ್ಲಿ ಕಪ್ಪು ಮೈಬಣ್ಣದವರಾಗಿರುವುದರಿಂದ ಸಾಕಷ್ಟು ಟ್ರೋಲ್ ಎದುರಿಸಿದ್ದರು. 'ಜವಾನ್' ಚಿತ್ರದ ಪ್ರಚಾರದ ಸಮಯದಲ್ಲಿ, ಅಟ್ಲಿ ತಮ್ಮ ಲವ್ ಸ್ಟೋರಿ ಹಾಗೂ ತಾವು ಎದುರಿಸಿದ ಟ್ರೋಲ್ ಬಗ್ಗೆಯೂ ಮಾತನಾಡಿದ್ದರು.
ಸದ್ಯ ಪತ್ನಿ ಕೃಷ್ಣ ಪ್ರಿಯಾ ಹುಟ್ಟುಹಬ್ಬಕ್ಕೆ ಶುಭಕೋರಿ ಅಟ್ಲಿ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. "ನಾನು ಆ ದೇವರಿಗೆ ಹುಡುಗಿ ಬೇಕು ಎಂದು ಕೇಳಿದೆ.. ಆದರೆ ಆತ ನನಗೆ ದೇವತೆಯನ್ನು ಕೊಟ್ಟಿದ್ದಾನೆ. ಆ ದೇವತೆಯಿಂದಾಗಿ ನನ್ನ ಆಸೆಗಳು ಮತ್ತು ಕನಸುಗಳು ನನಸಾಯಿತು. ನೀನೇ ನನ್ನ ಸರ್ವಸ್ವ. ಈಗ ನಮ್ಮ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ನಾನು ಮತ್ತು ಮೀರ್(ಮಗ) ಒಟ್ಟಾಗಿ ನಿನಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದೇವೆ" ಎಂದು ಬರೆದು ಮಡದಿ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ. ಅಟ್ಲಿ ಪೋಸ್ಟ್ ವೈರಲ್ ಆಗುತ್ತಿದೆ.
'ಜವಾನ್' ಬಳಿಕ ನಿರ್ದೇಶಕ ಅಟ್ಲಿ ಯಾವುದೇ ಸಿನಿಮಾ ಘೋಷಿಸಿಲ್ಲ. ಹಾಲಿವುಡ್‌ನಿಂದ ಕೂಡ ಸಿನಿಮಾ ಮಾಡುವ ಆಫರ್ ಬಂದಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಶಾರುಖ್ ಖಾನಗ್ ಹಾಗೂ ದಳಪತಿ ವಿಜಯ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡುತ್ತೇನೆ, ಅದಕ್ಕೆ ಇಬ್ಬರೂ ನಟಿಸೋಕೆ ಸಿದ್ಧರಿದ್ದಾರೆ ಎಂದಿದ್ದರು. ಆದರೆ ಅಧಿಕೃತವಾಗಿ ಯಾವುದೇ ಸಿನಿಮಾ ಇನ್ನು ಫೈನಲ್ ಆಗಿಲ್ಲ.


Click it and Unblock the Notifications











