ಚಂದ್ರಮುಖಿ 2 ಟ್ರೈಲರ್: ಸುಂದರಿ ಕಂಗನಾ ರನೌತ್, ಎರಡು ಶೇಡ್‌ನಲ್ಲಿ ರಾಘವ ಲಾರೆನ್ಸ್
ಬಾಲಿವುಡ್ ನಟಿ ಕಂಗನಾ ರನೌತ್ ಮತ್ತು ನಟ ರಾಘವ ಲಾರೆನ್ಸ್ ಅಭಿನಯದ ಚಂದ್ರಮುಖಿ 2 ಸಿನಿಮಾದ ಟ್ರೈಲರ್ ಭಾನುವಾರ ಬಿಡುಗಡೆಯಾಗಿದೆ. ಬಹುನಿರೀಕ್ಷಿತ ಸಿನಿಮಾದ ಟ್ರೈಲರ್ ಅನ್ನು ಚೆನ್ನೈನಲ್ಲಿ ಅಭಿಮಾನಿಗಳ ನಡುವೆ ಬಿಡುಗಡೆ ಮಾಡಲಾಗಿದೆ.
ಚಂದ್ರಮುಖಿ - 2ರಲ್ಲಿ ಕಂಗನಾ ರನೌತ್ ಅವರು ವೆಟ್ಟೈಯನ್ ರಾಜನ ಆಸ್ಥಾನದಲ್ಲಿನ ನರ್ತಕಿಯ ಪಾತ್ರ ನಿರ್ವಹಿಸಿದ್ದಾರೆ. ಚಂದ್ರಮುಖಿ ತನ್ನ ಸೌಂದರ್ಯ ಮತ್ತು ನೃತ್ಯಕ್ಕೆ ಖ್ಯಾತಿ ಗಳಿಸಿದ್ದವರು ಎನ್ನಲಾಗಿದ್ದು, ಅದಕ್ಕೆ ತಕ್ಕಂತೆ ನಟಿ ಚಂದ್ರಮುಖಿಯಾಗಿ ಅತಿ ಸುಂದರವಾಗಿ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಚಂದ್ರಮುಖಿ 2 ಟ್ರೈಲರ್ ಏನು ಹೇಳುತ್ತದೆ?
ಚಂದ್ರಮುಖಿ 2 ಟ್ರೈಲರ್ ದೊಡ್ಡ ಅವಿಭಕ್ತ ಕುಟುಂಬವೊಂದು ಅರಮನೆಯಂತಹ ಬಂಗಲೆಗೆ ಬರುವುದನ್ನು ನೋಡಬಹುದು. ಈ ಬಂಗಲೆಯಲ್ಲಿ ಒಂದು ಕೋಣೆಯನ್ನು ಮಾತ್ರ ಪ್ರವೇಶಿಸಬಾರದು. ಅದು ಬಂಗಲೆಯ ದಕ್ಷಿಣ ಬ್ಲಾಕ್‌ನಲ್ಲಿರುವ ಕೋಣೆ. ಇದರ ಬಾಗಿಲು ತೆಗೆದರೆ ಸಮಸ್ಯೆಗಳು ಶುರುವಾಗುತ್ತವೆ. ಚಂದ್ರಮುಖಿಯ ಕಥೆಗೆ 17 ವರ್ಷಗಳ ನಂತರ ಹೊಸ ತಿರುವು ಸಿಗುತ್ತದೆ. 200 ವರ್ಷಗಳಷ್ಟು ಹಳೆಯದಾದ ಚಂದ್ರಮುಖಿ ಮತ್ತು ರಾಜ ವೆಟ್ಟೈಯನ್ ಅವರ ಸೇಡಿನ ಕಥೆ. ಈ ಕಥೆಯನ್ನು ವರ್ತಮಾನಕ್ಕೆ ಹೊಂದಿಸಿರುವುದನ್ನು ಟ್ರೈಲರ್ ತಿಳಿಸುತ್ತದೆ.
ಚಂದ್ರಮುಖಿ 2 ತಾರಾ ಬಳಗ
ಪಿ ವಾಸು ನಿರ್ದೇಶನದ ಚಂದ್ರಮುಖಿ 2 ಚಿತ್ರದಲ್ಲಿ ಕಂಗನಾ ರನೌತ್ ಮತ್ತು ನಟ ರಾಘವ ಲಾರೆನ್ಸ್ ಜೊತೆಗೆ ವಡಿವೇಲು, ರಾಧಿಕಾ ಶರತ್‌ಕುಮಾರ್, ಲಕ್ಷ್ಮಿ ಮೆನನ್, ಸೃಷ್ಟಿ ಡಾಂಗೆ, ಮಿಥುನ್ ಶ್ಯಾಮ್, ಮಹಿಮಾ ನಂಬಿಯಾರ್, ರಾವ್ ರಮೇಶ್, ವಿಘ್ನೇಶ್, ರವಿ ಮರಿಯಾ, ಸುರೇಶ್ ಮೆನನ್, ಟಿ.ಎಂ. ಕಾರ್ತಿಕ್ ಮತ್ತು ಸುಭಿಕ್ಷಾ ಕೃಷ್ಣನ್ ನಟಿಸಿದ್ದಾರೆ.
ಟ್ರೈಲರ್‌ನಲ್ಲಿ ಕಂಗನಾಗಿಂತ ಹೆಚ್ಚಾಗಿ ರಾಘವ ಲಾರೆನ್ಸ್ ಮತ್ತು ವಡಿವೇಲು ಅವರನ್ನು ತೋರಿಸಲಾಗಿದೆ. 17 ವರ್ಷಗಳ ಹಳೆಯ ಕಥೆಯನ್ನು ವಡಿವೇಲು ಹೇಳಬಹುದು ಎಂಬ ಸುಳಿವನ್ನು ಟ್ರೈಲರ್ ನೀಡಿದೆ. ತಮಿಳಿನ ಖ್ಯಾತ ಹಾಸ್ಯ ನಟ ವಡಿವೇಲು ಇತ್ತೀಚೆಗೆ ಮಾಮನ್ನಣ್ ಸಿನಿಮಾದಲ್ಲಿ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಚಂದ್ರಮುಖಿ 2 ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಕಳೆದ ತಿಂಗಳು ಚೆನ್ನೈನಲ್ಲಿ ನಡೆದಿತ್ತು. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಆಡಿಯೋ ಬಿಡುಗಡೆ ವೇಳೆ ಕೀರವಾಣಿ ಕಂಗನಾ ಅವರನ್ನು ಪ್ರಶಂಸಿಸಿದ್ದರು.

ಆಡಿಯೋ ಬಿಡುಗಡೆ ಸಮಾರಂಭದಲ್ಲಿ, " ಕಂಗನಾ ಅದ್ಭುತವಾದ ಅಭಿನಯವನ್ನು ನೀಡಿದ್ದಾರೆ. ದೊಡ್ಡ ಪರದೆಯ ಮೇಲೆ ಚಂದ್ರಮುಖಿಯಾಗಿ ಕಂಗನಾ ಅವರ ನಟನೆಯನ್ನು ನೋಡಿದ ನಂತರ ಎಲ್ಲರೂ ಬೆಚ್ಚಿಬೀಳುತ್ತಾರೆ" ಎಂದು ಶ್ಲಾಘಿಸಿದ್ದರು. ಚಿತ್ರದ ಕೆಲವು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಕಂಗನಾ ಚಂದ್ರಮುಖಿಯಾಗಿ ನಟಿಸಿರುವ 'ಸ್ವಾಗತಾಂಜಲಿ' ಉತ್ತಮ ಪ್ರತಿಕ್ರಿಯೆ ಪಡೆದಿದೆ.
ಚಂದ್ರಮುಖಿ 2 ಸಿನಿಮಾ ರಜನಿಕಾಂತ್ ಮತ್ತು ಜ್ಯೋತಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್‌ಬಸ್ಟರ್ ಆಗಿದ್ದ ತಮಿಳಿನ ಹಾರರ್ ಕಾಮಿಡಿ ಚಂದ್ರಮುಖಿಯ ಸೀಕ್ವೆಲ್ ಆಗಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಸುಬಾಸ್ಕರನ್ ನಿರ್ಮಾಣದ ಚಂದ್ರಮುಖಿ 2 ಚಿತ್ರವು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಸೆಪ್ಟೆಂಬರ್ 15 ರಂದು ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











