'ತಲೈವಿ' ಟ್ರೈಲರ್; ಸ್ಟಾರ್ ನಟಿಯಿಂದ ಜನರ ನೆಚ್ಚಿನ ಅಮ್ಮವರೆಗೂ ಜಯಲಲಿತಾ ಆಗಿ ಗಮನ ಸೆಳೆದ ಕಂಗನಾ
ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 35ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಕಂಗನಾಗೆ ಈ ವರ್ಷದ ಹುಟ್ಟುಹಬ್ಬ ತುಂಬಾ ವಿಶೇಷ. 67ನೇ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಸಂತಸ ಒಂದೆಡೆಯಾದರೆ ಮತ್ತೊಂದೆಡೆ ಬಹುನಿರೀಕ್ಷೆಯ ತಲೈವಿ ಟ್ರೈಲರ್ ರಿಲೀಸ್ ಆಗಿದೆೆ.
ಕಂಗನಾ ಹುಟ್ಟುಹಬ್ಬದ ಪ್ರಯುಕ್ತ ತಲೈವಿ ಟ್ರೈಲರ್ ಮಾಡಲಾಗಿದೆ. ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಪಾತ್ರದಲ್ಲಿ ಬಣ್ಣ ಹಚ್ಚಿರುವ ನಟಿ ಕಂಗನಾ ಎಲ್ಲರ ಗಮನ ಸೆಳೆದಿದ್ದಾರೆ. ಸೂಪರ್ ಸ್ಟಾರ್ ನಾಯಕಿಯಾಗಿ ಬಳಿಕ ರಾಜಕೀಯ ಪ್ರವೇಶ ಮಾಡಿ, ಅವಮಾನಗಳನ್ನು ಮೆಟ್ಟಿನಿಂತು, ರಾಜಕಾರಣಿಯಾಗಿ ಖ್ಯಾತಿ ಗಳಿಸಿ ತಮಿಳುನಾಡಿನ ಪ್ರಭಾವಿ ಮಹಿಳೆಯಾಗಿ ಹೊರಹೊಮ್ಮಿದ ಜಯಲಲಿತಾ ಅವರ ಜೀವನದ ಪಯಣ ಟ್ರೈಲರ್‌ನಲ್ಲಿ ಅನಾವರಣವಾಗಿದೆ.
ಜಯಲಲಿತಾ ಆಗಿ ಮಿಂಚಿರುವ ನಟಿ ಕಂಗನಾ ಅಭಿಮಾನಿಗಳ ನಿರೀಕ್ಷೆ ಹುಸಿಮಾಡಲಿಲ್ಲ. ಪಾತ್ರಕ್ಕಾಗಿ ಕಂಗನಾ ಸಾಕಷ್ಟು ತಯಾರಿ ನಡೆಸಿದ್ದಾರೆ. 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಅನೇಕ ತಿಂಗಳಿಂದ ತಲೈವಿಗಾಗಿ ಕಂಗನಾ ಪಟ್ಟ ಶ್ರಮ ಟ್ರೈಲರ್ ನಲ್ಲಿ ಎದ್ದು ಕಾಣುತ್ತಿದೆ.

ಇನ್ನು ಸಿನಿಮಾಲ್ಲಿ ನಟ ಪ್ರಕಾಶ್ ರೈ, ಅರವಿಂದ್ ಸ್ವಾಮಿ, ಭಾಗ್ಯಶ್ರೀ, ಜಿಶು ಸೇನ್ ಗುಪ್ತಾ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. ತಲೈವಿ, ಎಎಲ್ ವಿಜಯ್ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ತಮಿಳು ಮಾತ್ರವಲ್ಲದೆ ತೆಲುಗಿನಲ್ಲೂ ತೆರೆಗೆ ಬರುತ್ತಿದೆ.
ಎರಡು ದಿನಗಳ ಮುಂಚೆಯೇ ಕಂಗನಾ ಚಿತ್ರದ ಫೋಟೋಗಳನ್ನು ಹಂಚಿಕೊಂಡು, 'ಈ ಬಯೋಪಿಕ್ ಚಿತ್ರೀಕರಣ ಸಮಯದಲ್ಲಿ ನಾನು 20 ಕೆಜಿ ತೂಕ ಹೆಚ್ಚಿಸಿಕೊಂಡು ಮತ್ತು ಕೆಲವೇ ತಿಂಗಳಲ್ಲಿ ತೂಕ ಕಡಿಮೆ ಮಾಡುವುದು ದೊಡ್ಡ ಸವಾಲಾಗಿತ್ತು. ಕೆಲವೇ ಗಂಟೆಗಳಲ್ಲಿ ಜಯ ಪಾತ್ರ ನಿಮ್ಮದಾಗಲಿದೆ' ಎಂದು ಹೇಳಿದ್ದರು.


Click it and Unblock the Notifications











