'ಅರ್ಜುನ್' ಸಿನಿಮಾ ನಾಯಕಿ ಮೀರಾ ಮದುವೆ; ಆಮಂತ್ರಣ ಪತ್ರಿಕೆ ವೈರಲ್
ಕಾಲಿವುಡ್ ಬೆಡಗಿ ಮೀರಾ ಚೋಪ್ರಾ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ. ಮುಂದಿನ ವಾರವೇ ಮದುವೆ ನಿಗದಿಯಾಗಿದೆ. ಸದ್ಯ ಮದುವೆ ಆಮಂತ್ರಣ ಪತ್ರಿಕೆ ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ ಮೀರಾ ಕನ್ನಡದ 'ಅರ್ಜುನ್' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ನಟಿಸಿದ್ದರು.
ಅಂದಹಾಗೆ ನಟಿಯರಾದ ಮೀರಾ ಚೋಪ್ರಾ, ಬಾಲಿವುಡ್ ನಟಿಯರಾದ ಪ್ರಿಯಾಂಕಾ ಚೋಪ್ರಾ ಹಾಗೂ ಪರಿಣಿತಿ ಚೋಪ್ರಾ ಸೋದರ ಸಂಬಂಧಿಗಳು. ಡಿಸೆಂಬರ್ ಕೊನೆಯಲ್ಲಿ ತಮ್ಮ ಮದುವೆ ಬಗ್ಗೆ ಸಂದರ್ಶನವೊಂದರಲ್ಲಿ ಮೀರಾ ಚೋಪ್ರಾ ಮಾತನಾಡಿದ್ದರು. ಇದೀಗ ಮದುವೆ ದಿನಾಂಕ ಘೋಷಣೆಯಾಗಿದೆ.

ನಟಿ ಮೀರಾ ಚೋಪ್ರಾಗೆ ಸಿನಿಮಾಗಳಲ್ಲಿ ಅದ್ಭುತ ಪಾತ್ರಗಳು ಸಿಗಲಿಲ್ಲ. ಆದರೆ ಗ್ಲಾಮರ್ ಡಾಲ್ ಆಗಿ ಮಿಂಚಿದ್ದೇ ಹೆಚ್ಚು. ತಮಿಳಿನ ಜೊತೆಗೆ ಒಂದೆರಡು ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿ ಆಕೆ ನಟಿಸಿದ್ದರು. ವಯಸ್ಸು 40 ದಾಟಿದ್ದು ಇದೀಗ ಚೆಲುವೆ ಮದುವೆ ಆಗಲು ಮುಂದಾಗಿದ್ದಾರೆ. ತನ್ನ ಪ್ರಿಯಕರನ ಜೊತೆಗೆ ಹೊಸಬಾಳಿಗೆ ಕಾಲಿಡುತ್ತಿದ್ದಾರೆ. 3 ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದಾರೆ.
ಇದೇ ಸೋಮವಾರ(ಮಾರ್ಚ್ 11) ತನ್ನ ಪ್ರಿಯಕರ ರಕ್ಷಿತ್ ಕ್ರೇಜಿವಾಲ್ ಜೊತೆಗೆ ಮೀರಾ ಚೋಪ್ರಾ ಮದುವೆ ಅದ್ಧೂರಿಯಾಗಿ ನೆರವೇರಲಿದೆ. ಜೈಪುರ ಖಾಸಗಿ ರೆಸಾರ್ಟ್‌ನಲ್ಲಿ ಮದುವೆ ಶಾಸ್ತ್ರಗಳು ನಡೆಯಲಿವೆ. ಮೀರಾ ಕೈಹಿಡಿಯುತ್ತಿರುವ ರಕ್ಷಿತ್‌ಗೂ ಚಿತ್ರರಂಗಕ್ಕೆ ಸಂಬಂಧವೇ ಇಲ್ಲ. ಆತ ಮುಂಬೈ ಮೂಲದ ಉದ್ಯಮಿ. ಜೈಪುರದ ಬ್ಯೂನಾ ವಿಸ್ಟಾ ಐಷಾರಾಮಿ ಗಾರ್ಡನ್ಸ್ ರೆಸಾರ್ಟ್‌ನಲ್ಲಿ ಇಬ್ಬರ ವಿವಾಹ ಸಮಾರಂಭ ನಡೆಯಲಿದೆ. ಎರಡು ದಿನಗಳ ಮದುವೆ ಸಮಾರಂಭಕ್ಕೆ ಇಡೀ ರೆಸಾರ್ಟ್ ಬುಕ್ ಮಾಡಲಾಗಿದೆ.
ಒಟ್ಟು 150 ಅತಿಥಿಗಳನ್ನು ಆಹ್ವಾನಿಸಲಾಗಿದೆಯಂತೆ. ಮದುವೆ ಆಮಂತ್ರಣ ಪತ್ರಿಕೆ ಗಮನ ಸೆಳೆಯುತ್ತಿದ್ದು ಮೀರಾ ಮತ್ತು ರಕ್ಷಿತ್ ಅವರ ಹೆಸರಿನ ಮೊದಲ ಎರಡು ಅಕ್ಷರಗಳನ್ನು ಸೇರಿಸಿ ಮದುವೆ ಕಾರ್ಡ್‌ನಲ್ಲಿ 'MERA' ಎಂದು ಮುದ್ರಿಸಲಾಗಿದೆ. ಅರಶಿನ ಶಾಸ್ತ್ರ, ಕಾಕ್‌ಟೈಲ್ ಪಾರ್ಟಿ ಮತ್ತು ಸಂಗೀತ್ ಹೀಗೆ ಬಹಳ ಅದ್ಧೂರಿಯಾಗಿ ಮದುವೆ ಸಮಾರಂಭ ಆಯೋಜನೆಗೊಂಡಿದೆ.
2 ತಿಂಗಳ ಹಿಂದೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದ ನಟಿ ಮೀರಾ ಚೋಪ್ರಾ "ಹೌದು. ನಾನು ಮದುವೆ ಆಗುತ್ತಿದ್ದೇನೆ. 2024 ಫೆಬ್ರವರಿಯಲ್ಲಿ ಮದುವೆ ನಡೆಯಲಿದೆ. ಈಗಾಗಲೇ ನಮ್ಮ ಕುಟುಂಬ ಸದಸ್ಯರು ಮದುವೆ ಸಿದ್ಧತೆ ನಡೆಸಿದ್ದಾರೆ. ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ. ವಿವಾಹ ಮಹೋತ್ಸವದಲ್ಲಿ 150 ಜನ ಅತಿಥಿಗಳಿಗೆ ಆಹ್ವಾನ ನೀಡಲು ಚಿಂತನೆ ನಡೆಸಿದ್ದೇವೆ" ಎಂದಿದ್ದರು.
2005ರಲ್ಲಿ 'ಅನ್ಬೆ ಆರುಯಿರೇ' ತಮಿಳು ಚಿತ್ರದ ಮೀರಾ ಚಿತ್ರರಂಗ ಪ್ರವೇಶಿಸಿದ್ದರು. 2008ರಲ್ಲಿ ಕನ್ನಡದ ಅರ್ಜುನ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. 'ನಾಸ್ತಿಕ್', 'ಮೊಗಲಿ ಪುವ್ವು' ಎನ್ನುವ 2 ಚಿತ್ರಗಳಲ್ಲಿ ಮೀರಾ ಚೋಪ್ರಾ ಕಾಣಿಸಿಕೊಂಡಿದ್ದಾರೆ.
ಪ್ರಿಯಾಂಕಾ ಹಾಗೂ ಪರಿಣಿತಿ ಕಜೀನ್ಸ್ ಆಗಿದ್ದರೂ ಇಬ್ಬರ ಜೊತೆ ಅಷ್ಟೇನು ಉತ್ತಮ ಬಾಂಧವ್ಯ ಇಲ್ಲ ಎಂದು ಮೀರಾ ಚೋಪ್ರಾ ಕೆಲ ದಿನಗಳ ಹಿಂದೆ ಹೇಳಿದ್ದರು. "ಮೊದಲಿನಿಂದಲೂ ನಾವು ಇಲ್ಲಿ ಸ್ನೇಹಿತರು ಎನ್ನುವಷ್ಟು ಹತ್ತಿರವಾಗಿರಲಿಲ್ಲ. ಅದು ಫೇಕ್ ಆಗುತ್ತದೆ. ಆದರೆ ಮೂರ್ನಾಲ್ಕು ಹುಡುಗಿಯರು ಇಂಡಸ್ಟ್ರಿಗೆ ಸೇರಿದಾಗ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ ಅಂತ ಹೇಳಬಹುದು. ಇದು ನನಗೆ ಆಗಲಿಲ್ಲ. ನಾನು ಎಂದಿಗೂ ಸಹಾಯವನ್ನು ಕೇಳಲಿಲ್ಲ. ನಾನು ಅವರ ಕಡೆಯಿಂದ ಯಾವುದೇ ಸಹಾಯದ ಪ್ರಸ್ತಾಪ ಸ್ವೀಕರಿಸಲಿಲ್ಲ" ಎಂದಿದ್ದರು.


Click it and Unblock the Notifications











