'ಅಸುರನ್' ಚಿತ್ರ ನಿರ್ದೇಶಕ ವೀಕ್ಷಿಸಲಿದ್ದಾರೆ ಕನ್ನಡದ 'ಲ್ಯಾಂಡ್‌ಲಾರ್ಡ್' ಸಿನಿಮಾ
ಜಡೇಶ್ ಹಂಪಿ ನಿರ್ದೇಶನದಲ್ಲಿ ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಎಲ್ಲಾ ವಿಭಾಗಗಳಲ್ಲಿ ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ. ಜಮೀನ್ದಾರನನ್ನು ಎದುರಿಸುವ ಬಡ ರೈತನ ಕಥೆ ಪ್ರೇಕ್ಷಕರ ಮನಗೆದ್ದಿದೆ. ಇತಿಹಾಸದ ಕಹಿ ಸತ್ಯಗಳನ್ನು ಕೆದಕುವ ಕೆಲಸ ಚಿತ್ರದಲ್ಲಾಗಿದೆ.
ಇವತ್ತಿಗೂ ಚಾಲ್ತಿಯಲ್ಲಿರುವ ಜಾತಿ ಪದ್ಧತಿ, ಪಾಳೆಗಾರಿಕೆ, ಶೋಷಿತ ವರ್ಗಗಳ ಮೇಲೆ ಮೇಲ್ವರ್ಗದವರ ದಬ್ಬಾಳಿಕೆ ಕೊನೆಗಾಣಿಸಲು ಸಂವಿಧಾನ ಪ್ರತಿ ಹಳ್ಳಿ ಹಳ್ಳಿಯಲ್ಲೂ ಜಾರಿಯಾಗಬೇಕು ಎಂದು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ನಟ ಶಿವರಾಜ್‌ಕುಮಾರ್ ಸೇರಿ ಹಲವರು 'ಲ್ಯಾಂಡ್‌ಲಾರ್ಡ್' ಸಿನಿಮಾ ವೀಕ್ಷಿಸಿದ್ದಾರೆ. ಸಿಎಂ ಸಿದ್ಧರಾಮಯ್ಯ ಕೂಡ ಸಿನಿಮಾ ವೀಕ್ಷಿಸುವುದಾಗಿ ಹೇಳಿದ್ದಾರೆ. ತಮಿಳು ನಿರ್ದೇಶಕರಾದ ಪಾ. ರಂಜಿತ್, ಮಾರಿ ಸೆಲ್ವರಾಜ್ ಹಾಗೂ ವೆಟ್ರಿಮಾರನ್ ಶೀಘ್ರದಲ್ಲೇ ಸಿನಿಮಾ ನೋಡುತ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ಜಡೇಟ್ ಹಂಪಿ ಮಾಹಿತಿ ನೀಡಿದ್ದಾರೆ.

ಕೆಳವರ್ಗದವರ ಮೇಲೆ ಮೇಲ್ವರ್ಗದವರ ಕ್ರೌರ್ಯ, ಸಮಾಜದಲ್ಲಿರುವ ಅಸಮಾನತೆಯ ಬಗ್ಗೆ ಪಾ. ರಂಜಿತ್, ಮಾರಿ ಸೆಲ್ವರಾಜ್ ಹಾಗೂ ವೆಟ್ರಿಮಾರನ್ ಸಿನಿಮಾಗಳನ್ನು ಮಾಡುವ ಪ್ರಯತ್ನ ಮಾಡಿದ್ದಾರೆ. ಪಾ. ರಂಜಿತ್ ನಿರ್ದೇಶನದ 'ಕಾಲಾ ಕರಿಕಾಲನ್', 'ತಂಗಲಾನ್' ಅದೇ ರೀತಿ ಮಾರಿ ಸೆಲ್ವರಾಜ್ ಕಟ್ಟಿಕೊಟ್ಟ 'ಕರ್ಣನ್', 'ಮಾಮನನ್', 'ಬಿಸಾನ್' ಹಾಗೂ ನಿರ್ದೇಶಕ ವೆಟ್ರಿಮಾರನ್ ತಮ್ಮ 'ಅಸುರನ್' ಚಿತ್ರದಲ್ಲಿ ಇಂತಹ ವಿಚಾರಗಳನ್ನು ತೆರೆಗೆ ತಂದಿದ್ದರು. ಸದ್ಯ 'ಲ್ಯಾಂಡ್‌ಲಾರ್ಡ್' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿರುವ ಬಗ್ಗೆ ಅವರಿಗೆ ಮಾಹಿತಿ ಹೋಗಿದೆ. ಅವರು ಸಿನಿಮಾ ನೋಡುವ ಬಗ್ಗೆ ಈಗಾಗಲೇ ಒಂದು ಹಂತದ ಮಾತುಕತೆ ನಡೆದಿದೆ ಎಂದು ಜಡೇಶ್ ಹಂಪಿ ಹೇಳಿದ್ದಾರೆ.
ಮರಾಠಿ ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಕೂಡ 'ಲ್ಯಾಂಡ್‌ಲಾರ್ಡ್' ಸಿನಿಮಾ ಬಗ್ಗೆ ಚರ್ಚೆ ನಡೀತಿದೆ. 'ಯಶಸ್ ಟಾಕೀಸ್' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಜಡೇಶ್ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಿಂದೆ ಜಂಟಲ್‌ಮನ್ ಹಾಗೂ ಗುರುಶಿಷ್ಯರು ಚಿತ್ರಗಳನ್ನು ಜಡೇಶ್ ಕಟ್ಟಿಕೊಟ್ಟಿದ್ದರು. ದರ್ಶನ್ ನಟಿಸಿದ್ದ 'ಕಾಟೇರ' ಚಿತ್ರಕ್ಕೆ ಕಥೆ ಒದಗಿಸಿದ್ದರು. ಇದು ನಿರ್ದೇಶಕರಾಗಿ ಜಡೇಶ್ ಅವರ 3ನೇ ಸಿನಿಮಾ.

ಕಲೆಕ್ಷನ್ ವಿಚಾರಕ್ಕೆ ಬಂದರೆ ಮೊದಲ ವಾರದಲ್ಲಿ ಸಿನಿಮಾ 4 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಈ ವೀಕೆಂಡ್ ಚಿತ್ರಕ್ಕೆ ಮತ್ತಷ್ಟು ಒಳ್ಳೆ ರೆಸ್ಪಾನ್ಸ್ ಸಿಗುವ ನಿರೀಕ್ಷೆ ದಟ್ಟವಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಮೆಚ್ಚಿಕೊಂಡಾಡುತ್ತಿದ್ದಾರೆ. ಪ್ರತಿಯೊಬ್ಬರ ಕೆಲಸದ ಬಗ್ಗೆ ಮಾತನಾಡುತ್ತಿದ್ದಾರೆ.
ದುನಿಯಾ ವಿಜಯ್, ರಾಜ್ ಬಿ ಶೆಟ್ಟಿ, ರಚಿತಾ ರಾಮ್, ಉಮಾಶ್ರೀ ನಟನೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಬಹಳ ನೈಜವಾಗಿ ಚಿತ್ರವನ್ನು ಚಿತ್ರಿಸಿರುವ ಜಡೇಶ್ ಪ್ರಯತ್ನಕ್ಕೂ ಬಹುಪರಾಕ್ ಎನ್ನುತ್ತಿದ್ದಾರೆ. 80-90ರ ದಶಕದ ಕೋಲಾರ ಭಾಗದ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ಆ ಕಾಲದ ವಾತಾವರಣವನ್ನು ಸೊಗಸಾಗಿ ತೆರೆಗೆ ತಂದಿದ್ದಾರೆ. ಮಾಸ್ತಿ ಸಂಭಾಷಣೆ ಚಿತ್ರದ ಕಥೆಗೆ ಪೂರಕವಾಗಿದೆ. ಪ್ರೇಕ್ಷಕರಿಂದ ಮಾತ್ರವಲ್ಲದೇ ವಿಮರ್ಶಕರಿಂದಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
'ಲ್ಯಾಂಡ್‌ಲಾರ್ಡ್' ಈ ವರ್ಷದ ಮೊದಲ ಹಿಟ್ ಕನ್ನಡ ಸಿನಿಮಾ ಎನಿಸಿಕೊಂಡಿದೆ. 'ಸಲಗ', 'ಭೀಮ' ಸಿನಿಮಾಗಳನ್ನು ನಿರ್ದೇಶಿಸಿ, ನಟಿಸಿ ಗೆದ್ದಿದ್ದ ದುನಿಯಾ ವಿಜಯ್ ಇದೀಗ 'ಲ್ಯಾಂಡ್‌ಲಾರ್ಡ್' ಚಿತ್ರದಲ್ಲಿ ಹೀರೊ ಆಗಿ ನಟಿಸಿ ಗೆಲುವಿನ ನಗೆಬೀರಿದ್ದಾರೆ. ಸ್ಟಾರ್‌ಗಿರಿ ಪಕ್ಕಕ್ಕಿಟ್ಟು ರಾಚಯ್ಯ ಪಾತ್ರವೇ ತಾನಾಗಿ ಅವರು ನಟಿಸಿದ್ದಾರೆ. ಅವರ ಪ್ರಯತ್ನಕ್ಕೆ ಮೆಚ್ಚುಗೆ ಲಭಿಸಿದೆ.


Click it and Unblock the Notifications











