'ಬಾಬಾ' ಮರುಬಿಡುಗಡೆ ಮಾಡುವ ರಜನೀಕಾಂತ್ ನಿರ್ಣಯಕ್ಕೆ 'ಕಾಂತಾರ' ಕಾರಣ! ಅದ್ಹೇಗೆ?
ರಜನೀಕಾಂತ್ ನಟನೆಯ ಹಳೆಯ ಸಿನಿಮಾ 'ಬಾಬಾ' ಇದೀಗ ಮರು ಬಿಡುಗಡೆ ಆಗುತ್ತಿದೆ. ಬರೋಬ್ಬರಿ 20 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ 'ಬಾಬಾ' ಸಿನಿಮಾವನ್ನು ಅಪ್‌ಗ್ರೇಡ್ ಮಾಡಿ, ಕೆಲವು ದೃಶ್ಯಗಳನ್ನು ಸೇರಿಸಿ ಇದೀಗ ಮರು ಬಿಡುಗಡೆ ಮಾಡಲಾಗುತ್ತಿದೆ.
ರಜನೀಕಾಂತ್ ನಟಿಸಿದ್ದ 'ಬಾಬಾ' ಸಿನಿಮಾ 2002 ರಲ್ಲಿ ಬಿಡುಗಡೆ ಆಗಿತ್ತು. ಬಾಲಿವುಡ್ ಖ್ಯಾತ ನಟಿ ಮೊನಿಷಾ ಕೊಯಿರಾಲ ನಟಿಸಿದ್ದ ಆ ಸಿನಿಮಾ ಆಗ ಬಾಕ್ಸ್ ಆಫೀಸ್‌ನಲ್ಲಿ ಅಟ್ಟರ್ ಫ್ಲಾಪ್ ಆಗಿತ್ತು. ವಿತರಕರಿಗೆ ಹಣವನ್ನು ಹಿಂದಿರುಗಿಸಿದ್ದರು ರಜನೀಕಾಂತ್.
ಸೋತು ಹೋಗಿದ್ದ ಅದೇ ಸಿನಿಮಾವನ್ನು ಈಗ ಇಪ್ಪತ್ತು ವರ್ಷಗಳ ಬಳಿಕ ಬಿಡುಗಡೆ ಮಾಡಲು ಮುಂದಾಗಿದ್ದಾರೆ ರಜನೀಕಾಂತ್. ಅದಕ್ಕೆ ಕಾರಣ ಕನ್ನಡದ ಸಿನಿಮಾ 'ಕಾಂತಾರ' ಎಂದರೆ ನೀವು ನಂಬಲೇ ಬೇಕು. ಏಕೆಂದರೆ ಈ ಸಿನಿಮಾದ ಮರುಬಿಡುಗಡೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ರಜನೀಕಾಂತ್‌ರ ಆಪ್ತ ಹಾಗೂ 'ಬಾಬಾ' ಸಿನಿಮಾದ ನಿರ್ದೇಶಕ ಸುರೇಶ್ ಕೃಷ್ಣನ್ ಸ್ವತಃ ಈ ವಿಷಯ ಹೇಳಿಕೊಂಡಿದ್ದಾರೆ.

ಇಪ್ಪತ್ತು ವರ್ಷಗಳ ಬಳಿಕ 'ಬಾಬಾ' ಬಿಡುಗಡೆ
ಇಪ್ಪತ್ತು ವರ್ಷಗಳ ಬಳಿಕ 'ಬಾಬಾ' ಸಿನಿಮಾ ಮರು ಬಿಡುಗಡೆ ಮಾಡಲು ಕಾರಣವೇನು ಎಂಬ ಬಗ್ಗೆ ಮಾಧ್ಯಮವೊಂದನ್ನು ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಿರ್ದೇಶಕ ಸುರೇಶ್ ಕೃಷ್ಣನ್, ''ಕೆಲವು ದಿನಗಳ ಹಿಂದೆ ರಜನೀಕಾಂತ್, 'ಬಾಬಾ' ಸಿನಿಮಾವುಳ್ಳ ಹಾರ್ಡ್ ಡಿಸ್ಕ್ ಕಳಿಸಿ ಸಿನಿಮಾ ನೋಡು ಎಂದು ಹೇಳಿದಾಗ ನನಗೆ ಆಶ್ಚರ್ಯವಾಯಿತು. ನಾನೂ ಸಹ 'ಬಾಬಾ' ಸಿನಿಮಾ ನೋಡಿ ವರ್ಷಗಳೇ ಆಗಿಬಿಟ್ಟಿತ್ತು. ಹಾಗಾಗಿ ಮತ್ತೆ ನೋಡಿದೆ. ನನಗೆ ಖುಷಿ ಎನಿಸಿತು. ಚೆನ್ನಾಗಿದೆ ಎನ್ನಿಸಿತು'' ಎಂದಿದ್ದಾರೆ ಸುರೇಶ್ ಕೃಷ್ಣನ್.

'ಕಾಂತಾರ' ಸಿನಿಮಾದಿಂದ ಸ್ಪೂರ್ತಿ
''ಈಗ 'ಬಾಬಾ' ಸಿನಿಮಾ ಬಿಡುಗಡೆ ಮಾಡಿದರೆ ಯಶಸ್ವಿಯಾಗಬಹುದು ಎಂದು ರಜನೀಕಾಂತ್ ಗೆ ಅನಿಸಿದೆ. ಈಗಿನ ಪ್ರೇಕ್ಷಕರು ಫ್ಯಾಂಟಸಿ ಉಳ್ಳ, ಮಾಸ್ ಸಿನಿಮಾಗಳನ್ನು ಇಷ್ಟಪಡುತ್ತಿದ್ದಾರೆ. 'ಕಾರ್ತಿಕೇಯ 2', 'ಕಾಂತಾರ' ಸಿನಿಮಾಗಳಿಂದಾಗಿ ಅದು ಪ್ರೂವ್ ಆಗಿದೆ. ಅದೇ ಮಾದರಿಯ ಕತೆಯುಳ್ಳ 'ಬಾಬಾ' ಸಿನಿಮಾ ಈಗ ವರ್ಕ್ ಆಗುತ್ತದೆ ಎಂದು ರಜನೀಕಾಂತ್‌ಗೆ ಅನಿಸಿದೆ. ಅದು ನಿಜವೂ ಹೌದು. ಇಪ್ಪತ್ತು ವರ್ಷಗಳ ಹಿಂದೆ 'ಬಾಬಾ' ಸಿನಿಮಾಕ್ಕೆ ಸಿಗಬೇಕಾದ ಗೌರವ, ಪ್ರೀತಿ ಸಿಕ್ಕಿರಲಿಲ್ಲ ಆದರೆ ಈಗ ಅದು ದೊರಕುವ ವಿಶ್ವಾಸವಿದೆ'' ಎಂದಿದ್ದಾರೆ ಸುಂದರ್ ಕೃಷ್ಣನ್.

ಹೊಸ ಅವತಾರದಲ್ಲಿ ಬರಲಿರುವ 'ಬಾಬಾ'
'ಬಾಬಾ' ಸಿನಿಮಾ ಹೊಸ ಅವತಾರದಲ್ಲಿ ಬಿಡುಗಡೆ ಆಗಲಿದೆ. ರಜನೀಕಾಂತ್ ಮತ್ತೊಮ್ಮೆ ಸಿನಿಮಾಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಸಿನಿಮಾಕ್ಕೆ ಹೊಸ ರೀತಿಯ ಕಲರ್ ಗ್ರೇಡಿಂಗ್ ಮಾಡಲಾಗಿದೆ. ಸಿನಿಮಾದ ಕೆಲವು ದೃಶ್ಯಗಳನ್ನು ಕತ್ತರಿಸಿ, ಕೆಲವು ದೃಶ್ಯಗಳನ್ನು ಹೊಸದಾಗಿ ಸೇರಿಸಲಾಗಿದೆ. ಸಂಗೀತವನ್ನು ಅಪ್‌ಡೇಟ್ ಮಾಡಲಾಗಿದೆ. ಒಟ್ಟಾರೆಯಾಗಿ 'ಬಾಬಾ' ಸಿನಿಮಾಕ್ಕೆ ಹೊಸತನದ ಟಚ್ ನೀಡಲಾಗಿದೆ. ರಜನೀಕಾಂತ್ ಹುಟ್ಟುಹಬ್ಬ ಡಿಸೆಂಬರ್ 12 ರಂದು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ 'ಬಾಬಾ' ಸಿನಿಮಾ ಮರು ಬಿಡುಗಡೆ ಆಗಲಿದೆ.

'ಕಾಂತಾರ' ಸಿನಿಮಾ ಮೆಚ್ಚಿದ್ದ ರಜನೀಕಾಂತ್
ರಜನೀಕಾಂತ್ 'ಕಾಂತಾರ' ಸಿನಿಮಾವನ್ನು ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದರು. 'ಕಾಂತಾರ'ದ ನಿರ್ದೇಶಕ ರಿಷಬ್ ಶೆಟ್ಟಿಯನ್ನು ಮನೆಗೆ ಕರೆಸಿ ಅವರಿಗೆ ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿದ್ದರು. ರಿಷಬ್ ಶೆಟ್ಟಿ ಜೊತೆ ಬಹು ಸಮಯ ಸಿನಿಮಾಗಳ ಬಗ್ಗೆ ಚರ್ಚೆ ಸಹ ಮಾಡಿದ್ದಾರೆ. 'ಕಾಂತಾರ' ಸಿನಿಮಾ ಅತಿಮಾನುಷ ಶಕ್ತಿ ಹಾಗೂ ಮಾಸ್ ವ್ಯಕ್ತಿತ್ವದ ನಾಯಕನ ಕತೆ ಒಳಗೊಂಡಿರುವುದನ್ನು ಗಮನಿಸಿದ ಹಾಗೂ ಸಿನಿಮಾಕ್ಕೆ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳ ಬಗ್ಗೆ ರಿಷಬ್‌ರಿಂದ ಕೇಳಿ ತಿಳಿದ ರಜನೀಕಾಂತ್. ಅದೇ ಸಮಯದಲ್ಲಿ ತಮ್ಮ 'ಬಾಬಾ' ಸಿನಿಮಾವನ್ನು ಮರು ಬಿಡುಗಡೆ ಮಾಡಲು ಚಿಂತಿಸಿರುವ ಸಾಧ್ಯತೆ ದಟ್ಟ. 'ಬಾಬಾ' ಮರು ಬಿಡುಗಡೆ ಆಗುತ್ತಿದೆ. ಈ ಬಾರಿಯಾದರೂ ಈ ಸಿನಿಮಾ ರಜನೀಕಾಂತ್ ಕೈ ಹಿಡಿಯುತ್ತದೆಯಾ? ಕಾದು ನೋಡಬೇಕಿದೆ.


Click it and Unblock the Notifications











