ಕಪಿಲ್ ದೇವ್ ಜೊತೆ ಸೂಪರ್ ಸ್ಟಾರ್ ರಜನಿಕಾಂತ್: ಯಾವ ಸಿನಿಮಾ? ಪಾಜಿ ಪಾತ್ರ ಏನು?
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಮಾಜಿ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಪಿಲ್ ದೇವ್ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾತೆ. ತಲೈವಾ- ಪಾಜಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅಂದಹಾಗೆ ಇದು ಔಪಚಾರಿಕ ಭೇಟಿ ವೇಳಿ ಕ್ಲಿಕ್ಕಿಸಿದ ಫೋಟೊ ಖಂಡಿತ ಅಲ್ಲ. ಇಬ್ಬರು ಈಗ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ರಜನಿಕಾಂತ್ ಈಗ 3 ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. 'ಜೈಲರ್' ಸಿನಿಮಾ ಶೂಟಿಂಗ್ ಮುಕ್ತಾಯದ ಹಂತ ತಲುಪಿದೆ. ಮಗಳಯ ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಚಿತ್ರದ ಕೀ ರೋಲ್‌ವೊಂದಕ್ಕೆ ತಲೈವಾ ಬಣ್ಣ ಹಚ್ಚಿದ್ದಾರೆ. ಇನ್ನು ಸೂಪರ್ ಸ್ಟಾರ್ 170ನೇ ಸಿನಿಮಾ ಕೂಡ ಘೋಷಣೆ ಆಗಿದೆ. ಈ ಸಿನಿಮಾವನ್ನಯ ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಲೋಕೇಶ್ ಕನಕರಾಜ್ ಜೊತೆಗೂ ರಜನಿಕಾಂತ್ ಸಿನಿಮಾ ಮಾಡುವ ಸುಳಿವು ಸಿಕ್ತಿದೆ.

ತಲೈವಾ ಜೊತೆ ಕಪಿಲ್ ದೇವ್ ಯಾವ ಸಿನಿಮಾದಲ್ಲಿ ನಟಿಸ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ 'ಲಾಲ್ ಸಲಾಂ'. ಕ್ರಿಕೆಟ್ ಹಾಗೂ ಕಮ್ಯುನಿಸಂ ಹಿನ್ನೆಲೆಯಲ್ಲಿ ಈ ಸಿನಿಮಾ ಕತೆ ಸಾಗಲಿದೆ. ಚಿತ್ರದಲ್ಲಿ ಮೊಹಿದ್ದೀನ್ ಭಾಯ್ ಎನ್ನುವ ಪವರ್‌ಫುಲ್ ರೋಲ್‌ನಲ್ಲಿ ತಲೈವಾ ನಟಿಸ್ತಿದ್ದಾರೆ. ಇತ್ತೀಚೆಗೆ ಸೂಪರ್ ಸ್ಟಾರ್ ಕ್ಯಾರೆಕ್ಟರ್ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಇದೇ ಚಿತ್ರದ ಸನ್ನಿವೇಶವೊಂದರಲ್ಲಿ ಕಪಿಲ್ ದೇವ್ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತ ಕ್ರಿಕೆಟ್‌ಗೆ ಕಪಿಲ್ ದೇವ್ ಕೊಡುಗೆ ಮರೆಯಲು ಸಾಧ್ಯವಿಲ್ಲ. ದೇಶಕ್ಕೆ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ಕೀರ್ತಿ ಪಾಜಿಗೆ ಸಲ್ಲುತ್ತದೆ.
'ಲಾಲ್ ಸಲಾಂ' ಚಿತ್ರದಲ್ಲಿ ಕಪಿಲ್ ದೇವ್ ತಾವಾಗಿಯೇ ನಟಿಸುತ್ತಿರುವ ಸಾಧ್ಯತೆಯಿದೆ. "ಮೊದಲ ಬಾರಿಗೆ ಕ್ರಿಕೆಟ್ ವರ್ಲ್ಡ್ ಕಪ್ ಗೆದ್ದು ತಂದು ಭಾರತ ದೇಶ ಹೆಮ್ಮೆ ಪಡುವಂತೆ ಮಾಡಿದ ಲೆಜೆಂಡರಿ, ಬಹಳ ಗೌರವಾನ್ವಿತ ಮತ್ತು ಅದ್ಭುತ ವ್ಯಕ್ತಿತ್ವದ ಕಪಿಲ್‌ದೇವ್ ಅವರ ಜೊತೆ ಕೆಲಸ ಮಾಡುವುದು ನನಗೆ ಗೌರವ ತಂದಿದೆ" ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. ವಿಷ್ಣು ವಿಶಾಲ್, ವಿಕ್ರಾಂತ್ ಈ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. 7 ವರ್ಷಗಳ ನಂತರ ಐಶ್ವರ್ಯ ಮತ್ತೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

ರಜನಿಕಾಂತ್ ವೈಟ್ ಅಂಡ್ ವೈಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರೆ ಕಪಿಲ್ ದೇವ್ ಟೀ ಶರ್ಟ್, ಪ್ಯಾಂಟ್‌ನಲ್ಲಿ ಮಿಂಚಿದ್ದಾರೆ. ಇಬ್ಬರು ಸಹಜವಾಗಿ ಮಾತನಾಡುತ್ತಿರುವಾಗ ಫೋಟೊ ಕ್ಲಿಕ್ಕಿಸಲಾಗಿದೆ. ಸದ್ಯ ಕಪಿಲ್ ದೇವ್ ಎಂಟ್ರಿಯಿಂದ 'ಲಾಲ್ ಸಲಾಂ' ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಚಿತ್ರದ ಚಿತ್ರೀಕರಣದಲ್ಲಿ ರಜನಿಕಾಂತ್ ಕೂಡ ಭಾಗವಹಿಸಿದ್ದರು. ಇದೀಗ ಮತ್ತೆ ಅಲ್ಲೇ ಶೂಟಿಂಗ್ ನಡೀತಿದ್ದು ಅದೇ ವೇಳೆ ಈ ಫೋಟೊ ಕ್ಲಿಕ್ಕಿಸಲಾಗಿದೆ.
'ಲಾಲ್ ಸಲಾಂ' ಚಿತ್ರಕ್ಕೆ ಎ. ಆರ್ ರಹಮಾನ್ ಸಂಗೀತವಿದೆ. ಇನ್ನು 2 ವರ್ಷಗಳಿಂದ ರಜನಿಕಾಂತ್ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಇದೀಗ 'ಜೈಲರ್' ಸಿನಿಮಾ ಶೂಟಿಂಗ್ ಮುಕ್ತಾಯದ ಹಂತ ತಲುಪಿದೆ. ನೆಲ್ಸನ್ ನಿರ್ದೇಶನದ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ಮೋಹನ್ ಲಾಲ್, ರಮ್ಯಾ ಕೃಷ್ಣ, ತಮನ್ನಾ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡ್ತಿದೆ. ಆಗಸ್ಟ್ 10ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ.
'ಜೈಲರ್' ಹಾಗೂ 'ಲಾಲ್ ಸಲಾಂ' ನಂತರ ಜ್ಞಾನವೇಲ್ ನಿರ್ದೇಶನದ ಚಿತ್ರಕ್ಕೆ ತಲೈವಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಜೈ ಭೀಮ್' ಹಿಟ್ ಸಿನಿಮಾ ಕೊಟ್ಟ ನಿರ್ದೇಶಕರು ತಲೈವಾಗಾಗಿ ಒಂದೊಳ್ಳೆ ಕಥೆ ಸಿದ್ಧಪಡಿಸಿದ್ದಾರೆ. ಚಿತ್ರದಲ್ಲಿ ಮುಂಬೈ ಮೂಲದ ಪೊಲೀಸ್ ಆಫೀಸರ್ ರೋಲ್‌ನಲ್ಲಿ ಸೂಪರ್ ಸ್ಟಾರ್ ನಟಿಸ್ತಾರೆ ಎನ್ನಲಾಗ್ತಿದೆ.


Click it and Unblock the Notifications











