Jailer: ಜೈಲರ್ ಕನ್ನಡ ಡಬಿಂಗ್ ಕಥೆ ಏನಾಯ್ತು? ಮೊದಲ ವಾರ ಮಾಡಿದ ಕಲೆಕ್ಷನ್ ಎಷ್ಟು?
ಸದ್ಯ ಭಾರತ ಚಿತ್ರ ರಂಗದಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಚಿತ್ರವೆಂದರೆ ಅದು ತಮಿಳು ಚಿತ್ರ ಜೈಲರ್. ಹೌದು, ಆಗಸ್ಟ್ 10ರಂದು ಬಿಡುಗಡೆಯಾದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಿರ್ದೇಶಕ ನೆಲ್ಸನ್ ಕುಮಾರ್ ಕಾಂಬಿನೇಶನ್ ನ ಸಿನಿಮಾ ಜೈಲರ್ ಅಬ್ಬರಿಸುತ್ತಿದ್ದು, ದಿನದಿಂದ ದಿನಕ್ಕೆ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಲೇ ಇದೆ.
ಈ ಹಿಂದಿನ ರಜನಿ ಚಿತ್ರಗಳಿಗೆ ಇದ್ದಷ್ಟೇ ಕ್ರೇಜ್ ಹಾಗೂ ನಿರೀಕ್ಷೆಯೊಂದಿಗೆ ಬಿಡುಗಡೆಗೊಂಡ ಜೈಲರ್ ಮೊದಲ ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಹಿಟ್ ಟಾಕ್ ಪಡೆದುಕೊಂಡು ಚಿತ್ರ ಗೆದ್ದಿದೆ ಎಂಬ ಸ್ಪಷ್ಟ ಫಲಿತಾಂಶವನ್ನು ಗಳಿಸಿತು.

ಹೀಗೆ ಫಸ್ಟ್ ಶೋ ಮುಗಿಯುತ್ತಿದ್ದಂತೆಯೇ ಹಿಟ್ ಎನಿಸಿಕೊಂಡ ಜೈಲರ್ ಸದ್ಯ ತನ್ನ 7 ದಿನಗಳ ಓಟವನ್ನು ಯಶಸ್ವಿಯಾಗಿ ಪೂರೈಸಿದ್ದು, ವಿಶ್ವದಾದ್ಯಂತ ಒಟ್ಟು 425 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಜೈಲರ್ ತಮಿಳಿನಾಡಿನಲ್ಲಿ ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿಯೂ ಸಹ ಅಬ್ಬರದ ಪ್ರದರ್ಶನವನ್ನು ಕಾಣುತ್ತಿದೆ.
ಹೌದು, ಜೈಲರ್ ವಿವಿಧ ರಾಜ್ಯಗಳಲ್ಲಿ ಅಬ್ಬರದ ಕಲೆಕ್ಷನ್ ಮಾಡಿದ್ದು, ಕರ್ನಾಟಕದಲ್ಲಿ ಮೊದಲ 7 ದಿನಗಳಲ್ಲಿ 47.5 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ತೆಲುಗು ರಾಜ್ಯಗಳಲ್ಲಿ ಜೈಲರ್ ಮೊದಲ 7 ದಿನಗಳಲ್ಲಿ 53.5 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಕೇರಳದಲ್ಲಿ ಮೊದಲ 7 ದಿನಗಳಲ್ಲಿ ಜೈಲರ್ 34 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಹೀಗೆ ಎಲ್ಲಾ ರಾಜ್ಯಗಳಲ್ಲಿಯೂ ಅಬ್ಬರಿಸುತ್ತಿರುವ ಜೈಲರ್ ತಮಿಳು ಮಾತ್ರವಲ್ಲದೆ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಸಹ ಡಬ್ ಆಗಿದ್ದು, ಆ ಅವತರಣಿಕೆಗಳೂ ಸಹ ಒಳ್ಳೆಯ ಗಳಿಕೆಯನ್ನೇ ಮಾಡಿವೆ. ಹೌದು, ಜೈಲರ್ ವಿವಿಧ ಭಾಷೆಗಳ ಡಬಿಂಗ್ ವರ್ಷನ್ ಉತ್ತಮ ಕಲೆಕ್ಷನ್ ಮಾಡಿವೆ. ಅದರಲ್ಲೂ ಜೈಲರ್ ಕನ್ನಡ ವರ್ಷನ್ ನಿರೀಕ್ಷೆಗೂ ಮೀರಿದ ಗಳಿಕೆಯನ್ನು ಮಾಡಿದ್ದು, ಕನ್ನಡ ಡಬಿಂಗ್ ಸಿನಿಮಾಗಳಿಗೆ ಬೆಲೆ ಇದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಹೌದು, ಜೈಲರ್ ಕನ್ನಡ ವರ್ಷನ್ ಮೊದಲ 7 ದಿನಗಳಲ್ಲಿ 2.2 ಕೋಟಿ ರೂಪಾಯಿ ಗ್ರಾಸ್ ಗಳಿಕೆ ಮಾಡಿದೆ. ಈ ಮೂಲಕ ಜೈಲರ್ ಕನ್ನಡ ವರ್ಷನ್ ಆದಿಪುರುಷ್ ಕನ್ನಡ ವರ್ಷನ್ ಗಳಿಕೆ ದಾಖಲೆಯನ್ನು ಮುರಿದುಹಾಕಿ ನಂಬರ್ ಒನ್ ಎನಿಸಿಕೊಂಡಿದೆ. ಆದಿಪುರುಷ್ ಕನ್ನಡ ವರ್ಷನ್ ಒಟ್ಟು 2 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು.
ಜೈಲರ್ ಕನ್ನಡ ಡಬಿಂಗ್ ವರ್ಷನ್ 7 ದಿನಗಳಲ್ಲಿ ಮಾಡಿದ ಪ್ರತಿದಿನದ ಕಲೆಕ್ಷನ್
ದಿನ 1 - 24 ಲಕ್ಷ ರೂಪಾಯಿಗಳು
ದಿನ 2 - 20 ಲಕ್ಷ ರೂಪಾಯಿಗಳು
ದಿನ 3 - 33 ಲಕ್ಷ ರೂಪಾಯಿಗಳು
ದಿನ 4 - 43 ಲಕ್ಷ ರೂಪಾಯಿಗಳು
ದಿನ 5 - 29 ಲಕ್ಷ ರೂಪಾಯಿಗಳು
ದಿನ 6 - 52 ಲಕ್ಷ ರೂಪಾಯಿಗಳು
ದಿನ 7 - 19 ಲಕ್ಷ ರೂಪಾಯಿಗಳು


Click it and Unblock the Notifications











