ಬ್ಯಾಕ್ ಟು ಬ್ಯಾಕ್ ಸೀಕ್ವೆಲ್ ಸಿನಿಮಾಗಳಲ್ಲಿ ಮುಳುಗಿದ ಕಾರ್ತಿ; ಇಲ್ಲಿದೆ ಲಿಸ್ಟ್
ಭಾರತೀಯ ಚಿತ್ರರಂಗದಲ್ಲೀಗ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ಜೋರಾಗಿದೆ. ಹಿಟ್ ಸಿನಿಮಾಗಳ ಕಥೆಯನ್ನು ಮುಂದುವರೆಸುವುದು, ಅಥವಾ ಒಂದೇ ಕಥೆಯನ್ನು ಎರಡು ಭಾಗಗಳಾಗಿ ಹೇಳುವುದು ನಡೀತಿದೆ. ಸರಣಿ ರೀತಿಯಲ್ಲಿ ಒಂದೇ ರೀತಿಯ ಬೇರೆ ಬೇರೆ ಕಥೆಗಳನ್ನು ಹೇಳುವ ಪ್ರಯತ್ನವೂ ಆರಂಭವಾಗಿದೆ.
ಸೀಕ್ವೆಲ್ ಜೊತೆಗೆ ಇತ್ತೀಚೆಗೆ ಪ್ರೀಕ್ವೆಲ್ ಸಿನಿಮಾಗಳ ಪಟ್ಟಿ ಕೂಡ ಬೆಳೆಯುತ್ತಿದೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಸೀಕ್ವೆಲ್ ಸಿನಿಮಾ ಬೇಕಾ ಬೇಡ್ವಾ? ಎನ್ನುವ ಚರ್ಚೆ ಕೂಡ ಇದೆ. ಒಂದೇ ಕಥೆಯನ್ನು ರಬ್ಬರ್ ರೀತಿ ಎರಡು ಭಾಗಗಳಾಗಿ ಎಳೆಯುವುದು ಬೇಡ, ಸ್ಟಾರ್ ನಟರು ಒಂದೇ ಚಿತ್ರದಲ್ಲಿ ನಾಲ್ಕೈದು ವರ್ಷ ಮುಳುಗಿಬಿಡುತ್ತಾರೆ ಹೀಗೆ ಒಂದಷ್ಟು ಟೀಕೆ ಕೂಡ ವ್ಯಕ್ತವಾಗುತ್ತದೆ. ಆದರೆ 'KGF', 'ಪುಷ್ಪ' ರೀತಿ ಒಂದು ಬ್ರ್ಯಾಂಡ್ ಕ್ರಿಯೇಟ್ ಆಗಿಬಿಟ್ಟರೆ ಅದರಲ್ಲೇ ಮತ್ತಷ್ಟು ಸಿನಿಮಾ ಮಾಡಬಹುದಲ್ಲ ಎನ್ನುವ ಲೆಕ್ಕಾಚಾರ ಕೆಲವರದ್ದು.

ತಮಿಳು ನಟ ಕಾರ್ತಿ ಇದೀಗ ಬ್ಯಾಕ್ ಟು ಬ್ಯಾಕ್ ಸೀಕ್ವೆಲ್ ಸಿನಿಮಾಗಳಲ್ಲಿ ನಟಿಸುವಂತಾಗಿದೆ. ಇತ್ತೀಚೆಗೆ ಬಂದಿರುವ ತೆಲುಗಿನ 'ಹಿಟ್- 3' ಚಿತ್ರದಲ್ಲಿ ನಾನಿ ನಟಿಸಿದ್ದಾರೆ. ಸಿನಿಮಾ ಸಖತ್ ಸದ್ದು ಮಾಡ್ತಿದೆ. 'ಹಿಟ್-4' ಸಿನಿಮಾ ಕೂಡ ಘೋಷಣೆ ಆಗಿದೆ. ಇದೊಂದು ಕ್ರೈಂ ಥ್ರಿಲ್ಲರ್ ಸರಣಿ ಸಿನಿಮಾ. ಒಂದೊಂದು ಕೇಸ್ ಅನ್ನು ಒಬ್ಬೊಬ್ಬ ಅಧಿಕಾರಿ ಭೇದಿಸುವಂತೆ 3 ಬೇರೆ ಬೇರೆ ಸಿನಿಮಾಗಳು ಬಂದಿದೆ. 4ನೇ ಚಿತ್ರದಲ್ಲಿ ಕಾರ್ತಿ ನಟಿಸಲಿದ್ದಾರೆ.
ಎಸಿಪಿ ವೀರಪ್ಪನ್ ಪಾತ್ರದಲ್ಲಿ ಕಾರ್ತಿ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ. 'ಹಿಟ್-3' ಕ್ಲೈಮ್ಯಾಕ್ಸ್‌ನಲ್ಲಿ ಕಾರ್ತಿ ಗನ್ ಹಿಡಿದು ಬರುವ ಸಣ್ಣ ಝಲಕ್ ಕೂಡ ಇದೆ. ಆ ಮೂಲಕ ಸರಣಿಯ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಹುಟ್ಟುಹಾಕಿದೆ ಚಿತ್ರತಂಡ. ಅಂದಹಾಗೆ ಕಾರ್ತಿ ಸದ್ಯ 'ಸರ್ದಾರ್- 2' ಚಿತ್ರದಲ್ಲಿ ನಟಿಸುತ್ತಿದ್ದಾರೆ.
3 ವರ್ಷಗಳ ಹಿಂದೆ ಕಾರ್ತಿ ನಟನೆಯ 'ಸರ್ದಾರ್' ಸಿನಿಮಾ ತೆರೆಗೆ ಬಂದು ಗೆದ್ದಿತ್ತು. ಇದೀಗ ಅದರ ಮುಂದುವರೆದ ಭಾಗ ತಯಾರಾಗುತ್ತಿದೆ. ಈ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಪಿ. ಎಸ್ ಮಿತ್ರನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಾಳವಿಕಾ ಮೋಹನನ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಎಸ್. ಜೆ ಸೂರ್ಯ, ಆಶಿಕಾ ರಂಗನಾಥ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.
ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಕಾರ್ತಿ ನಟನೆಯ 'ಕೈದಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಚಿತ್ರದ ಸೀಕ್ವೆಲ್ ಕೂಡ ಬರಬೇಕಿದೆ. ಲೋಕೇಶ್ ಇತ್ತೀಚೆಗೆ ಆ ಬಗ್ಗೆ ಮಾತನಾಡಿದ್ದಾರೆ. 'ಕೂಲಿ' ಸಿನಿಮಾ ಬಳಿಕ 'ಕೈದಿ- 2' ಸಿನಿಮಾ ಮಾಡ್ತೀನಿ ಎಂದಿದ್ದಾರೆ. ಈ ಸಿನಿಮಾ ಕಥೆ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ.
'ಥೀರನ್ ಅಧಿಕಾರಮ್ ಒಂಡ್ರು' ಕಾರ್ತಿ ನಟನೆಯ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ. ವಿನೋದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಬಹಳ ದಿನಗಳಿಂದ ಈ ಸಿನಿಮಾ ಸೀಕ್ವೆಲ್ ಮಾಡಬೇಕೆಂದು ಅಭಿಮಾನಿಗಳು ಕೇಳುತ್ತಿದ್ದಾರೆ. ವಿನೋದ್ ಕೂಡ ಈ ಬಗ್ಗೆ ಚರ್ಚಿಸುತ್ತಿದ್ದಾರೆ. 'ಖಾಕಿ' ಹೆಸರಿನಲ್ಲಿ ತೆಲುಗಿಗೂ ಈ ಸಿನಿಮಾ ಡಬ್ ಆಗಿ ಸಕ್ಸಸ್ ಕಂಡಿತ್ತು.
ಹೀಗೆ ಸಾಲು ಸಾಲು ಸೀಕ್ವೆಲ್ ಸಿನಿಮಾಗಳಲ್ಲಿ ಕಾರ್ತಿ ನಟಿಸುವಂತಾಗಿದೆ. ಹಳೇ ಕಥೆಗಳ ಸುತ್ತಾ ಸುತ್ತುತ್ತಿರುತ್ತಾರಾ? ಕಾರ್ತಿ ಬೇರೆ ಸಿನಿಮಾಗಳಲ್ಲಿ ಕೂಡ ನಟಿಸುತ್ತಾರಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಅಭಿಮಾನಿಗಳು ಸಿನಿಮಾ ಗೆದ್ದರೆ ಸಾಕು, ಸೀಕ್ವೆಲ್ ಆಗಿದ್ರೆ ಏನು? ರೀಮೇಕ್ ಆಗಿದ್ರೆ? ಏನು ಎಂದು ಹೇಳುತ್ತಿದ್ದಾರೆ.


Click it and Unblock the Notifications











