ತಮಿಳು ಪತ್ರಕರ್ತನಿಗೆ ಕಿಚ್ಚ ಸುದೀಪ್ ಕ್ಲಾಸ್; ಇದೆಲ್ಲಾ ಬೇಕಿತ್ತಾ ಎಂದ ನಟಿ ಕಸ್ತೂರಿ
ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗ್ತಿದೆ. ಇತ್ತೀಚೆಗೆ ಟ್ರೈಲರ್ ರಿಲೀಸ್ ಮಾಡಿ ಸುದ್ದಿಗೋಷ್ಠಿ ನಡೆಸಿ ಚಿತ್ರತಂಡ ಮಾತನಾಡಿತ್ತು. ಬಳಿಕ ಕನ್ನಡ ಮಾಧ್ಯಮಗಳಿಗೆ ಸುದೀಪ್ ಸಂದರ್ಶನ ಕೊಟ್ಟಿದ್ದರು. ಇದೀಗ ಬೇರೆ ಭಾಷೆಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ.
ಮೊನ್ನೆ(ಡಿಸೆಂಬರ್ 15) ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ರತಂಡ 'ಮಾರ್ಕ್' ಚಿತ್ರದ ಬಗ್ಗೆ ಮಾತನಾಡಿತ್ತು. ಈ ವೇಳೆ ವಿಚಿತ್ರ ಪ್ರಸಂಗ ಎದುರಾಗಿತ್ತು. ತಮಿಳು ಪತ್ರಕರ್ತರೊಬ್ಬರು ವಿವಾದ ಸೃಷ್ಟಿಸುವಂತೆ ಪ್ರಶ್ನೆ ಮಾಡಿದ್ದರು. ಇದಕ್ಕೆ ಸುದೀಪ್ ಉತ್ತರಿಗೆ ನಯವಾಗಿಯೇ ಕ್ಲಾಸ್ ತಗೊಂಡಿದ್ದರು. ಅಲ್ಲಿ ನೆರೆದಿದ್ದವರು ಕಿಚ್ಚನ ನಡೆಗೆ ಚಪ್ಪಾಳೆ ತಟ್ಟಿ ಪ್ರಶಂಸಿಸಿದ್ದರು. ಈ ಬಗ್ಗೆ ನಟಿ ಕಸ್ತೂರಿ ಶಂಕರ್ ಕೂಡ ಟ್ವೀಟ್ ಮಾಡಿದ್ದಾರೆ.

ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮಾರ್ಕ್' ಚಿತ್ರದಲ್ಲಿ ದೀಪ್ಷಿಕಾ ಹಾಗೂ ರೋಶಿನಿ ಪ್ರಕಾಶ್ ಕೂಡ ನಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರಿಬ್ಬರು ಕೂಡ ವೇದಿಕೆಯ ಒಂದು ಕೊನೆಯಲ್ಲಿ ಕೂತಿದ್ದರು. ಟ್ರೈಲರ್ ನೋಡಿದ ಬಳಿಕ ತಮಿಳು ಪತ್ರಕರ್ತರೊಬ್ಬರು ನಟಿಯರಿಗೆ ಪ್ರಚೋದನಾಕಾರಿಯಲ್ಲಿ ವಿಚಿತ್ರ ಪ್ರಶ್ನೆ ಕೇಳಿದ್ದಾರೆ. "ಚಿತ್ರದ ಟ್ರೈಲರ್ ಚೆನ್ನಾಗಿದೆ, ನಿಮ್ಮ ಪಾತ್ರ ಹೇಗಿದೆ? ಈಗ ವೇದಿಕೆ ಮೇಲೆ ನಿಮ್ಮನ್ನು ಸೈಡಿನಲ್ಲಿ ಕೂರಿಸಿರುವಂತೆ ಚಿತ್ರದಲ್ಲಿ ಕೂಡ ನಿಮ್ಮನ್ನು ಸೈಡ್ ಲೈನ್ ಮಾಡಲಾಗಿದೆಯೇ?" ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಇಂತಾದೊಂದು ಪ್ರಶ್ನೆಯನ್ನು ನಿರೀಕ್ಷೆ ಮಾಡಿರದ ನಟಿ ರೋಶಿನಿ ತಬ್ಬಿಬ್ಬಾಗಿದ್ದರು. ಕೂಡಲೇ ನಟ ಸುದೀಪ್ ಮಧ್ಯ ಪ್ರವೇಶಿಸಿ ನಯವಾಗಿಯೇ ತಿರುಗೇಟು ನೀಡಿದ್ದರು. "ಇಂತದ್ದು ಒಂದೇ ಒಂದು ಪ್ರಶ್ನೆ ನಮ್ಮ ಸಿನಿಮಾ ಸೆಟ್‌ನಲ್ಲಿ ಬರಲಿಲ್ಲ. ಯಾಕಮ್ಮಾ ನಿಮ್ಮನ್ನು ಕೊನೆಗೆ ಕರೆಯುತ್ತಿದ್ದಾರೆ ಎನ್ನಲಿಲ್ಲ. ಅದಕ್ಕೆ ಸಿನಿಮಾ ಚೆನ್ನಾಗಿ ಬಂತು" ಎಂದಿದ್ದಾರೆ. ಬಳಿಕ ಸುದೀಪ್ ಎದ್ದು ಹೋಗಿ ನಟಿಯರಿಬ್ಬರು ಕೂತಿದ್ದ ಜಾಗದಲ್ಲಿ ಹೋಗಿ ಕೂತರು. ತಾವು ಕೂತಿದ್ದ ಜಾಗದಲ್ಲಿ ನಟಿಯರನ್ನು ಕೂರುವಂತೆ ಹೇಳಿದ್ದಾರೆ. "ಇದು ಬೇಕೆಂದು ಆಗಿದ್ದಲ್ಲ, ಇದನ್ನು ತಲೆಯಲ್ಲಿಟ್ಟುಕೊಂಡು ಕೇಳಿದ್ರೆ, ಚೆನ್ನಾಗಿರಲ್ಲ, ಸಂಭ್ರಮಾಚರಣೆ ವೇಳೆ ಸಂಭ್ರಮಿಸಬೇಕು ಅಷ್ಟೆ" ಎಂದು ಸುದೀಪ್ ಹೇಳಿದ್ದಾರೆ.
ಬಳಿಕ ರೋಶಿನಿ ಎದ್ದು "ಸರ್ ಬನ್ನಿ ಸರ್ ನಿಮ್ಮ ಜಾಗದಲ್ಲಿ ಕೂತ್ಕೊಳ್ಳಿ" ಎಂದು ಕೇಳಿದ್ರು ಸುದೀಪ್ ಒಪ್ಪಲಿಲ್ಲ. ನೀವೇ ಅಲ್ಲಿ ಕೂತ್ಕೊಳಿ. ನಾನು ಇಲ್ಲಿ ಕೂರುತ್ತೀನಿ ಪರವಾಗಿಲ್ಲ ಎಂದಿದ್ದಾರೆ. ನಟಿ ಕಸ್ತೂರಿ ಈ ವೀಡಿಯೋ ಹಂಚಿಕೊಂಡು ಪ್ರತಿಕ್ರಿಯಿಸಿದ್ದಾರೆ. "ಗೌರಿ ಕಿಶನ್, ಈಗ ಸುದೀಪ್... ಬೇರೆ ರಾಜ್ಯದಿಂದ ಬಂದವರು ಪತ್ರಕರ್ತರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ನಾವು ನಮ್ಮ ಜೋಕ್‌ಗಳ ಬಗ್ಗೆ ಯಾವಾಗ ಬೇಕಾದರೂ ಮಾತನಾಡಬಹುದು, ಪರವಾಗಿಲ್ಲ. ದಯವಿಟ್ಟು ಹೊರಗಿನವರು ಬಂದಾಗ ಗೌರವದಿಂದ ನಡೆದುಕೊಳ್ಳಿ" ಎಂದು ಪತ್ರಕರ್ತರಿಗೆ ಕಿವಿಮಾತು ಹೇಳಿದ್ದಾರೆ. 'ಜಾಣ', 'ತುತ್ತಾಮುತ್ತಾ' ಸೇರಿ ಕೆಲ ಕನ್ನಡ ಚಿತ್ರಗಳಲ್ಲಿ ಕಸ್ತೂರಿ ನಟಿಸಿದ್ದರು.
ಕೆಲ ದಿನಗಳ ಹಿಂದೆ ನಟಿ ಗೌರಿ ಕಿಶನ್ ಅವರಿಗೆ ಕೂಡ ತಮಿಳು ಯೂಟ್ಯೂಬರ್ ಒಬ್ಬರು ಇಂಥದ್ದೆ ಪ್ರಶ್ನೆ ಕೇಳಿದ್ದರು. ಬಾಡಿ ಶೇಮಿಂಗ್ ಮಾಡಿದ್ದರು. "ನಿಮ್ಮ ದೇಹದ ತೂಕ ಎಷ್ಟು?" ಎಂದು ಗೌರಿ ಅವರಿಗೆ ಅಸಭ್ಯಕರ ರೀತಿಯಲ್ಲಿ ಯೂಟ್ಯೂಬ್ ಪ್ರಶ್ನಿಸಿದ್ದ. "ನನ್ನ ತೂಕ ಕಟ್ಟಿಕೊಂಡು ನಿಮಗೇನಾಗಬೇಕು?, ನೀವು ಸಿನಿಮಾ ಬಗ್ಗೆ ಪ್ರಶ್ನೆ ಕೇಳಿ" ಎಂದು ಗೌರಿ ಖಡಕ್ ಆಗಿಯೇ ತಿರುಗೇಟು ನೀಡಿದ್ದರು. ನಟಿ ಖುಷ್ಬೂ ಸೇರಿ ಕೆಲ ಸೆಲೆಬ್ರೆಟಿಗಳು ಕೂಡ ಗೌರಿ ಬೆಂಬಲಕ್ಕೆ ನಿಂತಿದ್ದರು.
ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಡಿಸೆಂಬರ್ 25ರಂದು ತೆರೆಗೆ ಬರ್ತಿದೆ ಈಗಾಗಲೇ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಕ್ತಿದೆ. ವರ್ಷದ ಹಿಂದೆ 'ಮ್ಯಾಕ್ಸ್' ಸಿನಿಮಾ ಬಂದು ಗೆದ್ದಿತ್ತು. ಅದೇ ಮ್ಯಾಜಿಕ್ ರಿಪೀಟ್ ಆಗುತ್ತಾ ಕಾದು ನೋಡಬೇಕಿದೆ.


Click it and Unblock the Notifications











