'ಮಹಾನಟಿ' ಬಳಿಕ 6 ತಿಂಗಳು ಅವಕಾಶಗಳು ಸಿಗಲಿಲ್ಲ ಎಂದ ಕೀರ್ತಿ ಸುರೇಶ್; ಚಿತ್ರರಂಗದ ವಿಚಿತ್ರ ಸತ್ಯ
'ಮಹಾನಟಿ' ಸಿನಿಮಾ ಸೂಪರ್ ಹಿಟ್, ನ್ಯಾಷನಲ್ ಅವಾರ್ಡ್ ಬಂತು, ಆದ್ರೂ ಕೀರ್ತಿ ಸುರೇಶ್‌ಗೆ ಆರು ತಿಂಗಳು ಕೆಲಸ ಇರಲಿಲ್ಲ.. ದಕ್ಷಿಣ ಭಾರತದ ಸ್ಟಾರ್ ನಟಿ ಕೀರ್ತಿ ಸುರೇಶ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ? ಅವರ ನಗು, ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಕೀರ್ತಿ ಸುರೇಶ್ ಸಿನಿಮಾ ಜೀವನದ ದೊಡ್ಡ ತಿರುವು ಅಂದ್ರೆ ಅದು 'ಮಹಾನಟಿ'. ಸಾವಿತ್ರಿ ಪಾತ್ರ ಮಾಡಿದ ಕೀರ್ತಿ ಅವರಿಗೆ ಈ ಚಿತ್ರದಿಂದ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು.
ಅಂತಹ ದೊಡ್ಡ ಯಶಸ್ಸು ಸಿಕ್ಕ ನಂತರ ಕೀರ್ತಿ ಸುರೇಶ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಬೇಕಿತ್ತು. ಸೂಪರ್ ಸ್ಟಾರ್‌ಗಳ ಜೊತೆ ನಟಿಸೋಕೆ ಕಾಲ್‌ಶೀಟ್ ಕೇಳಬೇಕಿತ್ತು. ಆದರೆ ಈ ಬಗ್ಗೆ ಹೇಳಿರುವ ಮಾತುಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತೆ. 'ಮಹಾನಟಿ' ಸಿನಿಮಾ ಬಿಡುಗಡೆಯಾದ ಮೇಲೆ ಬರೋಬ್ಬರಿ ಆರು ತಿಂಗಳ ಕಾಲ ಅವರಿಗೆ ಒಂದು ಸಿನಿಮಾ ಆಫರ್ ಕೂಡ ಬಂದಿರಲಿಲ್ಲವಂತೆ. ಈ ವಿಚಾರ ಕೇಳಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

ಒಂದು ಕಡೆ ಪ್ರಶಸ್ತಿ, ಪ್ರಶಂಸೆಗಳ ಸುರಿಮಳೆ. ಇನ್ನೊಂದು ಕಡೆ ಕೀರ್ತಿ ಸುರೇಶ್ ಅವರನ್ನು ಕೇಳುವವರೇ ಇರಲಿಲ್ಲ. ಯಾಕಾಗಿ ಹೀಗಾಯ್ತು? ಅನ್ನೋದನ್ನು ಕೂಡ ಮಾಲಿವುಡ್ ಚೆಲುವೆ ಬಿಚ್ಚಿಟ್ಟಿದ್ದಾರೆ.
ಕೀರ್ತಿ ಸುರೇಶ್ 'ಮಹಾನಟಿ' ಚಿತ್ರದಲ್ಲಿ ಮಾಡಿದ ಸಾವಿತ್ರಿ ಪಾತ್ರ ಅಷ್ಟು ಪವರ್ಫುಲ್ ಆಗಿತ್ತು. ಆ ಪಾತ್ರ ನೋಡಿದ ಜನ ಬೇರೆ ಪಾತ್ರದಲ್ಲಿ ಕೀರ್ತಿ ಅವರನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಭಯ ನಿರ್ದೇಶಕರಲ್ಲಿ ಶುರುವಾಗಿತ್ತು. ಇವರನ್ನು ಕೇವಲ ಗಂಭೀರ ಪಾತ್ರಗಳಿಗೆ ಮಾತ್ರ ಬಳಸಿಕೊಳ್ಳಬೇಕು ಎಂದು ಕೆಲವರು ಅಂದುಕೊಂಡರು. ಇದರಿಂದ ಕಮರ್ಷಿಯಲ್ ಸಿನಿಮಾ ಮಾಡುವವರು ಕೀರ್ತಿ ಹತ್ತಿರ ಹೋಗಲೇ ಇಲ್ಲ. ದೊಡ್ಡ ಸ್ಟಾರ್ ಆಗಿದ್ದರೂ, 6 ತಿಂಗಳು ಸುಮ್ಮನೆ ಕೂರಬೇಕಾದ ಪರಿಸ್ಥಿತಿ ಬಂದಿತ್ತು.

ರಾಷ್ಟ್ರ ಪ್ರಶಸ್ತಿ ಗೆದ್ದ ನಂತರ ಕೆಲಸ ಇಲ್ಲದೆ ಕೂರುವುದು ಯಾರಿಗಾದರೂ ನೋವಾಗುತ್ತದೆ. ಕೀರ್ತಿ ಸುರೇಶ್ ಕೂಡ ಈ ಸಮಯದಲ್ಲಿ ತುಂಬಾ ಮಾನಸಿಕ ಒತ್ತಡ ಎದುರಿಸಿದ್ದರು. "ಆರು ತಿಂಗಳು ನನಗೆ ಯಾರೂ ಕೆಲಸ ಕೊಡಲಿಲ್ಲ. ಅದರಿಂದ ನನಗೆ ಶಾಕ್ ಆಗಲಿಲ್ಲ. ನನ್ನ ಮೇಲೆ ನನಗೆ ನಂಬಿಕೆ ಇತ್ತು. ಅದನ್ನು ಪಾಸಿಟಿವ್ ಆಗಿ ನೋಡಲು ಆರಂಭಿಸಿದೆ. ಆ ಸಮಯದಲ್ಲಿ ಸಿಕ್ಕ ಎಲ್ಲ ಕಥೆಗಳನ್ನು ಒಪ್ಪಿಕೊಳ್ಳದೇ, ಒಳ್ಳೆಯ ಕಥೆಗಾಗಿ ಕಾಯುವ ನಿರ್ಧಾರ ಮಾಡಿದೆ" ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಆಕೆಯ ಈ ಕಾಯುವಿಕೆಯ ಲೆಕ್ಕಾಚಾರದಿಂದಲೇ ಗೆಲ್ಲುವಂತಾಯಿತು.
ಕೀರ್ತಿ ಸುರೇಶ್ ಅವರ ಈ ಅನುಭವ ಸಿನಿಮಾ ರಂಗದ ಹಿಂದಿರುವ ವಾಸ್ತವವನ್ನು ತೋರಿಸುತ್ತದೆ. ಯಶಸ್ಸು ಸಿಕ್ಕರೂ ಇಲ್ಲಿ ಶಾಶ್ವತ ಗೆಲುವು ಇಲ್ಲ. ಅಷ್ಟು ಸುಲಭವಾಗಿ ಅವಕಾಶಗಳು ಹುಡುಕಿ ಬರುವುದಿಲ್ಲ. ಆದರೆ ಕೀರ್ತಿ ಸುರೇಶ್ ಅವರು ಆರು ತಿಂಗಳ ವಿರಾಮದ ನಂತರವೂ ಬಲವಾಗಿ ಕಮ್ ಬ್ಯಾಕ್ ಮಾಡಿ ತಾವು ಎಲ್ಲಾ ತರಹದ ಪಾತ್ರಗಳಲ್ಲಿ ನಟಿಸೋಕೆ ಸಿದ್ಧ ಎಂದು ಸಾಬೀತು ಮಾಡಿ ತೋರಿಸಿದ್ದರು.
ಮದುವೆ ಬಳಿಕ ಕೂಡ ಕೀರ್ತಿ ಸುರೇಶ್ ಬಹಳ ಆಕ್ಟೀವ್ ಆಗಿ ಚಿತ್ರರಂಗದಲ್ಲಿದ್ದಾರೆ. ಆಕೆ ನಟಿಸಿರುವ 'ರಿವಾಲ್ವರ್ ರೀಟಾ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮತ್ತೆರಡು ಸಿನಿಮಾಗಳಲ್ಲಿ ಈಗ ನಟಿಸುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಿಯಕರನ ಜೊತೆ ಕೀರ್ತಿ ಮದುವೆ ನೆರವೇರಿತ್ತು.


Click it and Unblock the Notifications











