ಸರ್ಜರಿ ಮಾಡಿಸಿಕೊಂಡು ತೆಳ್ಳಗಾದ್ರಾ ಕೀರ್ತಿ ಸುರೇಶ್? ವೀಡಿಯೋ ಸಮೇತ ಮಹಾನಟಿ ಮಾತು
ಒಬ್ಬ ವ್ಯಕ್ತಿ ದಪ್ಪ ಆಗುವುದು, ಸಣ್ಣ ಆಗುವುದು ಸರ್ವೇ ಸಾಮಾನ್ಯ. ಅದಕ್ಕೆ ನಾನಾ ಕಾರಣಗಳಿರುತ್ತದೆ. ಆದರೆ ಸಿನಿಮಾ ನಟ, ನಟಿಯರು ಹೀಗೆ ಇರಬೇಕು ಎನ್ನುವ ವಿಚಿತ್ರ ನಿಯಮವೊಂದಿದೆ. ತೆರೆಮೇಲೆ ಕಾಣಿಸಿಕೊಳ್ಳುವುದು ಫಿಟ್ ಅಂಡ್ ಫೈನ್ ಇರಬೇಕು ಎನ್ನುವುದು ಸರಿ. ಆದರೆ ಅದಕ್ಕಾಗಿ ಒತ್ತಡ ಹೇರುವುದು ತಪ್ಪಾಗುತ್ತೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಇದು ಅತಿಯಾಗುತ್ತಿದೆ.
ಕಲಾವಿದರು ದಿಢೀರನೆ ದಪ್ಪ ಆದ್ರು ಸಮಸ್ಯೆ, ತೆಳ್ಳಗಾದ್ರು ಸಮಸ್ಯೆ ಎನ್ನುವಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗುತ್ತದೆ. ಚಿತ್ರವಿಚಿತ್ರ ಕಾಮೆಂಟ್ಸ್, ಟ್ರೋಲ್ ಎದುರಿಸಬೇಕಾಗುತ್ತದೆ. ದಪ್ಪಗಾದ್ರೆ ಫಿಟ್‌ನೆಸ್ ಬಗ್ಗೆ ಕಾಳಜಿ ಇಲ್ಲ, ದಿಢೀರ್ ತೂಹ ಇಳಿಸಿಕೊಂಡ್ರೆ ಏನಾದ್ರೂ ಸಮಸ್ಯೆನಾ? ಹೀಗೆ ಪುಂಖಾನುಪುಂಖವಾಗಿ ಕಾಮೆಂಟ್ಸ್, ಅದಕ್ಕೆ ರಿಪ್ಲೇ ಹೀಗೆ ಬೆಳೆಯುತ್ತಾ ಹೋಗುತ್ತದೆ. ನಟಿ ಕೀರ್ತಿ ಸುರೇಶ್ ತಮ್ಮ ಫಿಟ್‌ನೆಸ್, ವರ್ಕೌಟ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಒಂದ್ಕಾಲದಲ್ಲಿ ಕೊಂಚ ದಪ್ಪ ಇದ್ದ ಕೀರ್ತಿ ಬಳಿಕ ತೂಕ ಇಳಿಸಿ ಬಳಕುವ ಬಳ್ಳಿ ಆಗಿದ್ದರು. ಈ ಬಗ್ಗೆ ಮಾತನಾಡಿದ್ದಾರೆ. ಜಿಮ್‌ನಲ್ಲಿ ಕಸರತ್ತು ಮಾಡುವ ವೀಡಿಯೋ ಹಂಚಿಕೊಂಡಿದ್ದಾರೆ. 2013ರಲ್ಲಿ ನಾನು ನಟನಾಗಿ ಪ್ರಾರಂಭಿಸಿದಾಗ, ಅಷ್ಟೇನು ತಿಳುವಳಿಕೆ ಇರಲಿಲ್ಲ. ಎಲ್ಲರಂತೆ ಜಿಮ್ ನನಗೆ ಅಲ್ಲ ಎಂದು ನಾನು ಭಾವಿಸಿದ್ದೆ. ನನ್ನ ದೇಹಕ್ಕೆ ನಿಜವಾಗಿಯೂ ಅಗತ್ಯವಿರುವ ಮೂಲಭೂತ ಅಂಶಗಳನ್ನು ನಾನು ನಿರ್ಲಕ್ಷಿಸಿದೆ. 2018ರಲ್ಲಿ 'ಮಹಾನಟಿ' ಸಿನಿಮಾ ಬಳಿಕ ನಾನು ಯಾಕೆ ಪ್ರಯತ್ನಿಸಬಾರದು? ಎಂದು ಯೋಚಿಸಿದೆ" ಎಂದು ಕೀರ್ತಿ ಹೇಳಿದ್ದಾರೆ.
ನಾನು ಹೆಚ್ಚಿನ ಪ್ರೋಟೀನ್, ಕಡಿಮೆ ಕಾರ್ಬ್ ಆಹಾರದೊಂದಿಗೆ ಕಾರ್ಡಿಯೋ ಮಾಡಲು ಆರಂಭಿಸಿದೆ. 9 ತಿಂಗಳಲ್ಲಿ 10 ಕೆಜಿ ತೂಕ ಇಳಿಸಿದೆ. ಜನರು ನನ್ನನ್ನು ವೀಕ್ ಎಂದು ಕರೆಯುವವರೆಗೂ, ನಾನು 'ಶಸ್ತ್ರಚಿಕಿತ್ಸೆ' ಮಾಡಿಸಿಕೊಂಡಿದ್ದೇನೆ ಎಂದು ಹೇಳುವವರೆಗೂ ಹೆಮ್ಮೆ ಅನಿಸಿತು. ನಾನು ಅದನ್ನೆಲ್ಲಾ ಒಪ್ಪಲ್ಲ, ಹಾಗಾಗಿ ಇಂತಹ ಮಾತುಗಳನ್ನು ಕೇಳುವುದು ನೋವುಂಟು ಮಾಡಿತು. ಕೊನೆಗೆ ನಾನು ಯೋಗ ಮಾಡಲು ಆರಂಭಿಸಿದೆ ಎಂದು ಕೀರ್ತಿ ವಿವರಿಸಿದ್ದಾರೆ.
ಕೊನೆಗೆ ನನಗೆ ಒಂದು ಸತ್ಯ ಅರಿವಾಯಿತು. ಜಿಮ್ ಚೆನ್ನಾಗಿತ್ತು, ನಾನು ಸರಿಯಾಗಿ ವರ್ಕೌಟ್ ಮಾಡುತ್ತಿರಲಿಲ್ಲ ಎನಿಸಿತು. ಈಗ ಸ್ಟ್ರೆಂತ್ ಟ್ರೈನಿಂಗ್ ನನ್ನ ದಿನಚರಿಯ ಭಾಗವಾಗಿದೆ. ಯೋಗ, ಅನಿಮಲ್ ಫ್ಲೋ, ಕಾರ್ಡಿಯೋ ಮತ್ತು ಕ್ಯಾಲಿಸ್ಟೆನಿಕ್ಸ್‌ನೊಂದಿಗೆ ಸಮತೋಲನಗೊಳಿಸುತ್ತೇನೆ. ಒಂದ್ಕಾಲದಲ್ಲಿ ಜಿಮ್ ನನಗಲ್ಲ ಎನ್ನುತ್ತಿದ್ದೆ. ಆದರೆ ಈಗ ಜಿಮ್ ಮಾಡದೇ ಇರಲ್ಲ. ಈಗ ಜನ ಬಂದು ನೀವು ದಪ್ಪಗಿದ್ದಾಗ ಇಷ್ಟವಾಗುತ್ತಿದ್ರಿ ಎನ್ನುತ್ತಾರೆ. ಹೇಗೆ ಇದ್ದರೂ ಕಷ್ಟ ಎಂದು ಕೀರ್ತಿ ಸುರೇಶ್ ಬರೆದುಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ಕೀರ್ತಿ ಸುರೇಶ್ ಮದುವೆ ನಡೆದಿತ್ತು. 16 ವರ್ಷಗಳ ಕಾಲ ಪ್ರೀತಿಸಿ ಆಂಟೊನಿ ತಟ್ಟಿಲ್ ಎಂಬುವವರನ್ನು ವರಿಸಿದ್ದರು. ಮದುವೆ ಬಳಿಕ ಕೂಡ ಸಿನಿಮಾಗಳಲ್ಲಿ ಮಹಾನಟಿ ಮಿಂಚುತ್ತಿದ್ದಾರೆ. ಕಳೆದ ವರ್ಷ 'ಉಪ್ಪು ಕಪ್ಪುರಮ್ಮು' ಹಾಗೂ 'ರಿವಾಲ್ವರ್ ರೀಟಾ' ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ 'ಕನ್ನಿವೀಡು', 'ತೊಟ್ಟಂ', 'ರೌಡಿ ಜನಾರ್ಧನ್', 'ಸತ್ಯವಾನ್ ಸಾವಿತ್ರಿ', 'ರಾಫ್ಟರ್' ಹಾಗೂ ಮತ್ತೊಂದು ತೆಲುಗು ಚಿತ್ರದಲ್ಲಿ ಕೀರ್ತಿ ನಟಿಸುತ್ತಿದ್ದಾರೆ. ಕೀರ್ತಿ ಸುರೇಶ್ ಈಗಾಗಲೇ ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದಾರೆ. ಹಿಂದಿ ಚಿತ್ರರಂಗದಿಂದ ಒಳ್ಳೆ ಅವಕಾಶ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications