ಆ ಭಂಗಿಯಲ್ಲಿ ನನ್ನನ್ನು ನೋಡಿ ನನಗೆ ಶಾಕ್ ಆಯ್ತು; ಆತಂಕಕಾರಿ ಸಂಗತಿ ಬಿಚ್ಚಿಟ್ಟ ಕೀರ್ತಿ ಸುರೇಶ್
ಬಹುಭಾಷಾ ನಟಿ ಕೀರ್ತಿ ಸುರೇಶ್ ಮದುವೆ ಬಳಿಕ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಕಳೆದ ವರ್ಷ ಆಂಟೊನಿ ತಟ್ಟಿಲ್ ಎಂಬುವವರನ್ನು ಪ್ರೀತಿಸಿ ಮದುವೆ ಆಗಿದ್ದರು. ಮದುವೆ ಬಳಿಕ ಆಕೆ ನಟಿಸಿದ 2 ಸಿನಿಮಾಗಳು ಬಿಡುಗಡೆಯಾಗಿದೆ.
AI ಎಲ್ಲರಿಗೂ ಆತಂಕ ತಂದಿದೆ. ಅದರಲ್ಲೂ ಮುಖ್ಯವಾಗಿ ಸೆಲೆಬ್ರೆಟಿಗಳು ಇದರಿಂದ ಎದುರಿಸುತ್ತಿರುವ ಸಮಸ್ಯೆ ಒಂದೆರಡಲ್ಲ. ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವೀಡಿಯೋ ವೈರಲ್ ಆಗಿ ಭಾರೀ ಸಂಚಲನ ಸೃಷ್ಟಿಸಿತ್ತು. ಪ್ರಧಾನಿ ಮೋದಿ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ತಮಗೂ ಇದರಿಂದ ಆತಂಕ ಶುರುವಾಗಿದೆ ಎಂದು ಮಹಾನಟಿ ಕೀರ್ತಿ ಸುರೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಟ, ನಟಿಯರು ಫೇಕ್ ಫೋಟೊ, ವೀಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಕೆಲವರು ಈ ಬಗ್ಗೆ ಮಾತನಾಡದೇ ಇರುವುದೇ ಉತ್ತಮ ಎಂದು ಭಾವಿಸುತ್ತಾರೆ. ಮಾತನಾಡಿದ್ದಷ್ಟು ಹೆಚ್ಚು ವೈರಲ್ ಆಗುತ್ತದೆ ಎಂದು ಭಾವಿಸುತ್ತಾರೆ. ರಶ್ಮಿಕಾ ಮಂದಣ್ಣಗೂ ಮುನ್ನ ಸಾಕಷ್ಟು ನಟಿಯರ ಡೀಪ್‌ಫೇಕ್ ವೀಡಿಯೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿತ್ತು. ರಶ್ಮಿಕಾ ವೀಡಿಯೋ ದೊಡ್ಡದಾಗಿ ಸದ್ದು ಮಾಡಿತ್ತು ಅಷ್ಟೆ.
ಕೀರ್ತಿ ಸುರೇಶ್ ನಟನೆಯ 'ರಿವಾಲ್ವರ್ ರೀಟ' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ಚಿತ್ರದ ಪ್ರಮೋಷನ್ ಭಾಗವಾಗಿ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಕೆ ಮಾತನಾಡಿದ್ದಾರೆ. ಈ ವೇಳೆ ಎಐ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಎಐ ಈಗ ದೊಡ್ಡ ಸಮಸ್ಯೆ ಆಗಿಬಿಟ್ಟಿದೆ. ತಂತ್ರಜ್ಞಾನ ಮನುಷ್ಯ ಕಂಡು ಹಿಡಿದಿದ್ದು. ಆದರೆ ಈಗ ಅದು ನಮ್ಮನ್ನು ಮೀರಿ ಹೋಗುವಂತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೊಗಳು ನೋಡಿ ಶಾಕ್ ಆಗುತ್ತದೆ. ಇದು ನನ್ನ ಫೋಟೊನಾ? ನಾನು ಹೀಗೆ ಬಟ್ಟೆ ಹಾಕಿದ್ನಾ? ಹೀಗೆ ಪೋಸ್ ಕೊಟ್ನಾ? ಎಂದು ಗಾಬರಿಯಾಗುತ್ತದೆ" ಎಂದಿದ್ದಾರೆ.
ಮಾತು ಮುಂದುವರೆಸಿರುವ ಕೀರ್ತಿ ಸುರೇಶ್ "ಇತ್ತೀಚೆಗೆ ನಾನು ಒಂದು ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ದೆ. ಪೂಜೆಗೆ ನಾನು ಹಾಕಿದ್ದ ಡ್ರೆಸ್, ಅದನ್ನು ತಪ್ಪಾದ ಕೋನದಲ್ಲಿ ಪೋಸ್ಟ್ ಇತ್ತು. ನಾನು ನೋಡಿ ನನಗೆ ಶಾಕ್ ಆಯಿತು. ನಾನು ಹೀಗೆ ಪೋಸ್ ಕೊಟ್ನಾ ಅನ್ನಿಸ್ತು. ಇದೆಲ್ಲಾ ಮಾಡುವುದರಿಂದ ಅವರಿಗೆ ಏನು ಸಿಗುತ್ತದೆ?" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇಷ್ಟು ದಿನ ಸೋಶಿಯಲ್ ಮೀಡಿಯಾ ಅಂದ್ರೆ ಭಯಪಡುತ್ತಿದ್ದೆವು. ಈಗ ಎಐಗೆ ಬಂದು ನಿಂತಿದೆ. ತಂತ್ರಜ್ಞಾನ ಬೆಳೆದಂತೆ ಸಮಸ್ಯೆ ಹೆಚ್ಚಾಗುತ್ತಿದೆ. ನಾನು, ಸಮಂತಾ ಒಟ್ಟಿಗೆ ಪೋಸ್ ಕೊಟ್ಟಂತೆ ಒಂದು ಫೋಟೊ ನೋಡ್ದೆ. ಇನ್‌ಸ್ಟಾಗ್ರಾಮ್ ರೀಲ್ಸ್ ನೋಡುವಾಗ ಯಾವುದು ಸತ್ಯ, ಯಾವ್ದು ಸುಳ್ಳು ಗೊತ್ತಾಗಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾ ಸಹವಾಸವೇ ಬೇಡ ಎನಿಸಿಬಿಡುತ್ತದೆ ಎಂದು ಕೀರ್ತಿ ಸುರೇಶ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ಸ್ ಹಾಕುವವರ ಬಗ್ಗೆ ಕೂಡ ಕೀರ್ತಿ ಸುರೇಶ್ ಪ್ರತಿಕ್ರಿಯಿಸಿದ್ದಾರೆ. "ನೀವು ಬದುಕಿ ನಮ್ಮನ್ನು ಬದುಕಲು ಬಿಡಿ. ಇದರಿಂದ ಅವರಿಗೆ ಏನು ಸಿಗುತ್ತದೆ ಗೊತ್ತಿಲ್ಲ. ಕೆಲವರು ಇದನ್ನೇ ಕೆಲಸ ಮಾಡಿಕೊಂಡುಬಿಟ್ಟಿದ್ದಾರೆ" ಎಂದು ಕೀರ್ತಿ ಸುರೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
'ಕನ್ನಿವೆಡಿ' ಎಂಬ ಮತ್ತೊಂದು ತಮಿಳು ಚಿತ್ರದಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಜೋಡಿಯಾಗಿ 'ರೌಡಿ ಜನಾರ್ಧನ್' ಎಂಬ ಚಿತ್ರದಲ್ಲಿ ಕೀರ್ತಿ ನಟಿಸುತ್ತಿದ್ದಾರೆ. ಇದೇ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಆಕೆ ಲಂಗಾ ದಾವಣಿ ತೊಟ್ಟು ಬಂದಿದ್ದರು. ಅಲ್ಲಿ ಸೆರೆ ಹಿಡಿದ ಫೋಟೊವೊಂದನ್ನು ಮಾರ್ಪ್ ಮಾಡಿ ವೈರಲ್ ಮಾಡಿದ್ದರು ಎನ್ನಲಾಗ್ತಿದೆ.


Click it and Unblock the Notifications











