ತನ್ನ ಸೌಂದರ್ಯ ಮೆಚ್ಚಿಕೊಳ್ಳದ್ದಕ್ಕೆ ಮುನಿಸಿಕೊಂಡ ನಟಿ ಕೀರ್ತಿ ಸುರೇಶ್, ವೀಡಿಯೋ ವೈರಲ್
ಮಲಯಾಳಂ ನಟಿ ಕೀರ್ತಿ ಸುರೇಶ್ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 'ಮಹಾನಟಿ' ಚಿತ್ರಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಕೀರ್ತಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. 2017ರಲ್ಲಿ ತೆರೆಗೆ ಬಂದಿದ್ದ 'ಪಂಭು ಸತ್ತೈ' ಚಿತ್ರದ ನಟನೆಗಾಗಿ ಆಕೆಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೆಂಪು ಬಣ್ಣದ ಸೀರೆ ಉಟ್ಟು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿದ್ದರು.
2016ರಿಂದ 2022ರವರೆಗೆ ಬಿಡುಗಡೆಯಾಗಿದ್ದ ತಮಿಳು ಚಿತ್ರಗಳಿಗೆ ಇದೀಗ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಟರಾದ ಕಾರ್ತಿ, ಧನುಷ್, ವಿಜಯ್ ಸೇತುಪತಿ ಹೀಗೆ ಹಲವರು ಪ್ರಶಸ್ತಿ ಪಡೆದು ಸಂಭ್ರಮಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಕೀರ್ತಿ ಸುರೇಶ್ ಕೆಂಪು ಬಣ್ಣದ ಸೀರೆ ಉಟ್ಟು ವೇದಿಕೆ ಏರಿದ್ದರು. ಕಾರ್ಯಕ್ರಮಕ್ಕೆ ಹೊರಡುವ ಮುನ್ನ ಆಕೆ ಕಾರ್ ಏರುವಾಗ ಒಂದಷ್ಟು ಛಾಯಾಗ್ರಾಹಕರು ಫೋಟೊ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ.

ಹಸಿರು ಬಣ್ಣದ ರವಿಕೆ ತೊಟ್ಟು ಕೆಂಪು ಬಣ್ಣದ ಸೀರೆ ಉಟ್ಟಿದ್ದ ಕೀರ್ತಿ ಸುರೇಶ್, ಓಲೆ, ಬಳೆ, ನೆಕ್‌ಲೆಸ್ ಧರಿಸಿ ಮಿಂಚಿದ್ದಾರೆ. ತಲೆ ಕೂದಲು ಫ್ರೀ ಬಿಟ್ಟು ಮಲ್ಲಿಗೆ ಹೂ ಮುಡಿದಿದ್ದಾರೆ. ಆಕೆ ಕಾರ್ ಏರಲು ಬರುತ್ತಿದ್ದಂತೆ ಮೇಡಂ ನಿಮ್ಮ ತಲೆಯಲ್ಲಿರುವ ಹೂವು ಸೂಪರ್ ಆಗಿದೆ ಎಂದಿದ್ದಾರೆ. ಕೂಡಲೇ ಥ್ಯಾಂಕ್ಯೂ ಎಂದು ಗೊಂದಲಕ್ಕೀಡಾಗಿ, "ಏನು.. ಹೂ ಚೆನ್ನಾಗಿದ್ಯಾ? ನನ್ನ ಲುಕ್ ಚೆನ್ನಾಗಿದೆ ಅಂತೀಯಾ ಅಂದುಕೊಂಡ್ರೆ, ಹೂ ಚೆನ್ನಾಗಿದೆ ಅಂತೆ.. ಹೋಗೊ.. ಇಷ್ಟು ಚೆನ್ನಾಗಿ ರೆಡಿ ಆಗಿ ಬಂದ್ರೆ, ನಾನು ಚೆನ್ನಾಗಿದ್ದೀನಿ ಅನ್ನೋದು ಬಿಟ್ಟು ಹೂ ಚೆನ್ನಾಗಿದೆ ಅಂತೆ" ಎಂದು ಹೇಳಿ ಹೊರಟುಬಿಟ್ಟಿದ್ದಾರೆ.
ಸದ್ಯ ಈ ವಿಡಿಯೋ ಸಖತ್ ವೈರಲ್ ಆಗ್ತಿದೆ. "ಹೆಣ್ಣುಮಕ್ಕಳ ಸೌಂದರ್ಯವನ್ನು ಹೊಗಳದೇ ಇದ್ದರೆ ಕಷ್ಟ. ಅದು ಎಂತಹ ಮಹಾನಟಿ ಆಗಿದ್ದರೂ, ಸ್ಟಾರ್ ನಟಿಯಾಗಿದ್ದರೂ ಸರಿ. ಸೌಂದರ್ಯವನ್ನು ಮೆಚ್ಚಿಕೊಳ್ಳಲೇಬೇಕು, ಅದನ್ನು ಅವ್ರು ಬಯಸುತ್ತಾರೆ" ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ತಮಿಳುನಾಡು ರಾಜ್ಯಪ್ರಶಸ್ತಿ ಪಡೆದ ಸಂಭ್ರಮವನ್ನು ಕೀರ್ತಿ ಸುರೇಶ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. "ನನ್ನ ಮೊದಲ ರಾಜ್ಯ ಪ್ರಶಸ್ತಿಗಾಗಿ ತಮಿಳುನಾಡು ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. 'ಪಂಭು ಸತ್ತೈ' ಚಿತ್ರದ ನಿರ್ಮಾಪಕರು, ನಿರ್ದೇಶಕರು, ರಾಧಿಕಾ ಶರತ್‌ಕುಮಾರ್ ಮೇಡಂ ಹಾಗೂ ಶರತ್‌ಕುಮಾರ್ ಸರ್ ಎಲ್ಲರಿಗೂ ಧನ್ಯವಾದಗಳು. ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿ ಮತ್ತು ನನ್ನ ತಂಡವು ಅವರ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು. ನನ್ನ ಜೊತೆ ಪ್ರಶಸ್ತಿ ಸ್ವೀಕರಿಸಿದ ಎಲ್ಲರಿಗೂ ಅಭಿನಂದನೆ" ಎಂದು ಕೀರ್ತಿ ಸುರೇಶ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಆಡಮ್ ದಾಸನ್ ನಿರ್ದೇಶನದ 'ಪಂಭು ಸತ್ತೈ' ಚಿತ್ರದಲ್ಲಿ ವೇಣಿ ಎಂಬ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸಿದ್ದರು. ಬಾಬಿ ಸಿಂಹ ಜೋಡಿಯಾಗಿ ಮಿಂಚಿದ್ದರು. ಪ್ರೇಕ್ಷಕರಿಂದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಮದುವೆ ಬಳಿಕ ಕೂಡ ಕೀರ್ತಿ ಚಿತ್ರರಂಗದಲ್ಲಿ ಮುಂದುವರೆದಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಕನ್ನಿವೆಡಿ', 'ತೊಟ್ಟಂ' ಹಾಗೂ 'ರೌಡಿ ಜನಾರ್ಧನ್' ಎಂಬ ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ಸದ್ಯ ಬಣ್ಣ ಹಚ್ಚಿದ್ದಾರೆ.
ವರ್ಷದ ಹಿಂದೆ ಆಂಟೋನಿ ತಟ್ಟಿಲ್ ಎಂಬ ಬಾಲ್ಯದ ಗೆಳೆಯನ ಜೊತೆ ಕೀರ್ತಿ ಸುರೇಶ್ ಮದುವೆ ನಡೆದಿತ್ತು. ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ಆಗಿತ್ತು. ಕೆಲ ವರ್ಷಗಳಿಂದ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ. ಹಾಗಾಗಿ ಒಮ್ಮೆಲೆ 6 ವರ್ಷಗಳಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಆಯಾ ವರ್ಷ ಅದ್ಭುತ ಪ್ರದರ್ಶನ ನೀಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.


Click it and Unblock the Notifications