ಹೊಂಬಾಳೆ 'ರಘುತಾತ' ಚಿತ್ರದಲ್ಲಿ ಹಿಂದಿ ಹೇರಿಕೆ ವಿವಾದ? ಕೀರ್ತಿ ಸುರೇಶ್ ಪ್ರತಿಕ್ರಿಯೆ
'ರಾಜಕುಮಾರ', 'KGF', 'ಕಾಂತಾರ' ರೀತಿಯ ಅದ್ಭುತ ಸಿನಿಮಾಗಳನ್ನು ಹೊಂಬಾಳೆ ಸಂಸ್ಥೆ ನಿರ್ಮಿಸಿದೆ. ಮತ್ತಷ್ಟು ದೊಡ್ಡ ಸಿನಿಮಾಗಳನ್ನು ನಿರ್ಮಿಸಲು ಮುಂದಾಗಿದೆ. ಪರಭಾಷೆಗಳಲ್ಲಿ ಕೂಡ ಈಗಾಗಲೇ ಸಿನಿಮಾ ನಿರ್ಮಾಣ ಆರಂಭಿಸಿದೆ.
ಮಲಯಾಳಂನಲ್ಲಿ 'ಧೂಮಮ್' ಹಾಗೂ ತೆಲುಗಿನಲ್ಲಿ 'ಸಲಾರ್' ಸಿನಿಮಾಗಳಿಗೆ ಹೊಂಬಾಳೆ ಸಂಸ್ಥೆ ಹಣ ಹೂಡಿತ್ತು. ಎರಡು ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದ್ದವು. ಇದೀಗ ತಮಿಳಿನ 'ರಘು ತಾತ' ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಈ ಕಾಮಿಡಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನೆರವೇರಿದೆ.

'ರಘು ತಾತ' ಚಿತ್ರಕ್ಕೆ ಸುಮನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಕೀರ್ತಿ ಸುರೇಶ್ ಜೊತೆಗೆ ಎಂ. ಎಸ್ ಭಾಸ್ಕರ್, ರವೀಂದ್ರ ವಿಜಯ್, ದೇವದರ್ಶಿನಿ, ರಾಜೀವ್ ರವೀಂದ್ರನಾಥ್ ಸೇರಿದಂತೆ ದೊಡ್ಡ ತಾರಾಗಣವಿದೆ. ಮಹಿಳಾ ತಂತ್ರಜ್ಞರಿಗೆ ಹೆಚ್ಚು ಅವಕಾಶ ಕೊಡಲಾಗಿದೆ. ಎನ್‌ಸಿಸಿ ಕೆಡೆಟ್ ಆಗಿ ಚಿತ್ರದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ನೋಡಿದಾಗ ಹಿಂದಿ ಹೇರಿಕೆ ವಿರುದ್ಧ ನಾಯಕಿ ಕಯಳ್‌ವಿಳಿ ಹೋರಾಟ ಮಾಡುವುದನ್ನು ನೋಡಬಹುದು.
ಮೊದಲಿನಿಂದಲೂ ದಕ್ಷಿಣ ಭಾರತ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡುವ ಪ್ರಯತ್ನ ನಡೆಯುತ್ತಲೇ ಇದೆ. ತಮಿಳರು, ಕನ್ನಡಿಗರು ಇದನ್ನು ವಿರೋಧಿಸುತ್ತಲೇ ಬರುತ್ತಿದ್ದಾರೆ. 60, 70, 80ರ ದಶಕದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಸಾಕಷ್ಟು ಹೋರಾಟ ನಡೆದಿತ್ತು. ರಘುತಾತ ಕಥೆ ಕೂಡ 70, 80ರ ದಶಕದ್ದು ಎನ್ನುವುದು ಗೊತ್ತಾಗುತ್ತದೆ. ಈಗಾಗಲೇ ಕೀರ್ತಿ ಸುರೇಶ್ ಬಾಲಿವುಡ್ ಪ್ರವೇಶಿಸಿದ್ದಾರೆ.
ವರುಣ್ ಧವನ್ ಜೊತೆ ಕೀರ್ತಿ ನಟನೆಯ 'ಬೇಬಿ ಜಾನ್' ಸಿನಿಮಾ ಡಿಸೆಂಬರ್‌ನಲ್ಲಿ ತೆರೆಗೆ ಬರ್ತಿದೆ. ಒಂದ್ಕಡೆ ಹಿಂದಿ ಚಿತ್ರದಲ್ಲಿ ನಟಿಸುತ್ತಿರುವ ಕೀರ್ತಿ ಮತ್ತೊಂದು ಕಡೆ ಹಿಂದೆ ಹೇರಿಕೆ ವಿರೋಧಿಸುವ ಕಥೆಯ 'ರಘು ತಾತ' ಚಿತ್ರದಲ್ಲಿ ಬಣ್ಣ ಹಚ್ಚಿರುವುದು ಚರ್ಚೆ ಹುಟ್ಟಾಕ್ಕಿದೆ. ಈ ಬಗ್ಗೆ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಆಕೆ ಸ್ಪಷ್ಟನೆ ನೀಡಿದ್ದಾರೆ.

"ನಾನು ಒಂದು ವಿಚಾರ ಸ್ಪಷ್ಟಪಡಿಸುತ್ತೇನೆ. ಡಿಸೆಂಬರ್‌ನಲ್ಲಿ ಹಿಂದಿ ಸಿನಿಮಾ 'ಬೇಬಿ ಜಾನ್' ಬರ್ತಿದೆ. ಇತ್ತ ಹಿಂದಿ ಹೇರಿಕೆ ಬಗ್ಗೆ ಒಂದು ಸಿನಿಮಾ ಮಾಡ್ತಿದ್ದೀರಾ ಎಂದು ಕೇಳಬಹುದು. ಟೀಸರ್‌ನಲ್ಲಿ ಹಿಂದಿ ಹೇರಿಕೆ ಬಗ್ಗೆ ನೋಡಿರಬಹುದು. ಮುಖ್ಯವಾಗಿ ಇದು ಹೇರಿಕೆಯ ಬಗ್ಗೆ ಇರುವ ಕಥೆ. ಹೆಣ್ಣುಮಕ್ಕಳ ಮೇಲಿನ ಹೇರಿಕೆಯ ಕುರಿತಾದ ಸಿನಿಮಾ. ಎಲ್ಲಾ ಬಗೆಯ ಹೇರಿಕೆಯ ಬಗ್ಗೆ ಚಿತ್ರದಲ್ಲಿದೆ. ಒಂದು ಮೆಸೇಜ್ ಇದೆ. ಆದರೆ ಅದು ಏನು ಎನ್ನುವುದು ಸಿನಿಮಾ ನೋಡಿದಾಗ ಅರ್ಥ ಆಗುತ್ತದೆ"
"ಹಿಂದೆ ಹೇರಿಕೆ ಅನ್ನೋದನ್ನು ಇಟ್ಟುಕೊಂಡು ಕಥೆಯನ್ನು ಕೊಂಡು ಹೋಗಿದ್ದಾರೆ. ಈ ಚಿತ್ರದಲ್ಲಿ ಯಾವುದೇ ವಿವಾದ, ರಾಜಕೀಯ ಅಂಶ ಇಲ್ಲ. ಫನ್ ಮಾತ್ರ ಇದೆ. ಇದೊಂದು ಕಾಮೆಡಿ ಎಂಟರ್‌ಟೈನರ್ ಸಿನಿಮಾ ನೋಡಿ ನಕ್ಕು ಹಗುರಾಗಿ ಬರಬಹುದು. ಅಂತಹ ಸಿನಿಮಾ ರಘು ತಾತ" ಎಂದು ಕೀರ್ತಿ ಸುರೇಶ್ ವಿವರಿಸಿದ್ದಾರೆ.
ಎನ್‌ಸಿಸಿ ಮಾಸ್ಟರ್ ಹಿಂದಿಯಲ್ಲಿ ತರಬೇತಿ ನೀಡುತ್ತಿರುವಾಗ ಕಯಳ್‌ವಿಳಿ (ಕೀರ್ತಿ ಸುರೇಶ್) ನನಗೆ ಹಿಂದಿ ಬರುವುದಿಲ್ಲ, ತಮಿಳಿನಲ್ಲಿ ಹೇಳಿ ಸರ್ ಎನ್ನುತ್ತಾಳೆ. ಮತ್ತೊಂದು ಸನ್ನಿವೇಶದಲ್ಲಿ ಹಿಂದಿ ಪರೀಕ್ಷೆ ಬರೆದರೆ ಮಾತ್ರ ಬಡ್ತಿ ಸಿಗುತ್ತಾ? ಎನ್ನುವುದನ್ನು ನೋಡಬಹುದು. ಊರಿನ ಜನರ ಜೊತೆ ಸೇರಿ ಹಿಂದಿ ಹೇರಿಕೆ ವಿರುದ್ಧ ಆಕೆ ಪ್ರತಿಭಟನೆ ನಡೆಸುವುದನ್ನು ನೋಡಬಹುದು. 'ರಘು ತಾತ' ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.


Click it and Unblock the Notifications











