Indian- 2: ಸೇನಾಪತಿ ಕಮಲ್ ಹಾಸನ್‌ಗೆ ಸಿಕ್ತು ಬಾದ್‌ಶಾ ಕಿಚ್ಚ ಸುದೀಪ್ ಬಲ
ಉಳಗ ನಾಯಗನ್ ಕಮಲ್ ಹಾಸನ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಅದಕ್ಕೂ ಮುನ್ನ ಬಹುನಿರೀಕ್ಷಿತ 'ಇಂಡಿಯನ್'-2 ಸಿನಿಮಾ ಟೀಸರ್ ರಿಲೀಸ್ ಆಗಲಿದೆ. ಶಂಕರ್ ನಿರ್ದೇಶನದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮೂಡಿ ಬರ್ತಿದೆ. 'ವಿಕ್ರಂ' ಸಿನಿಮಾ ಮೂಲಕ ಸಕ್ಸಸ್ ಕಂಡ ಕಮಲ್ ಮತ್ತೊಂದು ಹಿಟ್ ಮೇಲೆ ಕಣ್ಣಿಟ್ಟಿದ್ದಾರೆ.
ನವೆಂಬರ್ 7ಕ್ಕೆ ಕಮಲ್ ಹಾಸನ್ ಹುಟ್ಟಹಬ್ಬ ಆಚರಿಸಿಕೊಳ್ಳಲಿದ್ದಾರೆ. ಆದರೆ ನಾಳೆ(ನವೆಂಬರ್ 3) 'ಇಂಡಿಯನ್- 2' ಟೀಸರ್ ಬರ್ತಿರೋದು ವಿಶೇಷ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಈ ಸೂಪರ್ ಹಿಟ್ ಸಿನಿಮಾ ಸೀಕ್ವೆಲ್ ತೆರೆಗೆ ತರ್ತಿದೆ. 27 ವರ್ಷಗಳ ಹಿಂದೆ ಕಮಲ್- ಶಂಕರ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಇಂಡಿಯನ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಆ ಕತೆಯನ್ನು ಮುಂದುವರೆಸಲಾಗ್ತಿದೆ.

'ಇಂಡಿಯನ್- 2' ಟೀಸರ್‌ಗಾಗಿ ಕಮಲ್ ಹಾಸನ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಕಮಲ್ ಹಾಸನ್ ಮತ್ತೊಮ್ಮೆ ಸೇನಾಪತಿ ಆಗಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ. ಚಿತ್ರದ ಇಂಟ್ರೋ ವೀಡಿಯೋವನ್ನು ಕನ್ನಡದಲ್ಲಿ ಕಿಚ್ಚ ಸುದೀಪ್, ತಮಿಳಿನಲ್ಲಿ ರಜನಿಕಾಂತ್, ಹಿಂದಿ ಆಮಿರ್ ಖಾನ್, ತೆಲುಗಿನಲ್ಲಿ ರಾಜಮೌಳಿ, ಮಲಯಾಳಂನಲ್ಲಿ ಮೋಹನ್ ಲಾಲ್ ಅನಾವರಣ ಮಾಡಲಿದ್ದಾರೆ.
ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ಸಿನಿಮಾ ನಿರ್ಮಿಸಿದ್ದು ಚಿತ್ರದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿ ಭ್ರಷ್ಟಾಚಾರ - ಅಪರಾಧ ಚಟುವಟಿಕೆಗಳ ವಿರುದ್ಧ ನಿಲ್ಲುವ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್‌ವಾಲ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಖನಿ, ಬಾಬಿ ಸಿಂಹ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.
ಅನಿರುದ್ಧ್ ರವಿಚಂದರ್ ಸಂಗೀತ, ರವಿವರ್ಮನ್ ಮತ್ತು ರತ್ನವೇಲು ಕ್ಯಾಮರಾ ವರ್ಕ್, ಎ. ಶ್ರೀಕರ್ ಪ್ರಸಾದ್ ಎಡಿಟಿಂಗ್ ಚಿತ್ರಕ್ಕಿರಲಿದೆ. ಕೆಲ ದಿನಗಳ ಹಿಂದೆ 'ಇಂಡಿಯನ್'-2 ಸೆಟ್‌ನಲ್ಲಿ ದುರಂತ ಸಂಭವಿಸಿ ಸಿನಿಮಾ ಚಿತ್ರೀಕರಣ ನಿಂತು ಹೋಗಿತ್ತು. ಮತ್ತೆ ಸಿನಿಮಾ ಶುರುವಾಗುವುದೇ ಇಲ್ಲ ಎನ್ನಲಾಗಿತ್ತು. ಶಂಖರ್ ಈ ಸಿನಿಮಾ ಬಿಟ್ಟು ತೆಲುಗಿನ ಗೇಮ್ ಚೇಂಜರ್ ಸಿನಿಮಾ ಕೈಗೆತ್ತಿಕೊಂಡಿದ್ದರು. 'ವಿಕ್ರಂ' ಸಕ್ಸಸ್ ಬಳಿಕ ಮತ್ತೆ 'ಇಂಡಿಯನ್- 2'ಗೆ ಚಾಲನೆ ಸಿಕ್ಕಿತ್ತು.

3 ವರ್ಷಗಳ ಹಿಂದೆ ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ 'ಇಂಡಿಯನ್'-2 ಚಿತ್ರೀಕರಣದ ವೇಳೆ ಕ್ರೇಜ್ ಮುರಿದು ಬಿದ್ದು ದುರಂತ ಸಂಭವಿಸಿತ್ತು. ರಾತ್ರಿ ಚಿತ್ರೀಕರಣಕ್ಕೆ ಲೈಟಿಂಗ್ ವ್ಯವಸ್ಥೆ ಮಾಡುವಾಗ 150 ಅಡಿ ಎತ್ತರದಿಂದ ಕ್ರೇನ್ ಮುರಿದು ಚಿತ್ರತಂಡ ಉಳಿದುಕೊಂಡಿದ್ದ ಟೆಂಟ್ ಮೇಲೆ ಬಿದ್ದಿತ್ತು. ಈ ದುರಂತದಲ್ಲಿ ನಿರ್ದೇಶಕ ಶಂಕರ್ ಆಪ್ತ ಸಹಾಯಕ ಮಧು (29), ಸಹಾಯಕ ನಿರ್ದೇಶಕ ಸಾಯಿಕೃಷ್ಣ (34), ಮತ್ತೊಬ್ಬ ಸಹಾಯಕ ಚಂದ್ರನ್ ಸ್ಥಳದಲ್ಲೇ ಮೃತಟ್ಟಿದ್ದರು. ಅವಘಡದಲ್ಲಿ 10 ಜನ ಸಿನಿಮಾ ಕಾರ್ಮಿಕರು ಗಾಯಗೊಂಡಿದ್ದರು. ಹಾಗಾಗಿ ಸಿನಿಮಾ ಚಿತ್ರೀಕರಣಕ್ಕೆ ನಿಂತಿತ್ತು.
ಇನ್ನು 'ಇಂಡಿಯನ್-2' ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬರುತ್ತದೆ ಎನ್ನುವ ಗುಸುಗುಸು ಕೂಡ ಕೇಳಿ ಬರ್ತಿದೆ. ಸದ್ಯ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದೆ. 'ಇಂಡಿಯನ್ -2' ಹಾಗೂ 'ಇಂಡಿಯನ್- 3' ಎಂದು 2 ಭಾಗಗಳಾಗಿ ಚಿತ್ರವನ್ನು ತೆರೆಗೆ ತರುತ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಈ ವರ್ಷ ದಸರಾ ಅಥವಾ ದೀಪಾವಳಿಗೆ 'ಇಂಡಿಯನ್-2' ಸಿನಿಮಾ ರಿಲೀಸ್ ಆಗುತ್ತದೆ ಎನ್ನಲಾಗಿತ್ತು. ಆದರೆ ಶೂಟಿಂಗ್ ತಡವಾಗಿ ರಿಲೀಸ್ ಡೇಟ್ ಮುಂದೂಡಲಾಗಿದೆ.
ಮುಂದಿನ ವರ್ಷ 'ಇಂಡಿಯನ್-2' ಸಿನಿಮಾ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆಯಿದೆ. ಮುಂದಿನ ವರ್ಷ ಸ್ವಾತಂತ್ರ ದಿನಾಚರಣೆ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬಂದರೂ ಅಚ್ಚರಿಪಡಬೇಕಿಲ್ಲ. 90ರ ದಶಕದಲ್ಲಿ 'ಇಂಡಿಯನ್' ಸಿನಿಮಾ ದೊಡ್ಡಮಟ್ಟದಲ್ಲಿ ಸಂಚಲನ ಸೃಷ್ಟಿಸಿ ದಾಖಲೆ ಬರೆದಿತ್ತು. ಕಮಲ್ ಡಬಲ್ ರೋಲ್‌ನಲ್ಲಿ ಅಬ್ಬರಿಸಿದ್ದರು. ಸೀಕ್ವೆಲ್ ಕತೆ ಏನಾಗುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.


Click it and Unblock the Notifications











