ಚಡ್ಡಿ ರಾಜ್ಯಪಾಲರು ಬಿಜೆಪಿಯ ಶಾಸಕ ಭೋಜರಾಜನ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಾರಂತೆ; ಕಿಶೋರ್ ವ್ಯಂಗ್ಯ
ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಸರ್ಕಸ್ ಮುಂದುವರೆದಿದೆ. 118 ಮ್ಯಾಜಿಕ್ ನಂಬರ್ ಇಲ್ಲದೇ ಭಾರೀ ಗೊಂದಲ ನಿರ್ಮಾಣವಾಗಿದೆ. ಮತ್ತೊಂದು ಕಡೆ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಕರಸತ್ತು ನಡೆಸುತ್ತಿವೆ ಎನ್ನುವ ಊಹಾಪೋಹ ಶುರುವಾಗಿದೆ. ರಾಜ್ಯಪಾಲರ ನಡೆ ಬಗ್ಗೆ ಆಕ್ರೋಶ ವ್ಯಕ್ತವಾಗ್ತಿದೆ.
ಟಿವಿಕೆ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಆದರೆ 108 ಕ್ಷೇತ್ರಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹಾಗಾಗಿ ತಮಿಳುನಾಡು ರಾಜ್ಯಪಾಲ ವಿಶ್ವನಾಥ್ ಅರ್ಲೇಕರ್ ಕೂಡಲೇ ಸರ್ಕಾರ ರಚನೆಗೆ ವಿಜಯ್ ಅವರನ್ನು ಆಹ್ವಾನಿಸಬೇಕು ಎಂದು ಚರ್ಚೆ ನಡೀತಿದೆ. ಈಗಾಗಲೇ ಎರಡು ಬಾರಿ ವಿಜಯ್ ಹೋಗಿ ರಾಜ್ಯಪಾಲರನ್ನು ಭೇಟಿ ಮಾಡಿ ಬಂದಿದ್ದಾರೆ. 118 ಶಾಸಕರ ಬೆಂಬಲ ಇರುವ ಸಹಿ ಪಟ್ಟಿಯನ್ನು ರಾಜ್ಯಪಾಲರು ಕೇಳಿದ್ದಾರೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಚುನಾವಣೆ ಫಲಿತಾಂಶ ಬಂದು 4 ದಿನ ಕಳೆದರೂ ಸರ್ಕಾರ ರಚನೆ ಕೆಲಸ ಆರಂಭವಾಗಿಲ್ಲ.

ರಾಜ್ಯಪಾಲರ ನಡೆ ಬಗ್ಗೆ ಕಮಲ್ ಹಾಸನ್, ಪ್ರಕಾಶ್ ರಾಜ್ ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಕಿಶೋರ್ ಪೋಸ್ಟ್ ಮಾಡಿ ವ್ಯಂಗ್ಯವಾಡಿದ್ದಾರೆ. "ತಮಿಳುನಾಡಿನ ಚಡ್ಡಿ ರಾಜ್ಯಪಾಲರು ಬಿಜೆಪಿಯ ಏಕೈಕ ಶಾಸಕರಾದ ಶ್ರೀ ಭೋಜರಾಜನ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಾರಂತೆ. ಮತ್ತು 2031 ರ ವೇಳೆಗೆ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಲು ಅವರಿಗೆ ಅನುಮತಿ ನೀಡಲಾಗಿದೆಯಂತೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಉದಕಮಂಡಲಂ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಭೋಜರಾಜನ್ ಗೆದ್ದಿದ್ದಾರೆ. ಇವರು ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಿರುವ ಏಕೈಕ ಅಭ್ಯರ್ಥಿ. ಇದೇ ವಿಚಾರವನ್ನು ಪ್ರಸ್ತಾಪಿಸಿ ನಟ ಕಿಶೋರ್ ಅಣಕವಾಡಿದ್ದಾರೆ. ಆ ಮೂಲಕ ಬಿಜೆಪಿಯವರು ಬೇಕೆಂದೇ ವಿಜಯ್ ಸರ್ಕಾರ ರಚನೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ತಿವಿದಿದ್ದಾರೆ.
ವಿಜಯ್ ಸರ್ಕಾರ ರಚನೆಗೆ ಅವಕಾಶ ಕೊಡುವಂತೆ ರಾಜ್ಯಪಾಲರನ್ನು ಭೇಟಿ ಮಾಡಿ ಕೇಳಿದ್ರು ಅವಕಾಶ ಸಿಗುತ್ತಿಲ್ಲ. ರಾಜ್ಯಪಾಲರ ಮೇಲೆ ಬಿಜೆಪಿ ಒತ್ತಡ ಹಾಕುತ್ತಿದೆ ಎನ್ನುವ ಆರೋಪ ಕೇಳಿಬರ್ತಿದೆ. ಬಿಜೆಪಿಯನ್ನು ವಿಜಯ್ ವಿರೋಧಿಸುತ್ತಾ ಬಂದಿದ್ದಾರೆ, ಹಾಗಾಗಿ ಇಂತಹ ಸಮಸ್ಯೆ ಎದುರಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಇದನ್ನು ಬಿಜೆಪಿ ಒಪ್ಪಲು ಸಿದ್ಧವಿಲ್ಲ. ವಿಜಯ್‌ಗೆ ಭಾರೀ ಬೆಂಬಲ ಇರುವುದು ರಾಜಪಾಲರಿಗೆ ಮನವರಿಕೆಯಾಗಿಲ್ಲ. ಹಾಗಾಗಿ ಸರ್ಕಾರ ರಚನೆಗೆ ಆಹ್ವಾನ ನೀಡುತ್ತಿಲ್ಲ ಎಂದು ರಾಜ್ಯ ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ಸ್ಪಷ್ಟನೆ ನೀಡಿದ್ದಾರೆ.
ಟಿವಿಕೆ 118 ಮ್ಯಾಜಿಕ್ ನಂಬರ್ ತೋರಿಸುವುದು ಅಷ್ಟು ಸುಲಭವಲ್ಲ. ಈಗಾಗಲೇ ಕಾಂಗ್ರೆಸ್ ಬೆಂಬಲ ಸೂಚಿಸಿದ್ದರೂ ಮ್ಯಾಜಿಕ್ ನಂಬರ್ ಸಿಕ್ಕಿಲ್ಲ. ಇದೇ ಕಾರಣಕ್ಕೆ ವಿಜಯ್ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ವಿಜಯ್ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಬೇಕಿತ್ತು. ಬಹುಮತ ಸಾಬೀತು ವಿಚಾರದಲ್ಲೇ ಹಿನ್ನಡೆ ಅನುಭವಿಸುವಂತಾಗಿದೆ. ಇಂದು(ಮೇ 8) ತಮಿಳುನಾಡು ರಾಜಕೀಯರಂಗದಲ್ಲಿ ಭಾರೀ ಹೈಡ್ರಾಮಾ ನಡೆಯಲಿದ್ದು ಟಿವಿಕೆ ಸರ್ಕಾರ ರಚನೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಚುನಾವಣೆಯಲ್ಲಿ ಒಟ್ಟು 234 ಕ್ಷೇತ್ರಗಳ ಪೈಕಿ ಟಿವಿಕೆ 108 ಸ್ಥಾನ ಗಳಿಸಿದೆ. ಡಿಎಂಕೆ 59 ಹಾಗೂ ಎಐಎಡಿಎಂಕೆ 47 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡರೂ 118 ಮ್ಯಾಜಿಕ್ ನಂಬರ್ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಮತ್ತೊಂದು ಕಡೆ ನಿರ್ಗಮಿತ ಮುಖ್ಯಮಂತ್ರಿ ಈ ಮೈತ್ರಿಗೆ ಒಲವು ತೋರಿಸುತ್ತಿಲ್ಲ. ಹಾಗಾಗಿ ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications