ತಮಿಳು ನಟ ಅಜಿತ್ ಕುಮಾರ್ ತಂದೆ ಸುಬ್ರಹ್ಮಣ್ಯಂ ನಿಧನ
ತಮಿಳು ಚಿತ್ರರಂಗದ ಸ್ಟಾರ್ ನಟ, ತಲಾ ಅಜಿತ್ ಕುಮಾರ್ ಅವರ ತಂದೆ ಪಿ ಸುಬ್ರಹ್ಮಣ್ಯಂ ಅವರು ಇಂದು ( ಮಾರ್ಚ್ 24 ) ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸುಬ್ರಹ್ಮಣ್ಯಂ ಅವರು ಕಳೆದ ಕೆಲ ದಿವಸಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಗಳು ತಿಳಿಸಿದ್ದು, ಸುಬ್ರಹ್ಮಣ್ಯಂ ತಮ್ಮ ಪತ್ನಿ ಮೋಹಿನಿ ಹಾಗೂ ಮೂವರು ಪುತ್ರರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಅಜಿತ್ ಕುಮಾರ್ ಅವರ ತಂದೆ ಪಿ ಸುಬ್ರಹ್ಮಣ್ಯಂ ಮೂಲತಃ ಕೇರಳದ ಪಾಲಾಕ್ಕಾಡ್‌ನವರಾಗಿದ್ದು, ತಮ್ಮ ಮೂವರು ಮಕ್ಕಳಾದ ಅನುಪ್ ಕುಮಾರ್, ಅನಿಲ್ ಕುಮಾರ್ ಹಾಗೂ ಅಜಿತ್ ಕುಮಾರ್ ಅವರನ್ನು ಅವರದ್ದೇ ಆಸಕ್ತಿಯುತ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದ್ದರು.

ಅನುಪ್ ಕುಮಾರ್ ಹೂಡಿಕೆದಾರನಾಗಿದ್ದರೆ, ಅನಿಲ್ ಕುಮಾರ್ ಮದ್ರಾಸ್ ಐಐಟಿ ಪದವೀಧರನಾಗಿದ್ದು, ಸದ್ಯ ಉದ್ಯಮಿಯಾಗಿದ್ದಾರೆ ಹಾಗೂ ನಿಮಗೇ ತಿಳಿದಿರುವಂತೆ ಅಜಿತ್ ಕುಮಾರ್ ಕಾಲಿವುಡ್ ಚಿತ್ರರಂಗದ ಸ್ಟಾರ್ ನಟನಾಗಿ ಯಶಸ್ಸು ಸಾಧಿಸಿದ್ದಾರೆ.
ಇನ್ನು ಸುಬ್ರಹ್ಮಣ್ಯಂ ಅವರ ಅಂತಿಮ ವಿಧಿವಿಧಾನ ಕಾರ್ಯಕ್ರಮ ಸಂಜೆ ನೆರವೇರಲಿದ್ದು, ನೆಚ್ಚಿನ ನಟನಿಗೆ ಪಿತೃ ವಿಯೋಗವಾಗಿರುವುದರ ಕುರಿತು ಪ್ರತಿಕ್ರಿಯಿಸಿರುವ ಅಜಿತ್ ಕುಮಾರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಂದೆ ಹಾಗೂ ಮಗನ ಫೋಟೊಗಳನ್ನು ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ ಹಾಗೂ ದೇವರು ತಮ್ಮ ನೆಚ್ಚಿನ ನಟನಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೇಳಿಕೊಂಡಿದ್ದಾರೆ.
ಇನ್ನು ಚಿತ್ರರಂಗದ ಹಲವಾರು ಕಲಾವಿದರು ಅಜಿತ್ ಕುಮಾರ್ ತಂದೆಯ ನಿಧನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಸಂತಾಪ ಸೂಚಿಸಿದ್ದಾರೆ ಹಾಗೂ ಅಜಿತ್ ಕುಮಾರ್ ಅವರಿಗೆ ಇದೇ ಪೋಸ್ಟ್‌ಗಳ ಮೂಲಕ ಧೈರ್ಯ ಹೇಳಿದ್ದಾರೆ.


Click it and Unblock the Notifications











