ಲಿಂಗ ಚಿತ್ರದ ಸೋಲಿಗೆ ರಜನಿಕಾಂತ್ ನೇರ ಕಾರಣ, ಹತ್ತು ವರ್ಷದ ನಂತರ ಸತ್ಯ ಬಾಯ್ಬಿಟ್ಟ ನಿರ್ದೇಶಕ..!
ರಜನಿಕಾಂತ್ ಭಾರತದ ಸೂಪರ್ ಸ್ಟಾರ್. ಇಡೀ ವಿಶ್ವಕ್ಕೆ ಗೊತ್ತಿರುವ ಮಹಾನಾಯಕ. ಚೆನ್ನೈ-ಬೆಂಗಳೂರು ಸೇರಿದಂತೆ ಭಾರತದ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ರಜಿನಿ ಒಡೆತನದ ಆಸ್ತಿಗಳಿವೆ. ಇಡೀ ಜಗತ್ತಿನಲ್ಲಿ ರಜನಿಗೆ ಹೊಂದಿರುವ ಅಗಣಿತ ಆಸ್ತಿಯ ಬಗ್ಗೆ ಸ್ವತಃ ಅವರಿಗೇ ಲೆಕ್ಕ ಗೊತ್ತಿದೆಯೋ ಇಲ್ಲವೋ? ಗೊತ್ತಿಲ್ಲ.
ಇಂಥಾ ರಜನಿಕಾಂತ್ ಸಿನಿಮಾ ಬಂದರೆ ಸಾಕು ಇಡೀ ದೇಶ ಹುಚ್ಚೆದ್ದು ಕುಣಿಯುತ್ತೆ. ಕೇವಲ ತಮಿಳುನಾಡು ಮಾತ್ರವಲ್ಲದೇ ದೇಶದ ನಾನಾ ಕಡೆ ಚಿತ್ರಮಂದಿರದ ಮುಂದೆ ಹೌಸ್ ಫುಲ್ ಬೋರ್ಡ್ ಬೀಳುತ್ತೆ. ಹಾಗಂಥ ರಜನಿ ಅಭಿನಯದ ಎಲ್ಲ ಚಿತ್ರಗಳೂ ಗೆದ್ದಿಲ್ಲ. ಗಲ್ಲಾಪೆಟ್ಟಿಗೆಯಲ್ಲಿ ಹಣವನ್ನೂ ದೋಚಿಲ್ಲ. ಅಲ್ಲಲ್ಲಿ ಕೆಲ ಸಿನಿಮಾಗಳು ಸೋಲುಂಡಿವೆ. ಆ ಪೈಕಿ ಲಿಂಗ ಕೂಡ ಒಂದು. ಸದ್ಯ.. ಈ ಚಿತ್ರ ಈಗ ಇನ್ನೊಮ್ಮೆ ಸುದ್ದಿಯಲ್ಲಿದೆ. ಲಿಂಗ ಚಿತ್ರದ ಸೋಲಿಗೆ ಬೇರೆ ಯಾರು ಕಾರಣವಲ್ಲ ಬದಲಿಗೆ ರಜನಿಕಾಂತ್ ಕಾರಣ ಎಂದು ಚಿತ್ರದ ನಿರ್ದೇಶಕ ಕೆಎಸ್ ರವಿಕುಮಾರ್ ಹೇಳಿದ ಹಿನ್ನೆಲೆ ಹೊಸದೊಂದು ಚರ್ಚೆ ಶುರುವಾಗಿದೆ.

ಹೌದು, ಸಂದರ್ಶನವೊಂದರಲ್ಲಿ ಮಾತನಾಡಿರುವ ಕೆ.ಎಸ್ ರವಿಕುಮಾರ್, ಎಲ್ಲವೂ ಸರಿಯಾಗಿತ್ತು ಆದರೆ ಚಿತ್ರದ ಸಂಕಲನ { ಎಡಿಟಿಂಗ್ } ನಡೆಯುವ ಸಮಯದಲ್ಲಿ ರಜನಿಕಾಂತ್ ಚಿತ್ರದಲ್ಲಿ ಮೂಗು ತೂರಿಸಲು ಶುರು ಮಾಡಿದರು ಎಂದು ಹೇಳಿದ್ದಾರೆ. ಚಿತ್ರದಲ್ಲಿನ ಗ್ರಾಫಿಕ್ಸ್ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಿಸಲು ನನಗೆ ಸಮಯವನ್ನೇ ನೀಡಲಿಲ್ಲ ಎಂದು ಹೇಳಿರುವ ಕೆ.ಎಸ್.ರವಿಕುಮಾರ್, ಚಿತ್ರದ ದ್ವೀತಿಯಾರ್ಧವನ್ನು ರಜಿನಿಕಾಂತ್ ಸಂಪೂರ್ಣವಾಗಿ ಬದಲಿಸಿದರು ಎಂದು ಹೇಳಿದ್ದಾರೆ. ಮುಂದುವರೆದು ಅನುಷ್ಕಾ ಶೆಟ್ಟಿಯ ಹಾಡೊಂದಕ್ಕೆ ಕತ್ತರಿಯನ್ನು ಹಾಕುವುದಲ್ಲದೇ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿದ್ದ ಬಹುಮುಖ್ಯವಾದ ಟ್ವಿಸ್ಟ್‌ನ ಕೂಡ ರಜನಿಕಾಂತ್ ತೆಗೆದು ಹಾಕಿದರು ಎಂದು ಹೇಳಿದ್ದಾರೆ. ಅದ್ಯಾವುದೋ ಕೃತಿಕ್ ಬಲೂನ್ ಮೂಲಕ ಜಂಪ್ ಮಾಡುವ ದೃಶ್ಯವನ್ನು ಸುಖಾಸುಮ್ಮನೆ ಸೇರಿಸಿ ಇಡೀ ಚಿತ್ರವನ್ನೇ ರಜನಿಕಾಂತ್ ಹಾಳು ಮಾಡಿದರು ಎಂದು ಕೆ.ಎಸ್.ರವಿಕುಮಾರ್ ಆಪಾದನೆಯನ್ನು ಮಾಡಿದ್ದಾರೆ.
ಅಂದ್ಹಾಗೇ ಹತ್ತು ವರ್ಷದ ಹಿಂದೆ ಬಿಡುಗಡೆಯಾಗಿದ್ದ, ಕನ್ನಡದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದ ಲಿಂಗ ಚಿತ್ರ ಆ ಕಾಲಕ್ಕೆ 158 ಕೋಟಿಯನ್ನು ಗಳಿಸಿತ್ತು. ಈ ಕುರಿತು ಕೂಡ ಹಿಂದೆ ಅಂದರೆ 2016ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕೆ.ಎಸ್ ರವಿಕುಮಾರ್, ಎಂದಿರನ್ ಚಿತ್ರವನ್ನು ಹೊರತು ಪಡಿಸಿದರೆ ನಮ್ಮ ಚಿತ್ರವೇ ಇಷ್ಟೊಂದು ಹಣ ಗಳಿಸಿದ್ದು ಎಂದು ಮಾತನಾಡಿದ್ದರು. ಬಾಕ್ಸಾಫೀಸ್ ಲೆಕ್ಕಾಚಾರ ಅಂಕಿ ಸಂಖ್ಯೆಯ ಕುರಿತು ಮಾತನಾಡುವುದಾದರೆ ನಮ್ಮ ಚಿತ್ರ ಗೆದ್ದಿದೆ ಎಂದು ಎದೆ ತಟ್ಟಿಕೊಂಡು ನಾನು ಹೇಳಬಹುದು ಎಂದು ಹೇಳಿದ್ದರು. ಆದರೆ ಈಗ ಚಿತ್ರ ಸೋತಿತ್ತು. ಚಿತ್ರದ ಸೋಲಿಗೆ ರಜಿನಿಕಾಂತ್ ಕಾರಣವೆಂದು ಕೆ.ಎಸ್.ರವಿಕುಮಾರ್ ಹೇಳಿದ್ದಾರೆ. ಈ ಮೂಲಕ ರಜನಿ ಅಭಿಮಾನಿಗಳಲ್ಲಿ ಗೊಂದಲವನ್ನು ಸೃಷ್ಟಿಸಿದ್ದಾರೆ.
ಉಳಿದಂತೆ ಸದ್ಯಕ್ಕೆ ರಜನಿಕಾಂತ್ ಅಭಿನಯದ ವೆಟ್ಟೆಯಾನ್ ಈ ದಸರಾ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ. ಜೈ ಭೀಮ್ ಚಿತ್ರದ ನಿರ್ದೇಶಕ ಟಿ.ಜೆ.ಜ್ಞಾನವೇಲ್ ಈ ಚಿತ್ರವನ್ನು ನಿರ್ದೇಶಿಸಿರುವ ಹಿನ್ನೆಲೆ ಚಿತ್ರದ ಕುರಿತು ಅನೇಕರಲ್ಲಿ ಕುತೂಹಲ ಇದೆ. ಚಿತ್ರದ ಮೇಲೆ ನಿರೀಕ್ಷೆ ಕೂಡ ಇದೆ. ಇದಕ್ಕೆ ಪೂರಕವಾಗಿ ಬಿಡುಗಡೆಯಾದ ಟ್ರೇಲರ್ ಆಗಲೇ ಎಲ್ಲರ ಚಿತ್ತವನ್ನು ಕದಿಯುವಲ್ಲಿ ಯಶಸ್ವಿಯಾಗಿದೆ.
ಒಟ್ನಲ್ಲಿ ಲಿಂಗ ಚಿತ್ರಕ್ಕೆ ಸಂಬಂಧಿಸಿದಂತೆ ಕೆ.ಎಸ್.ರವಿಕುಮಾರ್ ನೀಡಿದ ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ಕೆಲವರು ರಜನಿ ಪರ ವಕಾಲತ್ತು ವಹಿಸಿದರೆ, ಇನ್ನೂ ಕೆಲವರು ಕೆ.ಎಸ್ ರವಿಕುಮಾರ್ ಚಿತ್ರದ ನಿರ್ದೇಶಕ ಎಂದ ಮೇಲೆ ಅವರಿಗೆ ಸ್ವಾತಂತ್ರ್ಯವನ್ನು ನೀಡಬೇಕಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











