ಕುಬೇರ ಚಿತ್ರ ನೋಡುತ್ತಿದ್ದ ಪ್ರೇಕ್ಷಕರ ಮೇಲೆ ಕುಸಿದು ಬಿದ್ದ 'ಮುಕುಂದ' ಚಿತ್ರಮಂದಿರದ ಸೀಲಿಂಗ್
ಚಿತ್ರಮಂದಿರದ ಬಾಗಿಲುಗಳು ಒಂದೊಂದಾಗಿಯೇ ಮುಚ್ಚುತ್ತಿವೆ. ಸ್ನೇಹಿತರ ಜೊತೆ ಅಥವಾ ಮನೆ ಮಂದಿಯ ಜೊತೆ ಚಿತ್ರವನ್ನು ನೋಡಲು ಇರುವ ಕೆಲ ಚಿತ್ರಮಂದಿರಕ್ಕೆ ಹೋದರೆ ಆ ಚಿತ್ರಮಂದಿರಗಳಲ್ಲಿ ಶೇಕಡಾ 10-20% ಚಿತ್ರಮಂದಿರಗಳು ಅವ್ಯವಸ್ಥೆಯ ಆಗರವಾಗಿವೆ. ಅವಸಾನದ ಅಂಚಿಗೆ ಶಿಥಿಲಾವಸ್ಥೆಗೆ ತಲುಪಿವೆ. ಇದಕ್ಕೆ ಮುಕುಂದ ಚಿತ್ರಮಂದಿರದಲ್ಲಿ ನಡೆದ ಅವಘಡ ಸದ್ಯದ ಮತ್ತೊಂದು ಸಾಕ್ಷಿ. ಹೌದು.. ಧನುಷ್.. ರಶ್ಮಿಕಾ ಮಂದಣ್ಣ.. ನಾಗಾರ್ಜುನ..
ಅಭಿನಯದ ಕುಬೇರ ಚಿತ್ರ ಸದ್ಯ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ. ಎಲ್ಲರ ಹೃದಯವನ್ನು ಗೆಲ್ಲುವುದರ ಜೊತೆಯಲ್ಲಿ ಬಾಕ್ಸಾಫೀಸ್‌ನಲ್ಲಿ ಕೂಡ ಹಣ ದೋಚುತ್ತಿದೆ. ಇದರ ನಡುವೆ ತೆಲಂಗಾಣದಲ್ಲಿ ಅವಘಡ ನಡೆದಿದ್ದು ಚಿತ್ರ ನೋಡುತ್ತಿರುವಾಗಲೇ ಚಿತ್ರಮಂದಿರದ ಸೀಲಿಂಗ್ ಕುಸಿದು ಬಿದ್ದಿದೆ.

ತೆಲಂಗಾಣದ ಮಹಬೂಬಾಬಾದ್‌ನ ಮುಕುಂದ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಸಾವು ನೋವು ಸಂಭವಿಸಿಲ್ಲ. ಯಾರಿಗೂ ಗಂಭೀರವಾದ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಕೆಲವರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಯನ್ನು ನೀಡಲಾಗಿದೆ.
ಇನ್ನು.. ಇಂದು ಬೆಳಗ್ಗೆ { ಜೂನ್ 27 } 11.30ರ ಸುಮಾರಿಗೆ ಚಿತ್ರಮಂದಿರದ ಸೀಲಿಂಗ್ ಕುಸಿದಿದ್ದು ಕೆಳಗೆ ಕೂತಿದ್ದ ಪ್ರೇಕ್ಷಕರ ಮೈ ಮೇಲೆಯೇ ಸೀಲಿಂಗ್ ಬಿದ್ದಿದ್ದರಿಂದ ಚಿತ್ರಮಂದಿರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನೂಕುನುಗ್ಗಲಿನ ವಾತಾವರಣ ನಿರ್ಮಾಣವಾಗಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಸೀಲಿಂಗ್ ಕುಸಿದು ಬಿದ್ದ ನಂತರವೂ ಕುಬೇರ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸದೇ ಚಿತ್ರಮಂದಿರದ ಆಡಳಿತ ಮಂಡಳಿ ಚಿತ್ರದ ಪ್ರದರ್ಶನ ಮುಂದುವರೆಸಿತ್ತು.
ಇನ್ನು ಘಟನೆಯ ನಂತರ ಚಿತ್ರಮಂದಿರದ ಸಿಬ್ಬಂದಿಗಳ ಜೊತೆ ಪ್ರೇಕ್ಷಕರು ವಾಗ್ಯುದ್ದವನ್ನು ನಡೆಸಿದ್ದು ಚಿತ್ರಮಂದಿರದವರ ದಿವ್ಯ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಕಾರಣವೆಂದು ಹಲವರು ಕಿಡಿ ಕಾರಿದ್ದಾರೆ. ಕುಟುಂಬ ಸಮೇತ ಚಿತ್ರ ನೋಡಲು ಬಂದಿದ್ದೇವು, ಯಾರ ಪ್ರಾಣಕ್ಕಾದರೂ ಕುತ್ತು ಬಂದಿದ್ದರೆ ಅದಕ್ಕೆ ಯಾರು ಹೊಣೆ ಎಂದು ಕೂಡ ಹಲವರು ಆಕ್ರೋಶವನ್ನು ಕೂಡ ವ್ಯಕ್ತಪಡಿಸಿದ್ಧಾರೆ ಎಂದು ವರದಿಯಾಗಿದೆ.
ಇನ್ನು ಇಷ್ಟೆಲ್ಲ ಆದ ನಂತರವೂ ಕೂಡ ಘಟನೆಯ ಕುರಿತಾಗಲಿ ಗಾಯಗೊಂಡವರ ಪರಿಸ್ಥಿತಿಯ ಕುರಿತಾಗಲಿ ಮುಕುಂದ ಚಿತ್ರಮಂದಿರದ ಆಡಳಿತ ಮಂಡಳಿ ಇಲ್ಲಿಯವರೆಗೆ ಯಾವ ಪ್ರತಿಕ್ರಿಯೆಯನ್ನು ನೀಡದಿರುವುದು ಈ ಆಕ್ರೋಶವನ್ನು ಇನ್ನೂ ಹೆಚ್ಚಿಸಿದೆ.
ಇದರ ನಡುವೆ ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ಪೊಲೀಸ್ ಠಾಣೆಯಲ್ಲಿ ಇನ್ನು ದಾಖಲಾಗಿಲ್ಲ ಎಂಬ ಸುದ್ದಿ ಕೂಡ ಸದ್ಯ ಕೇಳಿ ಬರುತ್ತಿದ್ದು ಗಾಯಗೊಂಡ ಪ್ರೇಕ್ಷಕರು ಚಿತ್ರಮಂದಿರದವರ ಜೊತೆ ರಾಜಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನುಳಿದಂತೆ ಸದ್ಯ ಕುಬೇರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದ್ದು, ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಕುಬೇರ ಈ ಒಂದು ವಾರದಲ್ಲಿ ಭಾರತದಲ್ಲಿ ₹ 65.65 ಕೋಟಿಯನ್ನು ಗಳಿಸಿದೆ.


Click it and Unblock the Notifications











