Lal Salaam : ಜೈಲರ್ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ರಜನಿಕಾಂತ್ ಸಿನಿಮಾ ಬಿಡುಗಡೆಗೆ ಸಜ್ಜು
ಜೈಲರ್ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೊಂದು ಸಿನಿಮಾ ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ರಜನಿಕಾಂತ್ ಮಗಳು ಐಶ್ವರ್ಯಾ ರಜನಿಕಾಂತ್ ಅವರ ನಿರ್ದೇಶನದ 'ಲಾಲ್ ಸಲಾಂ' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.
ಕಳೆದ ಜುಲೈನಲ್ಲಿ, ರಜನಿಕಾಂತ್ ಲಾಲ್ ಸಲಾಂ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದರು. ಭಾರೀ ಕುತೂಹಲ ಮೂಡಿಸಿರುವ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಅವರ ಕುತೂಹಲ ತಣಿಸುವ ವಿಷಯವನ್ನು ಚಿತ್ರತಂಡ ಹಂಚಿಕೊಂಡಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸುವ ಹೊಸ ಪೋಸ್ಟರ್ ಹೊರಬಿದ್ದಿದೆ.

ಈ ಪೊಂಗಲ್‌ಗೆ ರಜನಿಕಾಂತ್ ಅಭಿಮಾನಿಗಳಿಗೆ ದುಪ್ಪಟ್ಟು ಖುಷಿ!
ನಟ ರಜನಿಕಾಂತ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿರುವ ಲಾಲ್ ಸಲಾಂ ಚಿತ್ರವು 2024 ರ ಜನವರಿಯಲ್ಲಿ ಪೊಂಗಲ್ ಹಬ್ಬದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ಮಾಪಕರು ಭಾನುವಾರ (ಅಕ್ಟೋಬರ್ ಒಂದು) ಘೋಷಿಸಿದ್ದಾರೆ. ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಅತಿಥಿ ಪಾತ್ರವನ್ನು ಮಾಡಿದ್ದಾರೆ ಎಂಬ ಮಾಹಿತಿಯಿದೆ.
ಲಾಲ್ ಸಲಾಂ ಹೊಸ ಪೋಸ್ಟರ್
"ಲಾಲ್ ಸಲಾಂ ಪೊಂಗಲ್ 2024 ರಂದು ತೆರೆಗೆ ಬರಲಿದೆ" ಎಂದು ಪಕ್ಕಾ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸದೆ ಲೈಕಾ ಪ್ರೋಡಕ್ಷನ್ ಭಾನುವಾರ ಟ್ವೀಟ್ ಮಾಡಿದೆ. ನಿರ್ದೇಶಕಿ ಐಶ್ವರ್ಯಾ ಕೂಡ ಇದೇ ಪೋಸ್ಟರ್ ಹಂಚಿಕೊಂಡಿದ್ದಾರೆ. ಹೊಸ ಪೋಸ್ಟರ್ ಕೆಂಪು ಬಣ್ಣದಲ್ಲಿ ಅದ್ದಿ ತೆಗೆದಂತೆ ಕಾಣಿಸುತ್ತಿದ್ದು, ರಜನಿಕಾಂತ್ ಅವರು ಕ್ರಿಕೆಟ್ ಮೈದಾನದ ಬಳಿ ವಿಂಟೇಜ್ ಕಾರಿನ ಮುಂದೆ ನಿಂತಿರುವುದನ್ನು ನೋಡಬಹುದು.
ಲಾಲ್ ಸಲಾಂ
ಲಾಲ್ ಸಲಾಂ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದೆ. ಲಾಲ್ ಸಲಾಂ ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಸ್ನೇಹ ಮತ್ತು ಕ್ರಿಕೆಟ್ ಸುತ್ತ ಸುತ್ತುವ ಈ ಚಿತ್ರದಲ್ಲಿ ರಜನಿಕಾಂತ್ ಮೊಯ್ದೀನ್ ಭಾಯ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕಾಣಿಸಿಕೊಳ್ಳಲಿದ್ದಾರೆ. ಐಶ್ವರ್ಯ, ವಿಷ್ಣು ಮತ್ತು ವಿಕ್ರಾಂತ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಲಾಲ್ ಸಲಾಂಗೆ ಎಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ.

2022 ರ ನವೆಂಬರ್‌ನಲ್ಲಿ ಐಶ್ವರ್ಯಾ ರಜನಿಕಾಂತ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮುಂದಿನ ನಿರ್ದೇಶನದ ಚಿತ್ರ ಲಾಲ್ ಸಲಾಂ ಎಂದು ಘೋಷಿಸಿದ್ದರು. ಇದರಲ್ಲಿ ವಿಷ್ಣು ವಿಶಾಲ್ ಕ್ರಿಕೆಟಿಗನಾಗಿ ಮತ್ತು ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದಿದ್ದರು. ಸಿನಿಮಾ ಮುಹೂರ್ತದ ಪೂಜೆಯನ್ನು ಡಿಸೆಂಬರ್ 2022 ರಲ್ಲಿ ನಡೆಸಲಾಗಿತ್ತು, ಚಿತ್ರೀಕರಣವು ಮಾರ್ಚ್ 2023 ರಲ್ಲಿ ಚೆನ್ನೈನಲ್ಲಿ ಪ್ರಾರಂಭವಾಗಿತ್ತು.
2024 ರ ಪೊಂಗಲ್ ಹಬ್ಬಕ್ಕೆ ಹಲವು ಸಿನಿಮಾಗಳು
ಪ್ರತಿ ವರ್ಷದಂತೆ ಈ ಬಾರಿಯು ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಪೊಂಗಲ್ ಹಬ್ಬಕ್ಕೆ ಸಾಲು ಸಾಲು ತಮಿಳು ಸಿನಿಮಾಗಳು ಬಿಡುಗಡೆಯಾಗಲಿವೆ. ಶಿವಕಾರ್ತಿಕೇಯನ್ ಅಭಿನಯದ ಅಯಾಲನ್ ಪೊಂಗಲ್‌ಗೆ ಬಿಡುಗಡೆಯಾಗುವುದಾಗಿ ಮೊದಲೇ ಘೋಷಿಸಿತ್ತು. ಸುಂದರ್ ಸಿ ಅವರ ಅರಣ್ಮನೈ 4, ಅರುಣ್ ವಿಜಯ್ ಅವರ ವನಂಗಾನ್ ಮತ್ತು ಜಯಂ ರವಿ ಅವರ ಸೈರನ್ ಕೂಡ ಬಿಡುಗಡೆಗೆ ಸಜ್ಜಾಗಿವೆ.


Click it and Unblock the Notifications











