ಪಾತ್ರಕ್ಕಾಗಿ ಪಲ್ಲಂಗ ; ಎರಡು ಕೈ ಸೇರಿದರೆ ಚಪ್ಪಾಳೆ ಎಂದ ಬೆಳಗಾವಿ ಬ್ಯೂಟಿ ಲಕ್ಷ್ಮೀ ರೈ...!
ಸಿನಿಮಾ ಜಗತ್ತಿನಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ನಟಿಯರು ಬಾಯಿ ಬಿಟ್ಟಿದ್ದಾರೆ. ಸಾಕಷ್ಟು ಸಹ ನಟರು, ನಿರ್ಮಾಪಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಬಾಳದಂತೆ ಹರಾಜು ಹಾಕಿದ್ದಾರೆ. ಇದೆಲ್ಲವೂ ಈಗೀಗ ಕಾಮನ್ ಕೂಡ. ಹಾಗಂಥ ಇಲ್ಲಿಎಲ್ಲರೂ ಮಂಚಕ್ಕೇರಲು ಕರೆಯಲ್ಲ. ಮಂಚಕ್ಕೇರಿದರೆ ಮಾತ್ರ ಇಲ್ಲಿ ಅವಕಾಶ ಎಂದು ಹೇಳುವುದಿಲ್ಲ. ಎಲ್ಲ ಕ್ಷೇತ್ರದಲ್ಲಿರುವಂತೆ ಇಲ್ಲಿಯೂ ಕೂಡ ಅಲ್ಲಲ್ಲಿ ಹುಳುಕುಗಳಿವೆ. ಹೀಗಾಗಿ ಯಾರೋ ನಾಲ್ಕೈದು ಜನ ಮಾಡುವ ಕೆಲಸಕ್ಕೆ ಇಡೀ ಉದ್ಯಮವನ್ನೇ ಅನುಮಾನದ ದೃಷ್ಟಿಯಿಂದ ನೋಡುವುದು ತಪ್ಪು. ಲಕ್ಷ್ಮೀ ರೈ ಮೊನ್ನೆ ಈ ಮಾತುಗಳನ್ನೇ ಹೇಳಿದ್ದಾರೆ.
ಹೌದು. ಲಕ್ಷ್ಮೀ ರೈ.. ಬೆಳಗಾವಿಯ ಬಾಲೆ. ಕನ್ನಡವೂ ಸೇರಿ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿಯೂ ಅಭಿನಯಿಸಿರುವ ಲಕ್ಷ್ಮೀ ರೈ ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಚಿತ್ರರಂಗದ ಕುರಿತು ಹಲವರಲ್ಲಿ ತಪ್ಪು ಕಲ್ಪನೆಗಳಿವೆ, ಆದರೆ ವಾಸ್ತವದಲ್ಲಿ ಚಿತ್ರರಂಗ ಇರುವುದು ಬೇರೆ ಅಂದಿದ್ದಾರೆ. ಎರಡು ಕೈ ಸೇರಿದರೆ ಚಪ್ಪಾಳೆ ಎಂಬರ್ಥದಲ್ಲಿ ಮಾತನಾಡಿದ್ದಾರೆ

ಮೈಲ್ ಸ್ಟೋನ್ ಮೇಕರ್ಸ್ ಎಂಬ ಮಲಯಾಳಂ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಲಕ್ಷ್ಮೀ ರೈ, ಕಾಸ್ಟಿಂಗ್ ಕೌಚ್ ಕುರಿತು ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ. ಯಾಕೆಂದರೆ ಒಬ್ಬೊಬ್ಬರಿಗೆ ಇಲ್ಲಿ ಒಂದೊಂದು ಅನುಭವಗಳಾಗಿವೆ ಎಂದಿರುವ ಲಕ್ಷ್ಮೀ ರೈ, ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಪಲ್ಲಂಗವೇರುವಂತಹ ವಾತಾವರಣ ಇಲ್ಲವೇ ಇಲ್ಲ ಎಂದು ನಾನು ವಾದ ಮಾಡಲಾರೆ ಆದರೆ ನನ್ನ ಈ ಎರಡು ದಶಕದ ವೃತ್ತಿ ಜೀವನದಲ್ಲಿ ನನಗೆ ಈ ಕಹಿ ಅನುಭವ ಯಾವತ್ತು ಆಗಿಲ್ಲ ಎಂದಿದ್ದಾರೆ. ನನ್ನ ತಂದೆ ಸಮಾನರಾಗಿರುವ ಆರ್.ವಿ.ಉದಯಕುಮಾರ್ ಅವರಿಂದ ನನಗೆ ಮೊದಲ ಅವಕಾಶ ಸಿಕ್ತು ಎಂದಿರುವ ಲಕ್ಷ್ಮೀ ರೈ, ಬೇರೆಯವರಿಗೆ ಹೋಲಿಸಿದರೆ ಚಿತ್ರರಂಗದಲ್ಲಿ ನಾನು ಅನುಭವಿಸಿದ ಕಷ್ಟ-ನೋವು ಬೇರೆ ಅಂದಿದ್ದಾರೆ.
ಮುಂದುವರೆದು ಮಾತನಾಡಿರುವ ಲಕ್ಷ್ಮೀ ರೈ ಇಲ್ಲಿ ಯಾರೂ ನನ್ನ ಜೊತೆ ಬಂದು ಮಲಗು ಎಂದು ಬಲವಂತ ಮಾಡುವುದಿಲ್ಲ ಎಂದಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ನಡೆಯುವಂತಹ ಕ್ರಿಯೆ ಅದು ಎಂದಿದ್ದಾರೆ. ಕೇವಲ ಪ್ರಚಾರಕ್ಕೆ ಅಥವಾ ಟಿಆರ್‌ಪಿ ವಿಚಾರಕ್ಕೆ ಇಡೀ ಚಿತ್ರರಂಗವನ್ನ ದೂಷಿಸುವುದು ತಪ್ಪು ಎಂದಿರುವ ಲಕ್ಷ್ಮೀ ರೈ, ಹೆಸರು..ಹಣ..ಕೀರ್ತಿಯನ್ನ ಕೊಟ್ಟಿರುವ ಚಿತ್ರರಂಗಕ್ಕೆ ನಾವು ಯಾವತ್ತು ಆಭಾರಿಯಾಗಿರಬೇಕೆ ಹೊರತು ಚಿತ್ರರಂಗದ ಮರ್ಯಾದೆ ತೆಗೆಯುವ ಕೆಲಸ ಮಾಡಬಾರದು ಅಂದಿದ್ದಾರೆ. ಚಿತ್ರರಂಗದಲ್ಲಿ ಕೂಡ ಹಲವು ಒಳ್ಳೆ ಕೆಲಸಗಳಾಗುತ್ತವೆ ಆ ಕೆಲಸದ ಬಗ್ಗೆ ಮಾತನಾಡದೇ, ಆ ಅನುಭವ ಹಂಚಿಕೊಳ್ಳದೇ ಕೇವಲ ಕೆಟ್ಟ ಆಲೋಚನೆ ಮಾಡುತ್ತಾ, ಕಹಿ ಅನುಭವವನ್ನೇ ಹಂಚಿಕೊಳ್ಳುವುದು ತಪ್ಪು ಎಂದಿದ್ದಾರೆ ಲಕ್ಷ್ಮೀ ರೈ

ಅಂದ್ಹಾಗೇ ಲಕ್ಷ್ಮೀ ರೈ ಅಭಿನಯದ ಮಲಯಾಳಂ ಸಿನಿಮಾ ಡಿಎನ್‌ಎ ಮೊನ್ನೆ ಶುಕ್ರವಾರ ತೆರೆಗೆ ಬಂದಿದೆ. ಈ ಚಿತ್ರದ ಪ್ರಚಾರದ ಸಮಯದಲ್ಲಿಯೇ ಲಕ್ಷ್ಮೀ ರೈ ಈ ಕಾಸ್ಟಿಂಗ್ ಕೌಚ್ ಕುರಿತು ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಇನ್ನೂ ಲಕ್ಷ್ಮೀ ರೈ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದು ಇದು ಮೊದಲೆನಲ್ಲ. ಈ ಹಿಂದೆಯೂ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದ ಲಕ್ಷ್ಮೀ ರೈ ಅವಕಾಶಕ್ಕಾಗಿ ಒದ್ದಾಡುವವರನ್ನ ನಿರ್ದೇಶಕ ಮತ್ತು ನಿರ್ಮಾಪಕರು ಬಳಿಸಿಕೊಳ್ಳುತ್ತಾರೆ ಎಂದು ಹೇಳಿದ್ದರು. ಆಗ್ಲೂ ಸುದ್ದಿಯಾಗಿದ್ದರು.


Click it and Unblock the Notifications











