Leo Day 1 prediction: ತಮಿಳು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವತ್ತ 'ಲಿಯೋ' ಓಟ
ದಳಪತಿ ವಿಜಯ್ ನಟನೆಯ 'ಲಿಯೋ' ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಮೊದಲ ದಿನವೇ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗುವ ಸುಳಿವು ಸಿಗುತ್ತಿದೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಸಿನಿಮಾ ಭಾರೀ ಸದ್ದು ಮಾಡಿತ್ತು. ಸದ್ಯ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರ ಶುರುವಾಗಿದೆ.
ಲಾಂಗ್ ವೀಕೆಂಡ್ ಟಾರ್ಗೆಟ್ ಮಾಡಿ ಗುರುವಾರವೇ ಸಿನಿಮಾ ತೆರೆಗೆ ತರಲಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬೇಜಾನ್ ಹೈಪ್ ಕ್ರಿಯೇಟ್ ಮಾಡಿತ್ತು. ಆದರೆ ಆ ನಿರೀಕ್ಷೆ ತಲುಪುವಲ್ಲಿ 'ಲಿಯೋ' ಮುಗ್ಗರಿಸಿದ್ದಾನೆ ಎನ್ನಬಹುದು. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಮುಂದಿನ ದಿನಗಳಲ್ಲಿ ಸಿನಿಮಾ ಯಾವ ರೀತಿ ಸದ್ದು ಮಾಡಬಹುದು ಎಂದು ಹೇಳುವುದು ಕಷ್ಟ.

ಬೇಗ ಥಿಯೇಟರ್‌ಗಳಲ್ಲಿ 'ಲಿಯೋ' ಆಟ ಮುಗಿಯುತ್ತಾ? ಅಥವಾ ಹಬ್ಬದ ಸಂಭ್ರಮದಲ್ಲಿ ಪ್ರೇಕ್ಷಕರು ಸಿನಿಮಾ ನೋಡಿ ಗೆಲ್ಲಿಸುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗಿದೆ. 'ಮಾಸ್ಟರ್' ಸಕ್ಸಸ್ ಬಳಿಕ ಲೋಕೇಶ್- ವಿಜಯ್ ಮತ್ತೆ ಒಂದಾಗಿದ್ದು ಸಿನಿಮಾ ಬಗ್ಗೆ ಇನ್ನಿಲ್ಲದ ಕುತೂಹಲ ಕೆರಳುವಂತೆ ಮಾಡಿತ್ತು. ಇದೀಗ ಸಿನಿಮಾ ರಿಲೀಸ್ ಆಗಿದೆ.
ಅಡ್ವಾನ್ಸ್ ಬುಕ್ಕಿಂಗ್ ಜೊತೆಗೆ ಫಸ್ಟ್ ಡೇ ಕಲೆಕ್ಷನ್ ಸೇರಿ ಸಿನಿಮಾ ಮೊದಲ ದಿನವೇ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಲೆಕ್ಕಾಚಾರ ನಡೀತಿದೆ. ತಮಿಳಿನ ಯಾವುದೇ ಸಿನಿಮಾ ಈ ಹಿಂದೆ ಈ ಪಾಟಿ ಅಡ್ವಾನ್ಸ್ ಬುಕ್ಕಿಂಗ್ ಆಗಿರಲಿಲ್ಲ. 'ಜೈಲರ್'ಗಿಂತಲೂ 'ಲಿಯೋ' ಅಡ್ವಾನ್ಸ್ ಬುಕ್ಕಿಂಗ್ ಚೆನ್ನಾಗಿತ್ತು. ಮೊದಲ ದಿನವೇ 'ಲಿಯೋ' ಸಿನಿಮಾ ವಿಶ್ವದಾದ್ಯಂತ 130 ಕೋಟಿ ರೂ.ಗೂ ಅಧಿಕ ಗಳಿಕೆ ಕಾಣುತ್ತದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.
ಭಾರತದಲ್ಲಿ ಎಲ್ಲಾ ಭಾಷೆಗಳು ಸೇರಿ ಮೊದಲ ದಿನ 70 ಕೋಟಿ ರೂ. ಹಾಗೂ ಓವರ್‌ಸೀಸ್‌ನಲ್ಲಿ 'ಲಿಯೋ' ಸಿನಿಮಾ 60 ಕೋಟಿ ಬಾಚುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಅಂದರೆ ಮೊದಲ ದಿನವೇ ಸಿನಿಮಾ 130 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡುವ ಲೆಕ್ಕಾಚಾರ ಜೋರಾಗಿದೆ.
*ತಮಿಳುನಾಡು- 30 ಕೋಟಿ ರೂ.(ನಿರೀಕ್ಷೆ)
*ಕರ್ನಾಟಕ- 11 ಕೋಟಿ ರೂ. (ನಿರೀಕ್ಷೆ)
*ಕೇರಳ- 10 ಕೋಟಿ ರೂ. (ನಿರೀಕ್ಷೆ)
*ಆಂಧ್ರ- ತೆಲಂಗಾಣ- 15 ಕೋಟಿ ರೂ. (ನಿರೀಕ್ಷೆ)
*ಉತ್ತರ ಭಾರತ- 3 ಕೋಟಿ ರೂ. (ನಿರೀಕ್ಷೆ)
*ಒಟ್ಟು ಭಾರತದಲ್ಲಿ 70 ಕೋಟಿ ರೂ. ಗ್ರಾಸ್ ಕಲೆಕ್ಷನ್(ನಿರೀಕ್ಷೆ)
*ಓವರ್‌ಸೀಸ್- 60 ಕೋಟಿ ರೂ. (ನಿರೀಕ್ಷೆ)
*ವರ್ಲ್ಡ್ ವೈಡ್ ಗ್ರಾಸ್- 130 ಕೋಟಿ ರೂ. (ನಿರೀಕ್ಷೆ)
ಪಕ್ಕಾ ಆಕ್ಷನ್ ಎಂಟರ್‌ಟೈನರ್ ಆಗಿರುವ 'ಲಿಯೋ' ಚಿತ್ರದಲ್ಲಿ ಫ್ಯಾಮಿಲಿ ಎಲಿಮೆಂಟ್ಸ್ ಸಹ ಸೇರಿಸಲಾಗಿದೆ. ಅರ್ಜುನ್ ಸರ್ಜಾ, ಸಂಜಯ್ ದತ್‌ರಂತಹ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಇನ್ನುಳಿದಂತೆ 'ಲಿಯೋ' ಕೂಡ ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್ ಲಿಸ್ಟ್ ಸೇರಿಕೊಳ್ಳುತ್ತಿದೆ. ಫಸ್ಟ್ ಹಾಫ್ ಚೆನ್ನಾಗಿದ್ದರೂ ಸೆಕೆಂಡ್ ಹಾಫ್ ಸಿನಿಮಾ ಬೋರ್ ಹೊಡೆಸುತ್ತದೆ. ಅನಿರುದ್ಧ್ ಬಿಜಿಎಂ ಚಿತ್ರವನ್ನು ಕೊಂಚಮಟ್ಟಿಗೆ ಮೇಲೆತ್ತಿದೆ.
ಕಳೆದ ವರ್ಷ ಬಿಡುಗಡೆಯಾದ ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ಹೀನಾಯವಾಗಿ ಸೋಲುಂಡಿತ್ತು. ಹಾಗಾಗಿ ಅಭಿಮಾನಿಗಳು 'ಲಿಯೋ' ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯ ಭಾರಕ್ಕೆ ಲೋಕೇಶ್ ಕನಕರಾಜ್ ಸೋತಿರುವಂತೆ ಕಾಣುತ್ತದೆ. ಕೆಲ ವಿಜಯ್ ಅಭಿಮಾನಿಗಳಿಗೂ ಸಹ ಸಿನಿಮಾ ಇಷ್ಟವಾಗಿಲ್ಲ. ಮುಂದಿನ ದಿನಗಳಲ್ಲಿ ಸಿನಿಮಾ ಯಾವ ರೀತಿ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











