Leo: ಕೇರಳದಲ್ಲಿ 'ಲಿಯೋ' ಸಂಭ್ರಮಾಚರಣೆ ವೇಳೆ ಗಾಯಗೊಂಡ ನಿರ್ದೇಶಕ ಲೋಕೇಶ್ ಕನಕರಾಜ್
ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. 6 ದಿನಕ್ಕೆ ಸಿನಿಮಾ 400 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಟ್ರೇಡ್ ಎಕ್ಸ್‌ಪರ್ಟ್ ಹೇಳುತ್ತಿದ್ದಾರೆ. ಇನ್ನು ಪ್ರೇಕ್ಷಕರ ರೆಸ್ಪಾನ್ಸ್ ನೋಡಿ ಚಿತ್ರತಂಡ ಖುಷಿಯಾಗಿದೆ. ಕೇರಳದಲ್ಲೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.
ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡ ಥಿಯೇಟರ್‌ಗಳಿಗೆ ಭೇಟಿ ಕೊಡುತ್ತಿದೆ. ಸಿನಿಮಾ ಸಿಕ್ಕಾಪಟ್ಟೆ ಟ್ರೋಲ್ ಕೂಡ ಎದುರಿಸುತ್ತಿದೆ. ಕೆಲವರು ಲೋಕೇಶ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ವಿಜಯ್ ಅಭಿಮಾನಿಗಳನ್ನು ಹೊರತುಪಡಿಸಿ ಉಳಿದವರಿಗೆ ಸಿನಿಮಾ ನಿರಾಸೆ ಮೂಡಿಸಿದೆ. ಲೋಕೇಶ್ ಸಿನಿಮಾಗಳಲ್ಲಿ 'ಲಿಯೋ' ಕೆಟ್ಟ ಸಿನಿಮಾ ಎನ್ನುವ ಕಾಮೆಂಟ್‌ಗಳು ಬರ್ತಿವೆ.

ನಟ, ನಟಿಯರು 'ಲಿಯೋ' ಸಿನಿಮಾ ಪ್ರಚಾರದಲ್ಲಿ ಭಾಗಿ ಆಗಲಿಲ್ಲ. ಟೈಲರ್ ಲಾಂಚ್, ಆಡಿಯೋ ಲಾಂಚ್ ಯಾವುದೇ ಕಾರ್ಯಕ್ರಮ ಮಾಡಲಿಲ್ಲ. ಆದರೂ ಸಿನಿಮಾ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಾಕ್ಕಿದೆ. ನಿರ್ದೇಶಕ ಲೋಕೇಶ್ ಕನಕರಾಜ್ ಮಾತ್ರ ಒಬ್ಬೊಂಟಿಯಾಗಿ ಸಿನಿಮಾ ಪ್ರಚಾರ ಮಾಡುತ್ತಾ ಬರ್ತಿದ್ದಾರೆ. ಇದೀಗ ಥಿಯೇಟರ್ ವಿಸಿಟ್ ಮಾಡಿ ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ಖುಷಿಯಾಗುತ್ತಿದ್ದಾರೆ.
ಕೇರಳದ ಥಿಯೇಟರ್‌ನಲ್ಲಿ ನಿರ್ದೇಶಕ ಲೋಕೇಶ್ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ. ಥಿಯೇಟರ್ ಹೌಸ್ ಫುಲ್ ಆಗಿತ್ತು. ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಥಿಯೇಟರ್ ಅಂಗಳದಲ್ಲಿ ಜಮಾಯಿಸಿ 'ಲಿಯೋ' ಚಿತ್ರಕ್ಕೆ ಜೈಕಾರ ಹಾಕಿದ್ದಾರೆ. ಇದೇ ವೇಳೆ ಅಭಿಮಾನಿಗಳ ನೂಕಾಟ, ತಳ್ಳಾಟದಲ್ಲಿ ನಿರ್ದೇಶಕ ಲೋಕೇಶ್ ಕನಕರಾಜ್ ಗಾಯಗೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದು "ಗಾಯಗೊಂಡಿದ್ದೇನೆ, ಇನ್ನು ಎರಡು ಚಿತ್ರಮಂದಿರಗಳಿಗೆ ಭೇಟಿ ಕೊಡಲು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ, ಶೀಘ್ರದಲ್ಲೇ ಮತ್ತೆ ಭೇಟಿಯಾಗುತ್ತೇನೆ" ಎಂದು ಲೋಕೇಶ್ ಟ್ವೀಟ್ ಮಾಡಿದ್ದಾರೆ.
2017ರಲ್ಲಿ 'ಮಾನಗರಂ' ಸಿನಿಮಾ ಮೂಲಕ ಲೋಕೇಶ್ ಕನಕರಾಜ್ ಸ್ವತಂತ್ರ ನಿರ್ದೇಶಕರಾದರು. 'ಕೈದಿ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಬಳಿಕ 'ಮಾಸ್ಟರ್' ಹಾಗೂ 'ವಿಕ್ರಂ' ಸಿನಿಮಾಗಳು ಸಕ್ಸಸ್ ಕಂಡವು. ತಮ್ಮದೇ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ 'ಕೈದಿ', 'ವಿಕ್ರಂ' ಸಿನಿಮಾಗಳನ್ನು ಸೇರಿಸಿದ್ದರು. ಇದೀಗ 'ಲಿಯೋ' ಸಿನಿಮಾ ಕೂಡ ಅದೇ ಹಾದಿಯಲ್ಲಿದೆ. ಮೂರು ಸಿನಿಮಾ ಕತೆಗಳಿಗೆ ಲಿಂಕ್ ಕೊಟ್ಟಿರುವ ನಿರ್ದೇಶಕರು ಮುಂದೆ ದೊಡ್ಡ ಚಿತ್ರಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ.
ತಮ್ಮ ವೃತ್ತಿ ಜೀವನದಲ್ಲಿ 10 ಸಿನಿಮಾಗಳನ್ನು ನಿರ್ದೇಶಿಸಿ ಬಳಿಕ ಚಿತ್ರರಂಗಕ್ಕೆ ಗುಡ್‌ಬೈ ಹೇಳುವುದಾಗಿ ಲೋಕೇಶ್ ಹೇಳಿದ್ದಾರೆ. ಹಾಗಾಗಿ ಲೋಕಿ ಪ್ರತಿ ಸಿನಿಮಾ ಕೂಡ ಭಾರೀ ಕುತೂಹಲ ಮೂಡಿಸುತ್ತಿದೆ. ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ 'ಲಿಯೋ' ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ತೆರೆಕಂಡಿದೆ. ಓವರ್‌ಸೀಸ್‌ನಲ್ಲಿ ಸಿನಿಮಾ ಕಲೆಕ್ಷನ್ ಜೋರಾಗಿದೆ.
ಸಂಜಯ್ ದತ್, ಅರ್ಜುನ್ ಸರ್ಜಾ ಸೇರಿದಂತೆ ದೊಡ್ಡ ತಾರಾಗಣ 'ಲಿಯೋ' ಸಿನಿಮಾದಲ್ಲಿದೆ. ತ್ರಿಶಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ತಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಹಬ್ಬದ ಸಂಭ್ರಮದಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ಹಿಂದಿ ಬೆಲ್ಟ್‌ನಲ್ಲಿ ಚಿತ್ರಕ್ಕೆ ಹಿನ್ನಡೆಯಾಗಿದೆ. ಇನ್ನುಳಿದಂತೆ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡುತ್ತಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಹೇಳುತ್ತಿದ್ದಾರೆ.
ಲೋಕೇಶ್ ಕನಕರಾಜ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈಗಾಗಲೇ ರಜನಿಕಾಂತ್ ಕಾಂಬಿನೇಷನ್‌ನಲ್ಲಿ ಸಿನಿಮಾ ಘೋಷಣೆಯಾಗಿದೆ. ಶೀಘ್ರದಲ್ಲೇ ಆ ಸಿನಿಮಾ ಸೆಟ್ಟೇರಲಿದೆ. ಇನ್ನು ಕಮಲ್ ಹಾಸನ್ ನಟನೆಯ 'ವಿಕ್ರಂ' ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ರೋಲೆಕ್ಸ್ ಪಾತ್ರ ಪರಿಚಯಿಸಿದ್ದರು. ಸೂರ್ಯ ರಗಡ್ ಪಾತ್ರದಲ್ಲಿ ಅಬ್ಬರಿಸಿದ್ದರು. ಮುಂದೆ ಲೋಕೇಶ್ ರೋಲೆಕ್ಸ್ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ಮಾಡುವ ಸಾಧ್ಯತೆಯಿದೆ. ಆ ಬಳಿಕ ಕಾರ್ತಿ, ಕಮಲ್, ವಿಜಯ್, ಸೂರ್ಯ ಎಲ್ಲರನ್ನು ಸೇರಿಸಿ ಒಂದು ಸಿನಿಮಾ ಮಾಡುವ ಸುಳಿವು ಸಿಗುತ್ತಿದೆ.


Click it and Unblock the Notifications











