Lokesh Kanagaraj: ಹತ್ತು ಚಿತ್ರಗಳನ್ನು ಮಾತ್ರ ಮಾಡ್ತೀನಿ ಎಂದಿದ್ದ ಲೋಕೇಶ್ ಮುಂದಿನ ಚಿತ್ರಗಳ ಲಿಸ್ಟ್ ಬಿಚ್ಚಿಟ್ರು
ಕಾಲಿವುಡ್ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ 'ಲಿಯೋ' ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ದಳಪತಿ ವಿಜಯ್ ನಟನೆಯ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ದಸರಾ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಇತ್ತೀಚೆಗೆ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮಿಶ್ರ ಪ್ರತಿಕ್ರಿಯೆ ಪಡೆದರೂ ಭರ್ಜರಿ ವೀವ್ಸ್, ಲೈಕ್ಸ್ ಗಿಟ್ಟಿಸ್ತಿದೆ.
'ಮಾನಗರಂ' ಸಿನಿಮಾ ಮೂಲಕ ಲೋಕೇಶ್ ಕನಕರಾಜ್ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ಕಾರ್ತಿ ನಟನೆಯ 'ಕೈದಿ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಅಲ್ಲಿಂದ ಮುಂದೆ ಮುಂದೆ 'ಮಾಸ್ಟರ್', 'ವಿಕ್ರಂ' ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಡುತ್ತಾ ಬರ್ತಿದ್ದಾರೆ. ಹಾಲಿವುಡ್ ಸಿನಿಮಾಗಳಿಂದ ಪ್ರೇರಣೆಗೊಂಡರೂ ಪ್ರೇಕ್ಷಕರನ್ನು ರಂಜಿಸುವಂತಹ ಸಿನಿಮಾಗಳನ್ನು ಕಟ್ಟಿಕೊಡುತ್ತಿದ್ದಾರೆ.

'ಲಿಯೋ' ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ನಿರ್ದೇಶನದ ಚಿತ್ರಕ್ಕೆ ಲೋಕೇಶ್ ಆಕ್ಷನ್ ಕಟ್ ಹೇಳಲಿದ್ದಾರೆ. ಮುಂದಿನ ವರ್ಷ ಸಮ್ಮರ್‌ನಲ್ಲಿ ತಲೈವಾ 171 ಸಿನಿಮಾ ಶುರುವಾಗುತ್ತದೆ ಎಂದು ಹೇಳಿದ್ದಾರೆ. 'ಲಿಯೋ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೀಗ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಈ ಹಾದಿಯಲ್ಲಿ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಕೂಡ ಮಾತನಾಡಿದ್ದಾರೆ.
10 ಸಿನಿಮಾಗಳನ್ನು ಮಾಡಿದ ಬಳಿಕ ಚಿತ್ರರಂಗಕ್ಕೆ ಗುಡ್‌ಬೈ ಹೇಳಲು ನಿರ್ಧರಿಸಿರುವುದಾಗಿ ಈ ಹಿಂದೆ ಲೋಕೇಶ್ ಕನಕರಾಜ್ ಹೇಳಿಕೊಂಡಿದ್ದರು. "ನನ್ನ ಕರಿಯರ್‌ನಲ್ಲಿ ಹೆಚ್ಚು ಸಿನಿಮಾ ಮಾಡಬೇಕು ಎನ್ನುವ ಪ್ಲ್ಯಾನ್ ನನಗೆ ಇಲ್ಲ. ಚಿತ್ರರಂಗದಲ್ಲಿ ಏನಾದರೂ ಮಾಡೋಣ ಅಂತ ನಾನು ಇಲ್ಲಿಗೆ ಬಂದೆ ಅಷ್ಟೇ. ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ ಸಾಧ್ಯವಾಗಿದ್ದು ನಿರ್ಮಾಪಕರ ನಂಬಿಕೆ ಮತ್ತು ಸಹಾಯದಿಂದ. ಹಾಗಾಗಿ ನಾನು ನಿರ್ಮಾಪಕರಿಗೆ ಮತ್ತು ಎಲ್ಲ ನಟರ ಅಭಿಮಾನಿಗಳಿಗೆ ಕೃತಜ್ಞನಾಗಿ ಇರುತ್ತೇನೆ. ನಾನು 10 ಸಿನಿಮಾ ಮಾಡಿದ ಬಳಿಕ ಚಿತ್ರರಂಗ ತೊರೆಯುತ್ತೇನೆ" ಎಂದಿದ್ದರು.
ಈಗಾಗಲೇ ಲೋಕೇಶ್ 5 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಮುಂದೆ ನಿರ್ದೇಶನ ಮಾಡಲಿರುವ ಸಿನಿಮಾಗಳ ಬಗ್ಗೆ ಕೂಡ ಲೆಕ್ಕಾಚಾರದಲ್ಲಿದ್ದಾರೆ. ಈಗಾಗಲೇ ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್ ಎನ್ನುವ ಕ್ರೇಜ್ ಶುರುವಾಗಿದೆ. 'ಕೈದಿ', 'ವಿಕ್ರಂ' ಸಿನಿಮಾಗಳ ಕತೆಗಳಿಗೆ ಲಿಂಕ್ ಇದೆ. 'ಲಿಯೋ' ಸಿನಿಮಾ ಕೂಡ ಇದೇ ಲಿಂಕ್ ಇರುತ್ತಾ? ಎನ್ನುವ ಚರ್ಚೆ ನಡೀತಿದೆ. ಇದೆಲ್ಲದರ ನಡುವೆ ಮುಂದಿನ 5 ಸಿನಿಮಾಗಳ ಬಗ್ಗೆ ನಿರ್ದೇಶಕರು ಮಾತನಾಡಿದ್ದಾರೆ.
'ಲಿಯೋ' ನಿರ್ದೇಶಕರಾಗಿ ನಿಮ್ಮ ಐದನೇ ಚಿತ್ರ. ರಜನಿಕಾಂತ್ ಅವರ ಮುಂದಿನ ಚಿತ್ರದ ಬಳಿಕ 'ಖೈದಿ -2', 'ವಿಕ್ರಮ್ -2', 'ರೋಲೆಕ್ಸ್' ಮುಗಿದ ನಂತರ ಪ್ರಭಾಸ್ ಜೊತೆ ಸಿನಿಮಾ ಮಾಡ್ತೀರಾ ಎನ್ನುತ್ತಿದ್ದಾರೆ. ನಿಜವೇ ಎನ್ನುವ ಪ್ರಶ್ನೆಗೆ ಹೌದು ಎಂದು ಲೋಕೇಶ್ ಸ್ಪಷ್ಟನೆ ನೀಡಿದ್ದಾರೆ.
ನಿವೃತ್ತಿಗೆ ಬಗ್ಗೆ ಮಾತನಾಡಿದ ಲೋಕೇಶ್ ಈ ಹಿಂದೆ ನಾನು 10 ಸಿನಿಮಾಗಳ ಮಾತ್ರ ಮಾಡೋದಾಗಿ ಹೇಳಿದ್ದು ನಿಜ. ಆದರೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಚಿತ್ರರಂಗದವರೆಲ್ಲಾ ಸೇರಿದ್ದೆವು. ಅಲ್ಲಿ ಕೆಲ ನಿರ್ದೇಶಕರು ಚಿತ್ರರಂಗ ಬಿಡುವ ನಿರ್ಧಾರ ಮಾಡಬೇಡಿ ಎಂದರು. ಅವರ ಮಾತಿಗೆ ಗೌರವ ಕೊಟ್ಟು ನಿವೃತ್ತಿ ಬಗ್ಗೆ ಈಗಲೇ ಮಾತನಾಡಲು ಬಯಸುವುದಿಲ್ಲ ಎಂದಿದ್ದಾರೆ.
ಇನ್ನು ವಿಜಯ್ ನಟನೆಯ 'ಲಿಯೋ' ಹಾಲಿವುಡ್‌ನ 'ಎ ಹಿಸ್ಟರಿ ಆಫ್ ವೈಲೆನ್ಸ್' ರೀಮೆಕ್ ಎನ್ನಲಾಗ್ತಿದೆ. ಈ ಬಗ್ಗೆ ಮತ್ತೊಂದು ಸಂದರ್ಶನದಲ್ಲಿ ಲೋಕೇಶ್ ಪ್ರತಿಕ್ರಿಯಿಸಿದ್ದು ಆ ಬಗ್ಗೆ ಸಿನಿಮಾ ರಿಲೀಸ್ ಬಳಿಕ ಮಾತನಾಡುತ್ತೀನಿ ಎಂದಿದ್ದಾರೆ. 'ಲಿಯೋ' ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ನಟಿಸಿದ್ದು ಸಂಜಯ್ ದತ್, ಅರ್ಜುನ್ ಸರ್ಜಾ ಸೇರಿದಂತೆ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ.


Click it and Unblock the Notifications











