ಟಿವಿಕೆ ವಿಜಯ್ ಸಿಎಂ ಆಗಲ್ವಾ? 6 ತಿಂಗಳು ಟೈಂ ಕೊಟ್ಟ ನಿರ್ಗಮಿತ ಮುಖ್ಯಮಂತ್ರಿ ಸ್ಟಾಲಿನ್
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಗೊಂದಲ ನಿರ್ಮಾಣವಾಗಿದೆ. ಟಿವಿಕೆ ಪಕ್ಷ ಮೊದಲ ಪ್ರಯತ್ನದಲ್ಲೇ ಇತಿಹಾಸ ನಿರ್ಮಿಸಿದೆ. 234 ಕ್ಷೇತ್ರಗಳ ಪೈಲಿ 108 ಕ್ಷೇತ್ರಗಳನ್ನು ಗೆದ್ದಿದೆ. ಸರ್ಕಾರ ರಚನೆಗೆ 118 ಮ್ಯಾಜಿಕ್ ನಂಬರ್. ಹಾಗಾಗಿ 10 ಸ್ಥಾನಗಳಿಗಾಗಿ ವಿಜಯ್ ಯಾರ ಜೊತೆ ಕೈ ಜೋಡಿಸುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ.
ವಿಜಯ್ ಅವರನ್ನು ಅಧಿಕಾರದಿಂದ ದೂರ ಇಡಲು ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷದ ನಾಯಕರು ಪ್ರಯತ್ನಿಸುತ್ತಿದ್ದಾರೆ. ವಿರೋಧಿ ಪಕ್ಷಗಳು ಒಂದಾಗಿ ಸರ್ಕಾರ ರಚನೆ ಕರಸತ್ತು ಆರಂಭಿಸಿದ್ದಾರೆ. ವಿಜಯ್ ತಮಿಳುನಾಡು ಮುಖ್ಯಮಂತ್ರಿ ಆಗುವುದಿಲ್ಲ ಎಂದು ನಿನ್ನೆ(ಮೇ 6) ಇಡೀ ದಿನ ಚರ್ಚೆ ನಡೆದಿತ್ತು. ಆದರೆ ಎಲ್ಲದಕ್ಕೂ ಸ್ವತಃ ನಿರ್ಗಮಿತ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತೆರೆ ಎಳೆದಿದ್ದಾರೆ. "ವಿಜಯ್ ಸರ್ಕಾರ ರಚಿಸಲಿ ಬಿಡಿ.. 6 ತಿಂಗಳು ಕಾದು ನೋಡೋಣ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಆಡಳಿತ ವಿರೋಧಿ ಅಲೆಯಿಂದ ಡಿಎಂಕೆ ಪಕ್ಷ ಈ ಬಾರಿ ಚುನಾವಣೆಯಲ್ಲಿ ಸೋತಿದೆ. ದಶಕಗಳಿಂದ ತಮ್ಮನ್ನು ಆಳಿದ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳಿಂದ ಬೇಸತ್ತು ಜನ ಈ ಬಾರಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವನ್ನು ಬೆಂಬಲಿಸಿದ್ದಾರೆ. ದೊಡ್ಡ ಮಟ್ಟದಲ್ಲಿ ಮತ ಚಲಾಯಿಸಿ ಅಧಿಕಾರ ನೀಡಲು ಬಯಸಿದ್ದಾರೆ. ಆದರೆ ಜನರ ತೀರ್ಪು ಗಣನೆಗೆ ತೆಗೆದುಕೊಳ್ಳದೇ ಸ್ಟಾಲಿನ್ ಹಾಗೂ ಪಳನಿಸ್ವಾಮಿ ಸೇರಿ ಸರ್ಕಾರ ರಚಿಸುತ್ತಾರಾ? ಎನ್ನುವ ಚರ್ಚೆ ಭಾರೀ ಸಂಚಲನ ಸೃಷ್ಟಿಸಿತ್ತು.
ರಾಜಕೀಯರಂಗದಲ್ಲಿ ಏನು ಬೇಕಾದರೂ ನಡೆಯುತ್ತದೆ. ಈ ಹಿಂದೆ ಕೂಡ ಇದೇ ರೀತಿ ವಿರೋಧಿ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವ ಉದಾಹರಣೆಗಳಿವೆ. ವಿಜಯ್ ಸರ್ಕಾರ ರಚನೆ ಹಾದಿ ಇನ್ನು ಸುಲಭವಾಗಿಲ್ಲ. ಬೇರೆ ಪಕ್ಷಗಳಿಂದ ಅವರಿಗೆ 10-12 ಶಾಸಕರ ಬೆಂಬಲ ಬೇಕಿದೆ. ಕಾಂಗ್ರೆಸ್ ಈಗಾಗಲೇ ಟಿವಿಕೆಗೆ ಬೆಂಬಲ ಸೂಚಿಸಿದೆ. ಇತರೆ ಪಕ್ಷಗಳಿಂದ ಗೆದ್ದ ಶಾಸಕರನ್ನು ಜೊತೆ ಸೇರಿಸಿಕೊಳ್ಳುವ ಮಾತುಕತೆ ನಡೆದಿದೆ. ಎಐಎಡಿಎಂಕೆ ಜೊತೆಗೂ ಚರ್ಚೆ ನಡೀತಿದೆ. ಡಿಸಿಎಂ ಹಾಗೂ 7 ಸಚಿವ ಸ್ಥಾನ ಕೊಟ್ಟರೆ ಎಐಎಡಿಎಂಕೆ ಪಕ್ಷ ಬೆಂಬಲ ಸೂಚಿಸುತ್ತದೆ ಎನ್ನುವ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗ್ತಿದೆ.

ಡಿಸಿಎಂ ಸೇರಿ 7 ಸಚಿವ ಸ್ಥಾನ ನೀಡುವ ಬದಲು ಇತರೆ ಪಕ್ಷಗಳನ್ನು ಸೇರಿಸಿಕೊಳ್ಳುವುದು, ಅಥವಾ ಆಪರೇಷನ್ ಪಾಲಿಟಿಕ್ಸ್ ಮಾಡುವುದು ಉತ್ತಮ ಎಂದು ಟಿವಿಕೆ ಪಕ್ಷದ ನಾಯಕರು ಯೋಚಿಸುತ್ತಿದ್ದಾರೆ. ಟಿವಿಕೆ ಪಕ್ಷಕ್ಕೆ 10 ಸ್ಥಾನಗಳ ಕೊರತೆ ಇರುವುದರಿಂದ ರಾಜ್ಯಪಾಲರು ವಿಜಯ್ ಸರ್ಕಾರ ರಚನೆಗೆ ಇನ್ನು ಆಹ್ವಾನ ನೀಡಿಲ್ಲ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಸ್ಟಾಲಿನ್ ಹೇಳಿಕೆ ಟಿವಿಕೆ ಪಾಳಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಟೈಮ್ಸ್ ಆಫ್ ಇಂಡಿಯಾ ಮಾಧ್ಯಮಕ್ಕೆ ಸ್ಟಾಲಿನ್ ಪ್ರತಿಕ್ರಿಯೆ ನೀಡಿದ್ದಾರೆ. "ವಿಜಯ್ ಸರ್ಕಾರ ರಚಿಸಲಿ.. ಯಾವುದೇ ತೊಂದರೆ ಕೊಡದೇ 6 ತಿಂಗಳು ಕಾದು ನೋಡೊಣ. ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗ್ಗೆ ಉಚಿತ ಉಪಹಾರ, ಮಹಿಳೆಯರಿಗೆ ಮಾಸಿಕ 1000 ರೂ. ರೀತಿಯ ಸ್ಕೀಮ್ ಮುಂದುವರೆಸಲಿ" ಎಂದಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಟಿವಿಕೆ ಪಕ್ಷ ಘೋಷಿಸಿರುವ ಪ್ರಣಾಳಿಕೆಯನ್ನು ಸಂಪೂರ್ಣವಾಗಿ ಜಾರಿಗೆ ತರುವುದು ಕಷ್ಟ ಎಂದು ಎಂಕೆ ಸ್ಟಾಲಿನ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲಿದೆ ಎಂದಿದ್ದಾರೆ. ಅಂದಹಾಗೆ ಹಾಲಿ ಮುಖ್ಯಮಂತ್ರಿ ಸ್ಟಾಲಿನ್ ತಮ್ಮದೇ ಕ್ಷೇತ್ರದಲ್ಲಿ ಸೋಲುಂಡು ಮುಖಭಂಗ ಅನುಭವಿಸಿದ್ದಾರೆ. ಕೊಳತ್ತೂರಿನಲ್ಲಿ ಕ್ಷೇತ್ರದಲ್ಲಿ ಅವರು ಸ್ಪರ್ಧಿಸಿದ್ದರು. ಆದರೆ ಅಲ್ಲಿ ಟಿವಿಕೆ ಪಕ್ಷದ ವಿ.ಎಸ್. ಬಾಬು ಗೆದ್ದು ಅಚ್ಚರಿ ಮೂಡಿಸಿದ್ದಾರೆ.


Click it and Unblock the Notifications