ಲೈಟ್ಸ್, ಕ್ಯಾಮರಾ, ಲವ್ ; ಸದ್ದಿಲ್ಲದೇ ಛಾಯಾಗ್ರಾಹಕನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ.!
ಕೇವಲ ಎರಡು ಅಕ್ಷರದಲ್ಲಿ ಪ್ರೀತಿಯನ್ನು ನಿರೂಪಿಸುವುದು ಕಷ್ಟ. ಯಾಕೆಂದರೆ.. ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯ ಇಲ್ಲ. ಈ ಪ್ರೀತಿಯನ್ನು ಅನುಭವಿಸಿಯೇ ತೀರಬೇಕು. ಅದರಲ್ಲಿಯೂ ನಿಜವಾದ ಪ್ರೀತಿ ಅಂದರೆ ಯಾವುದು ? ನಿಜವಾದ ಪ್ರೀತಿ ಅಂದರೇನು ? ನಿಜವಾದ ಪ್ರೀತಿಯನ್ನು ಗುರುತಿಸುವುದು ಹೇಗೆ ? ಎಂಬೆಲ್ಲಾ ಪ್ರಶ್ನೆಗಳು ಪ್ರೀತಿಸಿದವರ ಮನದಲ್ಲಿ ಮೂಡುವುದು ಸಹಜ. ಆದರೆ ನಿಜವಾದ ಪ್ರೀತಿ..
ಎನ್ನುವುದು ಹೃದಯದ ಬಡಿತ ಅಲ್ಲ. ನನ್ನ ಹೃದಯದ ಬಡಿತ ಅನುಕ್ಷಣ ನಿನ್ನದೇ ಹೆಸರು ಹೇಳುತ್ತಿದೆ ಎಂದರೆ ಅದು ನಿಜವೂ ಅಲ್ಲ. ನಿಜವಾದ ಪ್ರೀತಿ ಅನ್ನೋದು ಪರಿಪೂರ್ಣ ಪ್ರಣಯವದು ಎನ್ನುವುದು ಹಲವರ ಅಭಿಪ್ರಾಯ. ಇಂತಹ ಪ್ರೀತಿಯಲ್ಲಿ ಸದ್ಯ ಕಾಲಿವುಡ್‌ನ ಕಿನ್ನರಿ ತಾನ್ಯಾ ರವಿಚಂದ್ರನ್ ಬಿದ್ದಿದ್ದಾರೆ.

ಹೌದು.. ತಾನ್ಯಾ ರವಿಚಂದ್ರನ್ ತಮಿಳು ಚಿತ್ರರಂಗದ ಚೆಲುವೆ. 'ಬಲ್ಲೆ ವೆಳ್ಳೈಯತೇವಾ' ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ತಾನ್ಯಾ ಆ ನಂತರ 'ಬೃಂದಾವನಂ'.. ವಿಜಯ್ ಸೇತುಪತಿ ಜೊತೆ 'ಕರುಪ್ಪನ್'.. 'ರಾಜವಿಕ್ರಮಾರ್ಕಾ' .. ಹೀಗೆ ಕೆಲ ಚಿತ್ರಗಳಲ್ಲಿ ಅಭಿನಯಿಸಿದವರು. 2016ರಿಂದ ಇಲ್ಲಿಯವರೆಗೆ ಅಳೆದು ತೂಗಿ ಹತ್ತು ಹನ್ನೆರಡು ಸಿನಿಮಾಗಳನ್ನು ಮಾಡಿರುವ ತಾನ್ಯಾ ಒಂದು ಕಾಲದ ತಮಿಳಿನ ಖ್ಯಾತ ನಟ ರವಿಚಂದ್ರನ್ ಅವರ ಮೊಮ್ಮಗಳು ಕೂಡ ಹೌದು.
ಕೇವಲ ತಮಿಳು ಮಾತ್ರವಲ್ಲ ತೆಲುಗಿನ ಎರಡು ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ ತಾನ್ಯಾ. ಇಂಥಾ ತಾನ್ಯಾ ಸದ್ಯ ಮದುವೆಗೆ ಅಣಿಯಾಗಿದ್ದಾರೆ. ಸದ್ದಿಲ್ಲದೇ ನಿಶ್ಚಿತಾರ್ಥವನ್ನು ಕೂಡ ಮಾಡಿಕೊಂಡಿದ್ಧಾರೆ. ತಾನ್ಯಾ ಅವರ ಕೈ ಹಿಡಿಯುತ್ತಿರುವ ಹುಡುಗ ಬೇರೆ ಯಾರು ಅಲ್ಲ. ಬದಲಿಗೆ ಇದೇ ತಮಿಳು ಚಿತ್ರರಂಗದ ಛಾಯಾಗ್ರಾಹಕ ಗೌತಮ್ ಜಾರ್ಜ್ ಎನ್ನುವುದು ವಿಶೇಷ.
ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಿನಿಮಾಟೋಗ್ರಾಫರ್ ಆಗಿ ಗುರುತಿಸಿಕೊಂಡಿರುವ ಗೌತಮ್ ಜಾರ್ಜ್ 'ಅನ್ನಾಬೆಲ್ಲೆ ಸೇತುಪತಿ', 'ಭೂತದ್ದಂ ಭಾಸ್ಕರ್ ನಾರಾಯಣ' ಚಿತ್ರಗಳನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ರಾಘವ್ ಲಾರೆನ್ಸ್ ಅಭಿನಯದ 'ಬೆಂಜ್' ಚಿತ್ರಕ್ಕೂ ಇವರೇ ಛಾಯಾಗ್ರಾಹಕರು.
ಹೀಗೆ ಚಿತ್ರರಂಗದಲ್ಲಿ ಹಂತ ಹಂತವಾಗಿ ಬೆಳೆಯುತ್ತಿರುವ ಇವರು ಇಬ್ಬರು ಸದ್ಯ ಜೊತೆಯಾಗಿ ಗ್ರಹಸ್ಥಾಶ್ರಮಕ್ಕೆ ಕಾಲಿಡುವ ನಿರ್ಧಾರ ಮಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ''ಒಂದು ಮುತ್ತು, ಒಂದು ಭರವಸೆ, "ಯಾವಾಗಲೂ ಮತ್ತು ಎಂದೆಂದಿಗೂ" ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಸದ್ಯ ಅನೇಕರು ಈ ನವಜೋಡಿಗೆ ಶುಭಾಶಯಗಳನ್ನು ಹೇಳುತ್ತಿದ್ದಾರೆ. ಬಹುಭಾಷಾ ನಾಯಕಿ ತ್ಯಾಪ್ಸಿ ಪನ್ನು ಸೇರಿ ಹಲವರು ಹೊಸ ಬದುಕಿಗೆ ಮುನ್ನುಡಿ ಬರೆಯುತ್ತಿರುವ ನಿಮ್ಮ ಇಬ್ಬರಿಗೆ ಶುಭಾಶಯಗಳು ಎಂದು ಹೇಳಿದ್ದಾರೆ. ಇನ್ನು ಮಾಡಿದ್ದು ಕೆಲವೇ ಚಿತ್ರಗಳಾದರು ಕೂಡ ತಾನ್ಯಾ ಅವರಿಗೆ ಅಭಿಮಾನ ಬಳಗ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ 552,094 ಜನ ಇವರನ್ನು ಹಿಂಬಾಲಿಸುತ್ತಿದ್ದು ಈ ಪೈಕಿ ಹಲವರು ತಾನ್ಯಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನುಳಿದಂತೆ ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಶೀಘ್ರದಲ್ಲಿಯೇ ಸಪ್ತಪದಿ ತುಳಿಯುವ ನಿರೀಕ್ಷೆ ಇದ್ದು ತಮಿಳು ಮತ್ತು ಮಲಯಾಳಂ ಚಿತ್ರರಂಗದ ಹಲವರು ಈ ಮದುವೆಗೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಅಂದ್ಹಾಗೇ ತಾನ್ಯಾ 2024ರಲ್ಲಿ ಬಿಡುಗಡೆಯಾದ 'ರಸಾವತಿ: ದಿ ಆಲ್ಕೆಮಿಸ್ಟ್' ಎಂಬ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಸದ್ಯ.. ಮದುವೆಯಾಗಲು ಸಿದ್ದವಾಗಿರುವ ತಾನ್ಯಾ ಮದುವೆ ನಂತರ ಕೂಡ ಚಿತ್ರರಂಗದಲ್ಲಿ ಮುಂದುವರೆಯಲಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿಯನ್ನು ಮಾಡಿವೆ, ಮದುವೆ ದಿನಾಂಕ ಕೂಡ ಶೀಘ್ರದಲ್ಲಿಯೇ ತಾನ್ಯಾ ಬಹಿರಂಗಗೊಳಿಸುವ ನಿರೀಕ್ಷೆ ಇದೆ.


Click it and Unblock the Notifications











