ವಿಜಯ್ ಸಿನಿಮಾದಲ್ಲಿ ಮಾಡಿದ ತಪ್ಪು ರಜನಿ ಸಿನಿಮಾದಲ್ಲಿ ಮಾಡಲ್ಲ ಅಂದ್ರು ಲೋಕೇಶ್ ಕನಕರಾಜ್!
ಇತ್ತೀಚೆಗೆ ನಟ ದಳಪತಿ ವಿಜಯ್ ಮತ್ತು ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ಬಂದ 'ಲಿಯೋ' ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದೆ. ಜೊತೆಗೆ ಹಲವು ಟೀಕೆಗಳಿಗೂ ಒಳಗಾಗಿತ್ತು. ಈ ಬಗ್ಗೆ ನಿರ್ದೇಶಕ ಲೋಕೇಶ್ ಕನಕರಾಜ್ ಮಾತನಾಡಿದ್ದು, ಈ ತಪ್ಪುಗಳಲ್ಲಿ ರಜನಿಕಾಂತ್ ಅವರೊಂದಿಗಿನ ಸಿನಿಮಾದಲ್ಲಿ ಮಾಡುವುದಿಲ್ಲ ಎಂದಿದ್ದಾರೆ.
ಸದ್ಯ ನಿರ್ದೇಶಕ ಲೋಕೇಶ್ ಕನಕರಾಜ್ ನಟ ರಜನಿಕಾಂತ್ ಅವರೊಂದಿಗೆ 'ತಲೈವರ್ 171' ಸಿನಿಮಾಕ್ಕೆ ಒಂದಾಗುತ್ತಿದ್ದಾರೆ. ಇದಕ್ಕೆ ಇಂತಿಷ್ಟೇ ಗಡುವು ಎಂದು ಹಾಕಿಕೊಂಡಿಲ್ಲವಂತೆ. ಈ ಬಗ್ಗೆ ಮಾತನಾಡಿರುವ ಅವರು ತಮ್ಮ ಕೊನೆಯ ಸಿನಿಮಾದ ಬಗ್ಗೆಯೂ ಹಲವು ಮಾಹಿತಿ ಹಂಚಿಕೊಂಡಿದ್ದಾರೆ. ಲೋಕೇಶ್ ಸಿನೆಮ್ಯಾಟಿಕ್ ಯೂನಿವರ್ಸ್‌ನಲ್ಲಿ ದುರ್ಬಲ ಸಿನಿಮಾ ಲಿಯೋ ಎಂದು ಹಲವರು ಹೇಳುವುದನ್ನು ಒಪ್ಪಿಕೊಂಡಿದ್ದಾರೆ.

ವಿಜಯ್- ಕನಕರಾಜ್ ಜೋಡಿಯ ಲಿಯೋ ಸಿನಿಮಾ
ದಳಪತಿ ವಿಜಯ್, ತ್ರಿಶಾ ಕೃಷ್ಣನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಲೋಕೇರ್ಶ ಕನಕರಾಜ್ ಅವರ ಇತ್ತೀಚಿನ ಚಿತ್ರ ಲಿಯೋ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿತ್ತು. ಹಲವರು ಸಿನಿಮಾವನ್ನು ಟೀಕಿಸಿದ್ದರೂ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಮೊತ್ತವನ್ನು ಗಳಿಸಿದೆ. ಆದರೆ ಲೋಕೇಶ್ ಸಿನೆಮ್ಯಾಟಿಕ್ ಯೂನಿವರ್ಸ್‌ನಲ್ಲಿ ಅತ್ಯಂತ ದುರ್ಬಲ ಸಿನಿಮಾ ಎಂಬ ಬಿರುದನ್ನು ಪಡೆದಿದೆ.
'ಇದೇ ತಪ್ಪನ್ನು ಮತ್ತೆ ಮಾಡುವುದಿಲ್ಲ'
ಲಿಯೋ ಮತ್ತು ಅವರ ಮುಂಬರುವ ಚಿತ್ರದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, "ರಜನಿಕಾಂತ್ ಅವರೊಂದಿಗಿನ ನನ್ನ ಮುಂದಿನ ಚಿತ್ರದ ಬಿಡುಗಡೆಯ ದಿನಾಂಕವನ್ನು ನಾನು ಘೋಷಿಸುವುದಿಲ್ಲ. ಏಕೆಂದರೆ ಆ ದಿನಾಂಕದೊಳಗೆ ಸಿನಿಮಾವನ್ನು ಮುಗಿಸಿ ಬಿಡುಗಡೆ ಮಾಡಲು ನನ್ನ ಮೇಲೆ ಜಾಸ್ತಿ ಒತ್ತಡ ಬರುತ್ತದೆ" ಎಂದಿದ್ದಾರೆ.
"ಒಂದು ಸಿನಿಮಾ ನಾನಂದುಕೊಂಡಂತೆ, ಚೆನ್ನಾಗಿ ಮಾಡುಲು ನನಗೆ ಸ್ವಲ್ಪ ಸಮಯ ಬೇಕು. ಲಿಯೋ ಸಿನಿಮಾದ ದ್ವಿತೀಯಾರ್ಧದ ಬಗ್ಗೆ ಬಂದ ಟೀಕೆಗಳನ್ನು ನಾನು ಸ್ವೀಕರಿಸಿದ್ದೇನೆ. ಅವುಗಳನ್ನೆಲ್ಲಾ ನಾನು ಗಣನೆಗೆ ತೆಗೆದುಕೊಂಡಿದ್ದೇನೆ. ಹೀಗಾಗಿಯೇ ನಾನು ಭವಿಷ್ಯದಲ್ಲಿ ಇನ್ನಷ್ಟು ಎಚ್ಚರಿಕೆಯಿಮದ ಇರುತ್ತೇನೆ" ಎಂದಿದ್ದಾರೆ.
ಮುಂದುವರಿದು ಮಾತನಾಡಿರುವ ಲೋಕೇಶ್ ಕನಕರಾಜ್, " ಲಿಯೋ ಸಿನಿಮಾವನ್ನು ಒಂದು ನಿರ್ದಿಷ್ಟ ದಿನಾಂಕದಂದೇ ಬಿಡುಗಡೆ ಮಾಡಲು ನನ್ನ ಮೇಲೆ ಅಪಾರ ಒತ್ತಡವಿತ್ತು. ಆ ಸಿನಿಮಾ ಮಾಡಲು ಕೇವಲ 10 ತಿಂಗಳು ಮಾತ್ರ ನನಗೆ ಸಿಕ್ಕಿತ್ತು. ನಾನು ಆ ತಪ್ಪನ್ನು ಮತ್ತೆ ಪುನರಾವರ್ತಿಸುವುದಿಲ್ಲ" ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್
ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ (LCU) ಗೆ ಲಿಯೋ ಇತ್ತೀಚಿನ ಸೇರ್ಪಡೆ. ಈ ಚಿತ್ರಕ್ಕಿಂತ ಮೊದಲು ಕಾರ್ತಿ ಅವರ ಕೈತಿ ಮತ್ತು ಕಮಲ್ ಹಾಸನ್ ಅವರ ವಿಕ್ರಮ್ ಸೇರಿಕೊಂಡಿದೆ. ಈ ಎಲ್ಲಾ ಮೂರು ಸಿನಿಮಾಗಳು ಒಂದು ಯೂನಿವರ್ಸ್‌ನಲ್ಲಿ ನಡೆಯಲಿದ್ದು, ಅವುಗಳ ಪೋಷಕ ಪಾತ್ರಗಳು ಬೇರೆ ಬೇರೆ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳುತ್ತವೆ.
ವಿಕ್ರಮ್ ಸಿನಿಮಾದಲ್ಲಿ ನಟ ಸೂರ್ಯ ನಟಿಸಿದ ರೋಲೆಕ್ಸ್ ಎಂಬ ಹೊಸ ಖಳನಾಯಕನ ಪಾತ್ರ ಮತ್ತೊಂದು ಸಿನಿಮಾಗೆ ನಾಂದಿ ಹಾಡಿತ್ತು. ಅದರಲ್ಲಿ ಲಿಯೋ ಪಾರ್ಥಿಬನ್ ಎಂಬ ನಿಗೂಢ ವ್ಯಕ್ತಿಯ ಕಥೆ ಬಂದಿತ್ತು. ಇನ್ನು ಲಿಯೋ ಸಿನಿಮಾದಲ್ಲಿ ಕೈತಿ ಸಿನಿಮಾದ ಪಾತ್ರವೊಂದು ಕಾಣಿಸಿಕೊಂಡಿತ್ತು.
ತಲೈವರ್ 171
ರಜನಿಕಾಂತ್ ಪ್ರಸ್ತುತ ಜೈ ಭೀಮ್ ಖ್ಯಾತಿಯ ನಿರ್ದೇಶಕ ಟಿಜೆ ಜ್ಞಾನವೇಲ್ ಜೊತೆ ವೆಟ್ಟೈಯಾನ್ ಮತ್ತು ಐಶ್ವರ್ಯಾ ರಜನಿಕಾಂತ್ ಜೊತೆ ಲಾಲ್ ಸಲಾಂ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇದಾದ ನಂತರ ಲೋಕೇಶ್ ಕನಕರಾಜ್ ಅವರೊಂದಿಗೆ ತಲೈವರ್ 171 ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದರೆ, ಈ ಸಿನಿಮಾ ಎಲ್‌ಸಿಯುಯ ಒಂದು ಭಾಗವಲ್ಲ.


Click it and Unblock the Notifications











