ವರ್ಷಗಟ್ಟಲೇ ಚಿತ್ರೀಕರಣ ಮಾಡೋದೇ ಇಲ್ಲ ಲೋಕೇಶ್ ಕನಕರಾಜ್! ಚಿತ್ರಗಳ ಶೂಟಿಂಗ್ ದಿನ ಇಷ್ಟೇ!
ಲೋಕೇಶ್ ಕನಕರಾಜ್.. ಈ ಹೆಸರು ಕೇಳಿದ್ರೆ ಮಾಡರ್ನ್ ಸಿನಿ ರಸಿಕರ ಕಿವಿ ನೆಟ್ಟಗಾಗುತ್ತೆ. ಲೋಕೇಶ್ ಅಂದ್ರೆ ಹೊಸತನ, ಲೋಕೇಶ್ ಅಂದ್ರೆ ವಿಭಿನ್ನ ಕಥೆ, ಲೋಕೇಶ್ ಅಂದ್ರೆ ಮಾಸ್ ಆಕ್ಷನ್ ಸಿನಿಮಾ ಎಂಬ ಭಿನ್ನ ವಿಭಿನ್ನ ಅಭಿಪ್ರಾಯಗಳಿವೆ.
ಹತ್ತಾರು ವರ್ಷಗಳಿಂದ ನಿರ್ದೇಶನ ಮಾಡುತ್ತಾ ಬಂದಿರುವ ದಿಗ್ಗಜ ನಿರ್ದೇಶಕರ ಸಾಲಿನಲ್ಲಿ ಕೇವಲ ಮೂರ್ನಾಲ್ಕು ಸಿನಿಮಾಗಳನ್ನು ಮಾಡಿರುವ ಲೋಕೇಶ್ ಕನಕರಾಜ್ ನಿಲ್ಲುವುದೆಂದರೆ ಸುಲಭದ ಮಾತಲ್ಲ.

ಹೌದು, 37 ವರ್ಷದ ಲೋಕೇಶ್ ಕನಕರಾಜ್ 2016 ರಲ್ಲಿ ಅವಿಯಲ್ ಎಂಬ ಆಂಥಲಜಿ ಚಿತ್ರದ ಒಂದು ಸಂಚಿಕೆಗೆ ಆಕ್ಷನ್ ಕಟ್ ಹೇಳುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಯಾವ ನಿರ್ದೇಶಕನ ಬಳಿಯೂ ಸಹಾಯಕನಾಗಿ ಕೆಲಸ ಕಲಿಯದ ಲೋಕೇಶ್ ಕನಕರಾಜ್ 2017ರಲ್ಲಿ ತೆರೆಗೆ ಬಂದ 'ಮಾನಗರಂ' ಚಿತ್ರದ ಮೂಲಕ ಸಂಪೂರ್ಣವಾಗಿ ನಿರ್ದೇಶಕನಾಗಿ ಬಡ್ತಿ ಪಡೆದರು.
ಮಾನಗರಂ ಚಿತ್ರ ಕೆಲ ತಮಿಳು ಪ್ರೇಕ್ಷಕರಿಂದ ಗುರುತಿಸಲ್ಪಟ್ಟಿತೇ ಹೊರತು ರಾಜ್ಯ ಮೀರಿ ಈ ಚಿತ್ರ ಖ್ಯಾತಿ ಪಡೆಯಲಿಲ್ಲ. ಆದರೆ 2019ರಲ್ಲಿ ತೆರೆಗೆ ಬಂದ ಕಾರ್ತಿ ನಟನೆಯ 'ಖೈದಿ' ಚಿತ್ರ ಸೌತ್ ಇಂಡಿಯಾ ಗಮನ ಸೆಳೆಯಿತು. ಲಾಕ್ ಡೌನ್ ಸಮಯದಲ್ಲಿ ದೇಶವ್ಯಾಪಿ ಮೆಚ್ಚುಗೆಯನ್ನೂ ಸಹ ಖೈದಿ ಪಡೆಯಿತು.
ನಂತರ ಬಂದ ದಳಪತಿ ವಿಜಯ್ ಮುಖ್ಯ ಭೂಮಿಕೆಯ ಮಾಸ್ಟರ್ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿತ್ತು. ಇನ್ನು ಕಳೆದ ವರ್ಷ ಬಂದ ವಿಕ್ರಂ ಲೋಕೇಶ್ ಕನಕರಾಜ್ ಮೇಲಿನ ಕ್ರೇಜ್ ಹೆಚ್ಚಿಸಿತು. ತಮಿಳುನಾಡಿನ ಎಲ್ಲಾ ಕಲೆಕ್ಷನ್ ದಾಖಲೆಯನ್ನು ಮುರಿದು ಹಾಕಿದ ವಿಕ್ರಂ ಇಂಡಸ್ಟ್ರಿ ಹಿಟ್ ಆಯಿತು.
ಹೀಗೆ ದೊಡ್ಡ ದೊಡ್ಡ ಚಿತ್ರಗಳನ್ನು ನಿರ್ದೇಶಿಸಿ ಬೆರಳೆಣಿಕೆಯಷ್ಟು ಚಿತ್ರಗಳ ಮೂಲಕವೇ ಸ್ಟಾರ್ ನಿರ್ದೇಶಕನಾಗಿರುವ ಲೋಕೇಶ್ ಕನಕರಾಜ್ ಈಗ ಮತ್ತೆ ವಿಜಯ್ ಜತೆ ಕೈ ಜೋಡಿಸಿದ್ದು, ಲಿಯೊ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಇನ್ನು ಲಿಯೊ ಚಿತ್ರ ಕಳೆದ ವರ್ಷದ ಕೊನೆಯಲ್ಲಿ ಸೆಟ್ಟೇರಿ, ಕೆಲವೇ ತಿಂಗಳುಗಳಲ್ಲಿ ಚಿತ್ರೀಕರಣ ಮುಗಿಸಿದೆ. ಲೋಕೇಶ್ ಕನಕರಾಜ್ ಇಷ್ಟು ಬೇಗ ಚಿತ್ರೀಕರಣ ಮುಗಿಸಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಹೌದು, ಲಿಯೊ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಕೇವಲ 129 ದಿನಗಳಲ್ಲಿ ಮುಗಿಸಿದ್ದು, ಸಿಕ್ಕಾಪಟ್ಟೆ ಹೈಪ್ ಇರುವ ಚಿತ್ರವನ್ನು ಇಷ್ಟು ಬೇಗ ಮುಗಿಸುವುದು ಸಾಹಸವೇ ಸರಿ ಎಂದು ಸಿನಿ ರಸಿಕರು ಆಶ್ಚರ್ಯ ಹೊರಹಾಕಿದ್ದಾರೆ. ಆದರೆ ಲೋಕೇಶ್ ಕನಕರಾಜ್ ಲಿಯೋ ಚಿತ್ರಕ್ಕಿಂತ ವೇಗವಾಗಿ ವಿಕ್ರಮ್ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕಿದೆ.
ಹಾಗಾದರೆ ಲೋಕೇಶ್ ಕನಕರಾಜ್ ನಿರ್ದೇಶನದ ಎಲ್ಲಾ ಚಿತ್ರಗಳ ಚಿತ್ರೀಕರಣ ಎಷ್ಟು ದಿನಗಳವರೆಗೆ ನಡೆದಿವೆ ಎಂಬ ಮಾಹಿತಿ ಈ ಕೆಳಕಂಡಂತಿವೆ..
ಮಾನಗರಂ: 45 ದಿನಗಳು
ಖೈದಿ : 62 ರಾತ್ರಿಗಳು
ಮಾಸ್ಟರ್ : 129 ದಿನಗಳು
ವಿಕ್ರಮ್ : 110. ದಿನಗಳು
ಲಿಯೊ : 125 ದಿನಗಳು


Click it and Unblock the Notifications











