ಕನ್ನಡ ನಿರ್ಮಾಪಕರ ಜೊತೆ ಕೈ ಜೋಡಿಸಿದ ಲೋಕೇಶ್ ಕನಕರಾಜ್; ಕಥೆ ಏನು? ಹೀರೊ ಯಾರು?
ಕಾಲಿವುಡ್ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಹೊಸ ಸಿನಿಮಾ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ. 5 ವರ್ಷಗಳ ಹಿಂದೆ ಬಂದಿದ್ದ 'ಕೈದಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಬಳಿಕ 'ಮಾಸ್ಟರ್', 'ವಿಕ್ರಂ' ಎನ್ನುವ ಮತ್ತೆರಡು ಹಿಟ್ ಕೊಟ್ಟು ಲೋಕೇಶ್ ಗಮನ ಸೆಳೆದರು. ಸದ್ಯ ರಜನಿಕಾಂತ್ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ನಿರ್ದೇಶಕರು ತಯಾರಿ ನಡೆಸುತ್ತಿದ್ದಾರೆ.
ಕಳೆದ ವರ್ಷ ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಸಿನಿಮಾ ತೆರೆಕಂಡಿತ್ತು. ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ ರಜನಿಕಾಂತ್ ಚಿತ್ರ ನಿರ್ದೇಶಿಸುವ ಅವಕಾಶ ಧಕ್ಕಿದೆ. ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ತಲೈವಾ171 ಸಿನಿಮಾ ಮೂಡಿ ಬರಲಿದೆ. ಆದರೆ ಲೋಕೇಶ್ ನಿರ್ದೇಶನದ ಮುಂದಿನ ಚಿತ್ರವನ್ನು ಕನ್ನಡ ಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸಲಿದೆ. ಈ ಬಗ್ಗೆ ಭಾರೀ ಚರ್ಚೆ ನಡೀತಿದೆ.

ಬಹಳ ಬೇಗ ಸಿನಿಮಾಗಳನ್ನು ಮಾಡಿಮುಗಿಸುವುದರಲ್ಲಿ ಲೋಕೇಶ್ ಕನಕರಾಜ್ ನಿಸ್ಸೀಮರು. ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರುವುದು ಇತ್ತೀಚೆಗೆ ಬಹಳ ತಡವಾಗುತ್ತಿದೆ. ಆದರೆ ಲೋಕೇಶ್ ವರ್ಷಕ್ಕೊಂದು ಸಿನಿಮಾ ಮಾಡುತ್ತಾ ಬರುತ್ತಿದ್ದಾರೆ. ರಜನಿಕಾಂತ್ ನಟನೆಯ 171 ಚಿತ್ರವನ್ನಯ ಆದಷ್ಟು ಬೇಗ ಮುಗಿಸಿ ಮತ್ತೊಂದು ಸಿನಿಮಾ ಕೈಗೆತ್ತಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.
ಈಗಾಗಲೇ ತೆರೆಮರೆಯಲ್ಲಿ ಲೋಕೇಶ್ ಮತ್ತೊಂದು ಚಿತ್ರಕ್ಕಾಗಿ ಕೆಲಸ ಆರಂಭಿಸಿದ್ದಾರೆ. ಆದರೆ ಹೀರೊ ಯಾರು ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. ಅಂದಹಾಗೆ ಈ ಚಿತ್ರವನ್ನ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡಲಿದೆ. ಸದ್ಯ ಲೋಕೇಶ್ ಕನಕರಾಜ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿರುವ ತಂಡ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಸುಳಿವು ನೀಡಿದೆ.

ಯಶ್ ನಟನೆಯ 'ಟಾಕ್ಸಿಕ್', ಧ್ರುವ ಸರ್ಜಾ- ಪ್ರೇಮ್ ಜೋಡಿಯ 'ಕೆಡಿ' ಸಿನಿಮಾಗಳನ್ನು ಈಗಾಗಲೇ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ದರ್ಶನ್, ಪ್ರೇಮ್ ಕಾಂಬಿನೇಷನ್ ಸಿನಿಮಾ ಕೂಡ ಘೋಷಣೆ ಮಾಡಿದೆ. ಇದೆಲ್ಲದರ ಜೊತೆಗೆ ಮುಂದಿನ ಚಿತ್ರಕ್ಕಾಗಿ ಲೋಕೇಶ್ ಕನಕರಾಜ್‌ನ ಒಪ್ಪಿಸಿದೆ. ಸದ್ಯ ಈ ಕ್ರೇಜಿ ಕಾಂಬಿನೇಷನ್ ಚಿತ್ರಕ್ಕೆ ಪ್ರಭಾಸ್ ಹೀರೊ ಎನ್ನುವ ಊಹಾಪೋಹ ಶುರುವಾಗಿದೆ.
ತಲೈವಾ171 ಬಳಿಕ 'ಕೈದಿ' ಸೀಕ್ವೆಲ್ ಮಾಡಲು ಲೋಕೇಶ್ ಕನಕರಾಜ್ ನಿರ್ಧರಿಸಿದ್ದಾರೆ ಎನ್ನುವುದು ಕೆಲವರ ವಾದ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಿಸುತ್ತದೆ ಎನ್ನುವ ಲೆಕ್ಕಾಚಾರ ಕೆಲವರದ್ದು. ಅದೇ ನಿಜವಾದರೆ ಈ ಚಿತ್ರದಲ್ಲಿ ಕಾರ್ತಿ ಹೀರೊ ಆಗಿ ನಟಿಸಲಿದ್ದಾರೆ. ಒಟ್ಟಾರೆ ಹೊಂಬಾಳೆ ಫಿಲ್ಮ್ಸ್ ರೀತಿಯಲ್ಲೇ ಕೆವಿಎನ್ ಸಂಸ್ಥೆ ಕೂಡ ಪರಭಾಷೆಗಳಲ್ಲಿ ದೊಡ್ಡ ದೊಡ್ಡ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ.
ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಹಿನ್ನೆಲೆ ಯಾರು, ಯಾವ ಭಾಷೆಯಲ್ಲಿ ಬೇಕಾದರೂ ಸಿನಿಮಾ ಮಾಡಬಹುದು. ಅದನ್ನು ಎಲ್ಲಾ ಭಾಷಿಕರಿಗೆ ತೋರಿಸಬಹುದು ಎನ್ನುವ ಲೆಕ್ಕಾಚಾರ ನಟಿತಿದೆ. ಅದೇ ಕಾರಣಕ್ಕೆ ಕಲಾವಿದರು, ತಂತ್ರಜ್ಞರು, ಚಿತ್ರ ನಿರ್ಮಾಣ ಸಂಸ್ಥೆಗಳು ಭಾಷೆಯ ಗಡಿದಾಟಿ ಸಿನಿಮಾಗಳಲ್ಲಿ ಕೆಲಸ ಮಾಡುವಂತಾಗಿದೆ.
ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯ ಸಿನಿಮಾ 'ಕೈದಿ' ಬರೆದ ದಾಖಲೆಗಳು ಒಂದೆರಡಲ್ಲ. ಇನ್ನು ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ 'ಕೈದಿ', 'ವಿಕ್ರಂ' ಹಾಗೂ 'ಲಿಯೋ' ಸಿನಿಮಾಗಳಿವೆ. ಮುಂದಿನ ಎಲ್ಲಾ ಕಥೆಗಳನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡಲು ಐಡಿಯಾ ಇದೆ. ಅದಕ್ಕೂ ಮುನ್ನ 'ಕೈದಿ' ಸೀಕ್ವೆಲ್ ತೆರೆಗೆ ಬರಲಿದೆ.


Click it and Unblock the Notifications











