'ಕೂಲಿ' ಚಿತ್ರಕ್ಕೆ ನನ್ನ ಸಂಭಾವನೆ ಅಷ್ಟು ಯಾಕಂದ್ರೆ..; ಟ್ಯಾಕ್ಸ್ ಕೂಡ ಕಟ್ತೀನಿ- ಲೋಕೇಶ್
ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಬಹಳ ಹೈಪ್ ಕ್ರಿಯೇಟ್ ಮಾಡ್ತಿದೆ. ಆಗಸ್ಟ್ 14ಕ್ಕೆ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಅಂದಾಜು 350 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ರಜನಿಕಾಂತ್, ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್ ಹಾಗೂ ನಿರ್ದೇಶಕ ಲೋಕೇಶ್ ಕನಕರಾಜ್ ಚಿತ್ರಕ್ಕಾಗಿ ಭಾರೀ ಸಂಭಾವನೆ ಪಡೆದಿದ್ದಾರೆ.
ಚಿತ್ರದ ಮುಕ್ಕಾಲು ಭಾಗ ಬಜೆಟ್ ಕಲಾವಿದರ ಸಂಭಾವನೆ ರೂಪದಲ್ಲಿ ಹೋಗಿದೆ. ರಜನಿಕಾಂತ್ 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ನಾಗಾರ್ಜುನಾ 20 ಕೋಟಿ ರೂ. ಹಾಗೂ ಆಮೀರ್ ಖಾನ್ 25 ಕೋಟಿ ರೂ. ಜೇಬಿಗಿಳಿಸಿದ್ದಾರೆ ಎನ್ನಲಾಗ್ತಿದೆ. ಇದೀಗ ಸ್ವತಃ ತಮ್ಮ ಸಂಭಾವನೆ ಬಗ್ಗೆ ನಿರ್ದೇಶಕ ಲೋಕೇಶ್ ಕನಕರಾಜ್ ಮಾತನಾಡಿದ್ದಾರೆ. ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ಲೋಕೆಶ್ ಸದ್ದು ಮಾಡ್ತಿದ್ದಾರೆ. ಹಾಗಾಗಿ ಸಹಜವಾಗಿಯೇ 'ಕೂಲಿ' ಸಿನಿಮಾ ಕೂಡ ನಿರೀಕ್ಷೆ ಹುಟ್ಟಾಕ್ಕಿದೆ.

8 ವರ್ಷಗಳ ಹಿಂದೆ 'ಮಾನಗರಂ' ಚಿತ್ರದ ಮೂಲಕ ಲೋಕೇಶ್ ಕನಕರಾಜ್ ಚಿತ್ರದಲ್ಲಿ ನಿರ್ದೇಶಕರಾಗಿ ಗುರ್ತಿಸಿಕೊಂಡಿದ್ದರು. ಬಳಿಕ ಬಂದ 'ಕೈದಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಚಿತ್ರದಿಂದ ಲೋಕೇಶ್ ಹೆಸರು ಭಾರತೀಯ ಚಿತ್ರರಂಗದಲ್ಲಿ ದೊಡ್ಡದಾಗಿ ಸದ್ದು ಮಾಡಲು ಆರಂಭಿಸಿತು. 'ಮಾಸ್ಟರ್', 'ವಿಕ್ರಂ' ಹಾಗೂ 'ಲಿಯೋ' ಸಿನಿಮಾಗಳ ಮೂಲಕ ಗೆಲುವಿನ ಓಟ ಮುಂದುವರೆಸಿದ್ದರು.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಮಲ್ ಹಾಸನ್‌ಗೆ 'ವಿಕ್ರಂ' ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟವರು ಲೋಕೇಶ್. ಇನ್ನು ತಮ್ಮ ಸಿನಿಮಾಗಳ ಕಥೆಗಳಿಗೆ ಲಿಂಕ್ ಇಟ್ಟು ಸಿನಿಮ್ಯಾಟಿಕ್ ಯೂನಿವರ್ಸ್ ಪ್ಲ್ಯಾನ್ ಮಾಡುತ್ತಿದ್ದಾರೆ. ಮುಂದೆ 'ಕೈದಿ- 2' ಹಾಗೂ 'ರೊಲೆಕ್ಸ್' ಚಿತ್ರಗಳನ್ನು ಕಟ್ಟಿಕೊಡಲು ಮುಂದಾಗಿದ್ದಾರೆ. ಆಮೀರ್ ಖಾನ್ ಜೊತೆಗೂ ಒಂದು ಸಿನಿಮಾ ಮಾಡುವುದು ಖಚಿತವಾಗಿದೆ.

'ಕೂಲಿ' ಸಿನಿಮಾ ಪ್ರಮೋಷನ್ ಜೋರಾಗಿದೆ. 'ದಿ ಹಾಲಿವುಡ್ ರಿಪೋರ್ಟರ್' ಯೂಟ್ಯೂಬ್ ಸಂದರ್ಶನದಲ್ಲಿ ಲೋಕೇಶ್ ಕನಕರಾಜ್ ಮಾತನಾಡಿದ್ದಾರೆ. ರಜನಿಕಾಂತ್ ಹಾಗೂ ತಮ್ಮ ಸಂಭಾವನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. "ರಜನಿಕಾಂತ್ ಸರ್ ಸಂಭಾವನೆ ಬಗ್ಗೆ ನಾನು ಮಾತನಾಡಲ್ಲ. ನನಗೆ 50 ಕೋಟಿ ರೂ. ಸಂಭಾವನೆ ಅನ್ನೋದು ನಿಜ. ಅದಕ್ಕೆ ನಾನು ಟ್ಯಾಕ್ಸ್ ಕೂಡ ಕಟ್ತೀನಿ. ನಾನು ಈ ಹಿಂದೆ ಮಾಡಿದ್ದ 'ಲಿಯೋ' ಸಿನಿಮಾ 600 ಕೋಟಿ ಕಲೆಕ್ಷನ್ ಮಾಡಿತ್ತು. ಹಾಗಾಗಿ ನನ್ನ ಸಂಭಾವನೆ ಕೂಡ ಡಬಲ್ ಆಗಿದೆ. ನನ್ನ ತ್ಯಾಗಕ್ಕೆ ಪ್ರತಿಫಲ ಇದು. ಯಾವುದು ಸುಲಭವಾಗಿ ಬರಲ್ಲ" ಎಂದು ಲೋಕೇಶ್ ವಿವರಿಸಿದ್ದಾರೆ.
ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ 'ಕೂಲಿ' ಚಿತ್ರ ನಿರ್ಮಾಣವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗುತ್ತಿದೆ. ಈಗಾಗಲೇ ಚಿತ್ರದ ಒಂದೊಂದೇ ಹಾಡು ರಿಲೀಸ್ ಆಗಿ ಸದ್ದು ಮಾಡ್ತಿದೆ. 'ಮೋನಿಕಾ' ಸಾಂಗ್‌ಗೆ ಪೂಜಾ ಹೆಗ್ಡೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈಗ ಸಾಂಗ್ ಟ್ರೆಂಡಿಂಗ್‌ನಲ್ಲಿದೆ.
ಸಿನಿಮಾ ಬಿಡುಗಡೆಯಾದ ದಿನ ಮೊದಲ 3 ಶೋ ನೋಡ್ತೀನಿ. ಬಳಿಕ ಶಾಲಾ ಸ್ನೇಹಿತರ ಜೊತೆ ನಾನು ಒಂದು ವಾರ ಅಜ್ಞಾತ ಸ್ಥಳಕ್ಕೆ ಹೋಗಿಬಿಡ್ತೀನಿ. ಚಿತ್ರಕ್ಕೆ ಸಿಗುವ ರೆಸ್ಪಾನ್ಸ್, ವಿಮರ್ಶೆ, ಬಾಕ್ಸಾಫೀಸ್ ಗಳಿಕೆ ಹೀಗೆ ಯಾವುದರ ಬಗ್ಗೆಯೂ ಆ ಸಮಯದಲ್ಲಿ ತಲೆ ಕೆಡಿಸಿಕೊಳ್ಳಲ್ಲ. ವಾರದ ಬಳಿಕ ವಾಪಸ್ ಬರ್ತೀನಿ. ನನ್ನ ಹಿಂದಿನ ಸಿನಿಮಾಗಳ ಸಂದರ್ಭದಲ್ಲಿ ಅದೇ ರೀತಿ ಮಾಡಿದ್ದೆ. 'ಕೂಲಿ' ಸಿನಿಮಾ ಬಿಡುಗಡೆ ಸಮಯದಲ್ಲಿ ಕೂಡ ಅದೇ ಲೆಕ್ಕಾಚಾರ ಎಂದಿದ್ದಾರೆ.
ಆಗಸ್ಟ್ 2ರಂದು 'ಕೂಲಿ' ಚಿತ್ರದ ಟ್ರೈಲರ್ ಬಿಡುಗಡೆ ಆಗುತ್ತದೆ ಎಂದು ಲೋಕೇಶ್ ಕನಕರಾಜ್ ಮಾಹಿತಿ ನೀಡಿದ್ದಾರೆ. ಚಿತ್ರದಲ್ಲಿ ಮಲಯಾಳಂ ನಟ ಸೌಬಿನ್ ಶಾಹಿರ್, ಸತ್ಯರಾಜ್, ಶ್ರುತಿ ಹಾಸನ್, ರೆಬಾ ಮೊನಿಕಾ ಸೇರಿ ದೊಡ್ಡ ತಾರಾಗಣವಿದೆ.


Click it and Unblock the Notifications











