'ವಿಡಾಮುಯಾರ್ಚಿ'ಯಿಂದ ಲೈಕಾಗೆ ₹127.5 ಕೋಟಿ ನಷ್ಟ; ಅಜಿತ್ ಸಂಭಾವನೆಗೆ ಕಟ್ಟಿದ ಬಡ್ಡಿಯೇ ₹50 ಕೋಟಿ
ಅಜಿತ್ ಕುಮಾರ್ ನಟಿಸಿದ ಸಿನಿಮಾ ವಿಡಾಮುಯಾರ್ಚಿ ಇತ್ತೀಚೆಗೆ ರಿಲೀಸ್ ಆಗಿತ್ತು. ಬಹುನಿರೀಕ್ಷೆಯನ್ನು ಇಟ್ಟುಕೊಂಡು ಬಿಡುಗಡೆ ಮಾಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಎರಡೂವರೆ ವರ್ಷಗಳ ಬಳಿಕ ಅಜಿತ್ ಸಿನಿಮಾ ರಿಲೀಸ್ ಆಗುತ್ತಿದ್ದರಿಂದ 'ವಿಡಾಮುಯಾರ್ಚಿ' ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡುತ್ತೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆ ನಿರೀಕ್ಷೆ ಎಲ್ಲಾ ಸುಳ್ಳಾಗಿತ್ತು.
ಸತತ ಸೋಲುಗಳಿಂದ ಕಂಗೆಟ್ಟಿರುವ ಲೈಕಾ ಪ್ರೊಡಕ್ಷನ್‌ಗೆ 'ವಿಡಾಮುಯಾರ್ಚಿ' ಸೂಪರ್ ಸಕ್ಸಸ್ ಕೊಡುಬಹುದೆಂಬ ನಿರೀಕ್ಷೆಯಿತ್ತು. ಆದರೆ, ಫಸ್ಟ್ ಡೇ ಫಸ್ಟ್ ಶೋನೇ ಸಿನಿಮಾಗೆ ನೆಗೆಟಿವ್ ರಿಪೋರ್ಟ್ ಸಿಕ್ಕಿತ್ತು. ಹೀಗಾಗಿದ್ದರೂ ವೀಕೆಂಡ್‌ನಲ್ಲಿ ಸಿನಿಮಾ ಚೇತರಿಕೆ ಕಾಣಬಹುದೆಂಬ ನಂಬಿಕೆಯಿತ್ತು. ಕೊನೆಗೂ ಅದೂ ಸುಳ್ಳಾಯ್ತು. ಸದ್ಯ ಲೈಕಾ ಪ್ರೊಡಕ್ಷನ್ ಈ ಸಿನಿಮಾದಲ್ಲಿ ₹127.5 ಕೋಟಿ ಕಳೆದುಕೊಂಡಿದೆ ಎಂದು ವರದಿಯಾಗಿದೆ.

'ವಿಡಾಮುಯಾರ್ಚಿ' ಸಿನಿಮಾ ಸೋಲಿಗೆ ಸಿನಿಮಾಪ್ರೇಮಿಗಳು ನೂರೆಂಟು ಕಾರಣಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಸಿನಿಮಾದಲ್ಲಿ ಖಡಕ್ ಡೈಲಾಗ್‌ಗಳಿಲ್ಲ, ಮಾಸ್ ಫೀಲ್ ಕೊಡುವ ದೃಶ್ಯಗಳಿಲ್ಲ. ಇದೇ ನಿರೀಕ್ಷೆಯನ್ನು ಇಟ್ಟಿಕೊಂಡು ಬಂದಿದ್ದರಿಂದ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸಬೇಕಾಯ್ತು.
ತಮಿಳಿನಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ಸ್ ಅಜಿತ್ ಜೊತೆ ಸೇರಿ ಸಿನಿಮಾಗೆ ಕೈ ಹಾಕಿತ್ತು. ತಮಿಳು ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ, 'ವಿಡಾಮುಯಾರ್ಚಿ' ಸಿನಿಮಾದ ಬಜೆಟ್ ಬರೋಬ್ಬರಿ 280 ಕೋಟಿ ರೂ. ಎನ್ನಲಾಗಿದೆ. ಇದರಲ್ಲಿ ಅರ್ಧದಷ್ಟು ಬಜೆಟ್ ಅಜಿತ್, ಸಹ ಕಲಾವಿದರು, ನಿರ್ದೇಶಕರು ಹಾಗೂ ತಂತ್ರಜ್ಞರು ಇವರ ಸಂಬಳಕ್ಕೆ ಹೋಗಿದೆ ಎನ್ನಲಾಗಿದೆ.
ಇನ್ನೊಂದು ವಿಶೇಷ ಅಂದರೆ, 'ವಿಡಾಮುಯಾರ್ಚಿ' ಸಿನಿಮಾವನ್ನು ಸಂಭಾವನೆಯನ್ನು ಬಿಟ್ಟು ಕೇವಲ 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿದೆಯಂತೆ. ಜಾಹೀರಾತು ಅಂತ 10 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇದನ್ನು ಬಿಟ್ಟರೆ, ಅಜಿತ್ ಸಂಭಾವನೆ ತೆಗೆದುಕೊಂಡು ಮೊತ್ತಕ್ಕೆ 50 ಕೋಟಿ ರೂಪಾಯಿ ಬಡ್ಡಿ, ಇತರೆ ಅಗತ್ಯಗಳಿಗಾಗಿ ಮಾಡಿದ ಖರ್ಚಿಗೆ 20 ಕೋಟಿ ರೂ. ಬಡ್ಡಿಯನ್ನೇ ಕಟ್ಟಲಾಗಿದೆಯಂತೆ. ಒಟ್ಟು 70 ಕೋಟಿ ರೂ. ಕೇವಲ ಬಡ್ಡಿ ಕಟ್ಟಿ ಲೈಕಾ ಪ್ರೊಡಕ್ಷನ್ ಸುಸ್ತಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ.
ಲೈಕಾ ಪ್ರೊಡಕ್ಷನ್ ಸಂಸ್ಥೆ ಬಿಡುಗಡೆಗೂ ಮುನ್ನ 156 ಕೋಟಿ ರೂ. ಹಣಗಳನ್ನು ಗಳಿಸಿತ್ತು. ಇನ್ನು ಉಳಿದ 124 ಕೋಟಿ ರೂಪಾಯಿ ಮೊತ್ತವನ್ನು ಥಿಯೇಟರ್‌ಗಳಿಂದ ಪಡೆಯಬೇಕಿತ್ತು. ಆದರೆ, ತಮಿಳುನಾಡು ಸೇರಿ ಭಾರತದಾದ್ಯಂತ ಕೇವಲ 97.43 ಕೋಟಿ ರೂ. ಕಲೆಕ್ಷನ್ ಆಗಿತ್ತು. ಅದರಲ್ಲಿ ವಿದೇಶದಿಂದ 40 ಕೋಟಿ ರೂ. ಬಂದಿತ್ತು. ಆದರೆ, ಶೇರು ಅಂತ ಸಿಕ್ಕಿದ್ದು ಕೇವಲ 14 ಕೋಟಿ ರೂ. ಒಟ್ಟು ಶೇರು ಬಂದಿದ್ದು ಕೇವಲ 48 ಕೋಟಿ ರೂಪಾಯಿ ಎನ್ನಲಾಗಿದೆ.
ಇನ್ನು ಇದರಲ್ಲೂ ವಿತರಕರಿಗೆ ಅಂತ 31.5 ಕೋಟಿ ರೂಪಾಯಿ ನೀಡಲಾಗಿದ್ದು, ಲೈಕಾಗೆ ಏನೂ ಉಳಿದಿಲ್ಲ. ಹೀಗಾಗಿ 127 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಅಂತ ಕಾಲಿವುಡ್‌ನಲ್ಲಿ ಟಾಕ್. ತಮಿಳು ಚಿತ್ರರಂಗಕ್ಕೆ ಈ ಸಿನಿಮಾದಿಂದ ದೊಡ್ಡ ಪೆಟ್ಟುಬಿದ್ದಿರೋದು ಮಾತ್ರ ಸುಳ್ಳಲ್ಲ.


Click it and Unblock the Notifications











