Maaveeran Collections: 'ಪ್ರಿನ್ಸ್' ಅಟ್ಟರ್‌ಫ್ಲಾಪ್ ನಂತರ ಕೈಹಿಡಿದ 'ಮಾವೀರನ್'; ದಿಗ್ವಿಜಯ ಸಾಧಿಸಿದ ಶಿವಕಾರ್ತಿಕೇಯನ್
ಈ ವರ್ಷದ ಮೊದಲಾರ್ಧ ಮುಗಿದ ಬಳಿಕ ಜುಲೈ ತಿಂಗಳು ಆಗಮಿಸಿದ್ದು, ಎಲ್ಲಾ ಚಿತ್ರರಂಗಗಳಿಗೂ ಈ ತಿಂಗಳು ಲಕ್ ತಂದುಕೊಟ್ಟಂತಿದೆ. ಕನ್ನಡದಲ್ಲಿ ಈ ತಿಂಗಳು ಬಿಡುಗಡೆಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಅಬ್ಬರದ ಗೆಲುವು ಸಾಧಿಸಿದ್ದು, ಅತ್ತ ತೆಲುಗಿನಲ್ಲಿ ಯುವ ನಟರ ಬೇಬಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸ್ಟಾರ್ ನಟರ ಚಿತ್ರಗಳ ಹಾಗೆ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಇನ್ನು ತಮಿಳು ಚಿತ್ರರಂಗದಲ್ಲಿ ಸದ್ಯ ಮಾವೀರನ್ ಚಿತ್ರ ಉತ್ತಮ ಗಳಿಕೆ ಮಾಡಿ ಗಲ್ಲಾ ಪೆಟ್ಟಿಗೆ ಲೂಟಿ ಮಾಡ್ತಿದೆ.
ಹೌದು, ಶಿವಕಾರ್ತಿಕೇಯನ್ ನಟನೆಯ ಮಾವೀರನ್ ಸಿನಿಮಾ ಸದ್ಯ ಕಾಲಿವುಡ್ ಅಂಗಳದಲ್ಲಿ ಒಳ್ಳೆಯ ವಿಮರ್ಶೆಯನ್ನು ಗಿಟ್ಟಿಸಿಕೊಂಡು ಯಶಸ್ವಿ ಪ್ರದರ್ಶನವನ್ನು ಕಾಣ್ತಿದೆ. ಜುಲೈ 14ರಂದು ಬಿಡುಗಡೆಗೊಂಡ ಈ ಚಿತ್ರ ಸದ್ಯ ಇಂದಿಗೆ ( ಜುಲೈ 26 ) 13 ದಿನಗಳ ಓಟವನ್ನು ಪೂರೈಸಿದ್ದು, ವಿಶ್ವದಾದ್ಯಂತ ಬರೋಬ್ಬರಿ 75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಪೂರೈಸಿದೆ.

ಹೀಗೆ ಭರ್ಜರಿ ಗಳಿಕೆ ಮಾಡಿರುವ ಮಾವೀರನ್ ಕರ್ನಾಟಕದಲ್ಲಿ 13 ದಿನಗಳಲ್ಲಿ ಬರೋಬ್ಬರಿ 4.7 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಒಳ್ಳೆಯ ಗಳಿಕೆ ಮಾಡಿದೆ. ಈ ಮೂಲಕ ಕಳೆದ ವರ್ಷ ಹೀನಾಯ ಸೋಲುಂಡ ಪ್ರಿನ್ಸ್ ಚಿತ್ರದ ಬಳಿಕ ಶಿವ ಕಾರ್ತಿಕೇಯನ್ ಈ ಮಾವೀರನ್ ಚಿತ್ರದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಹೌದು, ಕಳೆದ ವರ್ಷ ತೆರೆಗೆ ಬಂದಿದ್ದ ಪ್ರಿನ್ಸ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು.
ಮಾವೀರನ್ ಚಿತ್ರದ ಹಾಗೆ ತಮಿಳು ಹಾಗೂ ತೆಲುಗು ಅವತರಣಿಕೆಗಳಲ್ಲಿ ಬಿಡುಗಡೆಗೊಂಡಿದ್ದ ಪ್ರಿನ್ಸ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 40 ಕೋಟಿ ಗಳಿಕೆ ಮಾಡಿತ್ತು. ಬರೋಬ್ಬರಿ 60 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ ಹೀನಾಯ ಸೋಲನ್ನು ಕಂಡು ವಿತರಕರಿಗೆ ಹಾಗೂ ನಿರ್ಮಾಪಕರಿಗೆ ನಷ್ಟವನ್ನು ಉಂಟು ಮಾಡಿತ್ತು. ಚಿತ್ರದಲ್ಲಿ ತಮಿಳು ನಾಯಕ ಇಂಗ್ಲೆಂಡ್ ಮೂಲದ ನಾಯಕಿಯನ್ನು ಪ್ರೀತಿಸುವ ಕಥೆಯನ್ನು ಹೊಂದಿದ್ದ ಪ್ರಿನ್ಸ್ ತಮಿಳು ಸಿನಿ ರಸಿಕರಿಗೆ ಇಷ್ಟವಾಗಿರಲಿಲ್ಲ.
ಮಾವೀರನ್ ಕಥೆಗೆ ಸಿನಿ ರಸಿಕರು ಫಿದಾ:
ಇನ್ನು ಮಾವೀರನ್ ಚಿತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಗೆಲ್ಲಲು ಕಾರಣ ಚಿತ್ರದ ವಿಭಿನ್ನ ಹಾಗೂ ನೂತನ ಕಥೆ ಎಂದರೆ ತಪ್ಪಾಗಲಾರದು. ಮಾಡೋನ್ ಅಶ್ವಿನ್ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಸ್ಲಂನಲ್ಲಿ ತನ್ನ ತಾಯಿ ಹಾಗೂ ತಂಗಿ ಜತೆ ಬದುಕು ಬಂದಂತೆ ಸ್ವೀಕರಿಸಿ ಜೀವನ ಸಾಗಿಸಬೇಕು ಎನ್ನುವ ಫಿಲಾಸಫಿ ಹೊಂದಿರುವ ನಾಯಕ ವಾಸ ಮಾಡುತ್ತಿರುತ್ತಾನೆ. ಯಾರಿಗೂ ಎದುರು ಮಾತನಾಡಲು ಧೈರ್ಯವಿರದ ನಾಯಕ ಹಾಗೂ ಇಡೀ ಸ್ಲಂನ ಜನರನ್ನು ವಸತಿ ಯೋಜನೆಯಡಿಯಲ್ಲಿ ಹೊಸ ಅಪಾರ್ಟ್‌ಮೆಂಟ್‌ವೊಂದಕ್ಕೆ ಅಲ್ಲಿನ ಎಂಎಲ್ಎ ಸ್ಘಳಾಂತರಿಸುತ್ತಾನೆ. ವೃತ್ತಿಯಲ್ಲಿ ವ್ಯಂಗ್ಯ ಚಿತ್ರಕಾರನಾಗಿರುವ ನಾಯಕನಿಗೆ ನಡೆಯುವ ಒಂದು ಘಟನೆಯಿಂದ ತಾನೇ ಬರೆಯುವ ಊಹಾ ವ್ಯಂಗ್ಯ ಚಿತ್ರ ಸರಣಿಯ ನಾಯಕನಾದ ಮಾವೀರನ್‌ನ ಶಕ್ತಿ ಬರುತ್ತದೆ. ಅಶರೀರವಾಣಿ ಹೇಳುವ ಪ್ರತಿಯೊಂದು ವಿಷಯವೂ ಜರುಗಲು ಆರಂಭಿಸುತ್ತದೆ. ಇನ್ನು ಜನರಿಗೆ ಎಂಎಲ್ಎ ನೀಡಿರುವ ಮನೆಗಳು ಕಳಪೆ ಎಂಬ ಸತ್ಯ ಹೊರಬೀಳುತ್ತೆ. ಆದರೆ ಎಂಎಲ್ಎ ಗೂಂಢಾಗಿರಿಯ ಮುಂದೆ ಯಾರೊಬ್ಬರೂ ಸಹ ದನಿ ಎತ್ತಲಾಗುವುದಿಲ್ಲ.
ಹೀಗಿರುವಾಗ ಎಲ್ಲರಿಗೂ ನಾಯಕ ತನಗೆ ಸಿಗುವ ಮಾವೀರನ್ ಶಕ್ತಿಯಿಂದ ಚಮತ್ಕಾರಗಳನ್ನು ಮಾಡಲು ಆರಂಭಿಸುತ್ತಾನೆ. ಹೀಗೆ ತನಗೇ ತಿಳಿಯದೇ ಸಿಗುವ ಶಕ್ತಿಯಿಂದ ನಾಯಕ ಏನೆಲ್ಲಾ ಮಾಡ್ತಾನೆ, ಆ ಶಕ್ತಿಯಿಂದ ಎಂಎಲ್ಎ ವಂಚನೆಗೆ ಪಾಠ ಕಲಿಸುತ್ತಾನಾ ಅಥವಾ ಆ ಶಕ್ತಿ ಕೆಲ ದಿನಗಳ ಬಳಿಕ ಮಾಯವಾಗಿ ಮತ್ತೆ ನಾಯಕ ಪೀಕಲಾಟಕ್ಕೆ ಸಿಲುಕಿಕೊಳ್ತಾನಾ ಎಂಬುದೇ ಚಿತ್ರದ ಕಥೆ. ಇಷ್ಟು ಒಳ್ಳೆಯ ಕಥೆಯನ್ನು ನಿರ್ದೇಶಕ ಹಾಸ್ಯ ರೂಪದಲ್ಲಿ ತೆರೆ ಮೇಲೆ ತಂದಿರುವುದು ಚಿತ್ರ ಜನರಿಗೆ ಇಷ್ಟವಾಗಲು ಪ್ರಮುಖ ಕಾರಣವಾಗಿದೆ. ಆರಂಭದಿಂದ ಅಂತ್ಯದವರೆಗೂ ಡಬಲ್ ಮೀನಿಂಗ್ ಇಲ್ಲದೇ ನಗಿಸುವ ಪೊಲಿಟಿಕಲ್ ಕಾಮಿಡಿ ಎಂಟರ್‌ಟೈನರ್ ಚಿತ್ರ ಇದಾಗಿದ್ದು, ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸಬಹುದಾದ ಸಿನಿಮಾವಾಗಿದೆ.


Click it and Unblock the Notifications











