Vijay: ತಮಿಳು ನಟ ವಿಜಯ್‌ನ ಕಾಡುತ್ತಿರುವ 'ಪುಲಿ': ಬರೋಬ್ಬರಿ 1.50 ಕೋಟಿ ರೂ. ದಂಡ... ಅಭಿಮಾನಿಗಳು ಶಾಕ್
ತಮಿಳು ನಟ ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ದಸರಾ ಸಂಭ್ರಮದಲ್ಲಿ ಮುಂದಿನ ವಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸುತ್ತಿದೆ. ವಿಶ್ವದಾದ್ಯಂತ ವಿಜಯ್ ಅಭಿಮಾನಿಗಳು ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಆದರೆ ಇದ್ದೆಲ್ಲದರ ನಡುವೆ ದಳಪತಿಗೆ ಸಂಕಷ್ಟವೊಂದು ಎದುರಾಗಿದೆ.
ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಲಾವಿದರಲ್ಲಿ ವಿಜಯ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲೂ ವಿಜಯ್ ಸಿನಿಮಾಗಳು ದಾಖಲೆ ಬರೆಯುತ್ತಿದೆ. ಇದೇ ಕಾರಣಕ್ಕೆ ಕಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಯಾರು? ಎನ್ನುವ ಚರ್ಚೆ ಕೂಡ ನಡೀತಿದೆ. 'ಲಿಯೋ' ಚಿತ್ರಕ್ಕೂ ವಿಜಯ್ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ. ಈ ಹಿಂದೆ ಅಭಿಮಾನಿಗಳ ನೆಚ್ಚಿನ ದಳಪತಿಗೆ ಐಟಿ ಶಾಕ್ ಕೂಡ ಎದುರಾಗಿತ್ತು.

8 ವರ್ಷಗಳ ಹಿಂದೆ ವಿಜಯ್ 'ಪುಲಿ' ಚಿತ್ರದಲ್ಲಿ ನಟಿಸಿದ್ದರು. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿತ್ತು. ಶ್ರೀದೇವಿ, ಕಿಚ್ಚ ಸುದೀಪ್ ಸೇರಿದಂತೆ ಘಟಾನುಘಟಿ ಕಲಾವಿದರು ಆ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಈ ಫ್ಯಾಂಟಸಿ ಅಡ್ವೆಂಚರಸ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲರ ನಿರೀಕ್ಷೆ ಸುಳ್ಳಾಗಿತ್ತು. ಸಿನಿಮಾ ಹೀನಾಯವಾಗಿ ಸೋಲುಂಡಿತ್ತು. ಆದರೆ ಆ ಸಿನಿಮಾದಿಂದ ನಟ ವಿಜಯ್‌ಗೆ ಎದುರಾದ ಸಮಸ್ಯೆ ಇನ್ನು ಬಗೆಹರಿದಿಲ್ಲ. ಇಷ್ಟ ವರ್ಷ ಕಳೆದರು 'ಪುಲಿ' ವಿಜಯ್‌ನ ಕಾಡುತ್ತಿದೆ.
ಈ ಬಾರಿ ವಿಜಯ್ ತಪ್ಪಿನಿಂದಾಗಿಯೇ ಸಮಸ್ಯೆ ಎದುರಾಗಿವೆಯಂತೆ. ಈ ಹಿಂದೆ 'ಪುಲಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತರೆ ಈಗ ವಿಜಯ್‌ಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಆ ಚಿತ್ರದ ಆದಾಯವನ್ನು ಲೆಕ್ಕದಲ್ಲಿ ತೋರಿಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ವರದಿ ಸಿದ್ಧಪಡಿಸಿದೆ. ವಿಜಯ್ ಅವರಿಗೆ 1.50 ಕೋಟಿ ರೂ. ದಂಡ ವಿಧಿಸಲಾಗಿದೆ. ಆದರೆ ಈ ವಿಷಯ ಕೋರ್ಟ್‌ನಲ್ಲಿ ಇರುವುದರಿಂದ ಆದಾಯ ತೆರಿಗೆ ಇಲಾಖೆ ಮದ್ರಾಸ್ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.

'ಪುಲಿ' ಸಿನಿಮಾ ರಿಲೀಸ್ ಬಳಿಕ ವಿಜಯ್ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. 2015-16ನೇ ಹಣಕಾಸು ವರ್ಷಕ್ಕೆ ವಿಜಯ್ ಐಟಿ ರಿಟರ್ನ್ ಸಲ್ಲಿಸಿದಾಗ, ಆ ವರ್ಷ 35,42,91,890 ರೂ. ಆದಾಯ ಲೆಕ್ಕ ಕೊಟ್ಟಿದ್ದರು. ತೆರಿಗೆ ಇಲಾಖೆಯ ಲೆಕ್ಕಪತ್ರಗಳನ್ನು ಪರಿಶೀಲಿಸಿದಾ 'ಪುಲಿ' ಚಿತ್ರಕ್ಕೆ ಪಡೆದ 15 ಕೋಟಿ ರೂ. ಸಂಭಾವನೆಯನ್ನು ಆದಾಯ ಲೆಕ್ಕದಲ್ಲಿ ತೋರಿಸಿರಲಿಲ್ಲ ಎಂದು ಗೊತ್ತಾಗಿತ್ತು.
2015ರ ಸೆಪ್ಟೆಂಬರ್ 30ರಂದು ವಿಜಯ್ ಮನೆಯಲ್ಲಿ ಐಟಿ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ ವಶಪಡಿಸಿಕೊಂಡ ದಾಖಲೆಗಳಲ್ಲಿ ಈ ವಿಷಯ ಬಹಿರಂಗವಾಗಿತ್ತು. ಹಾಗಾಗಿ ಆದಾಯ ತೆರಿಗೆ ಇಲಾಖೆ ಆದಾಯ ಬಚ್ಚಿಟ್ಟಿದ್ದಕ್ಕೆ ನಟ ವಿಜಯ್‌ಗೆ 1.50 ಕೋಟಿ ರೂ. ದಂಡ ವಿಧಿಸಿ ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ರದ್ದು ಕೋರಿ ನಟ ವಿಜಯ್ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ 11ರಂದು ಈ ಅರ್ಜಿಯ ವಿಚಾರಣೆ ನಡೆಸಲಾಯಿತು.
ವಿಜಯ್‌ಗೆ 1.50 ಕೋಟಿ ರೂ. ದಂಡ ವಿಧಿಸಲು ಕಾರಣ ಏನು ಎಂದು ಐಟಿ ಇಲಾಖೆ ಸ್ಪಷ್ಟ ಸಾಕ್ಷ್ಯಧಾರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದರೊಂದಿಗೆ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಿದೆ. ಪರಿಸ್ಥಿತಿ ನೋಡಿದರೆ ವಿಜಯ್ ವಿರುದ್ಧವೇ ತೀರ್ಪು ಬರುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ಏನಾಗುತ್ತೋ ಎಂಬ ಆತಂಕ ದಳಪತಿ ಅಭಿಮಾನಿಗಳಿಗೆ ಶುರುವಾಗಿದೆ.
ಮದ್ರಾಸ್ ಹೈಕೋರ್ಟ್ ಆದಾಯ ಇಲಾಖೆ ಆದೇಶವನ್ನು ಎತ್ತಿ ಹಿಡಿಯುತ್ತಾ? ಅಥವಾ ವಿಜಯ್‌ಗೆ ದಂಡ ಪಾವತಿಸದಂತೆ ರಿಲೀಫ್ ನೀಡುತ್ತಾ ಕಾದು ನೋಡಬೇಕಿದೆ. ಇನ್ನು ವಿಜಯ್ ನಟನೆಯ 'ಲಿಯೋ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಲೋಕೇಶ್ ಕನಕರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
'ಲಿಯೋ' ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ನಟಿಸಿದ್ದಾರೆ. ಸಂಜಯ್ ದತ್, ಅರ್ಜುನ್ ಸರ್ಝಾರಂತಹ ಘಟಾನುಘಟಿ ಕಲಾವಿದರು ಇದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ.


Click it and Unblock the Notifications











