Vijayalakshmi: ಸೀಮಾನ್ ವಿರುದ್ಧ ಆರೋಪ: ನಟಿ ವಿಜಯಲಕ್ಷ್ಮಿಗೆ ಮದ್ರಾಸ್ ಹೈಕೋರ್ಟ್ ಶಾಕ್
ನಟಿ ವಿಜಯಲಕ್ಷ್ಮಿಗೆ ಮದ್ರಾಸ್ ಹೈಕೋರ್ಟ್ ಶಾಕ್ ಕೊಟ್ಟಿದೆ. ಇದೇ ತಿಂಗಳ 29ರಂದು ನಟಿ ವಿಜಯಲಕ್ಷ್ಮಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಹೈಕೋರ್ಟ್ ಆದೇಶಿಸಿದೆ. ನಟಿ ವಿಜಯಲಕ್ಷ್ಮಿ ನಾಮ್ ತಮಿಳು ಕಚ್ಚಿ ನಾಯಕ ಸೀಮಾನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಸೀಮಾನ್ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ವಿಜಯಲಕ್ಷ್ಮೀ ಆರೋಪಿಸಿದ್ದರು. ಈ ಸಂಬಂಧ ಸೀಮಾನ್ ವಿರುದ್ಧ 2011ರಲ್ಲಿ ವಲಸರವಕ್ಕಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2012ರಲ್ಲಿ ಆಕೆ ತನ್ನ ದೂರನ್ನು ಹಿಂಪಡೆದಿದ್ದರು. ಆದರೆ ಇತ್ತೀಚೆಗಷ್ಟೇ ವಿಜಯಲಕ್ಷ್ಮಿ ತಮ್ಮ ದೂರನ್ನು ಮರುಪರಿಶೀಲನೆಗೆ ಆಗ್ರಹಿಸಿ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ವಿಜಯಲಕ್ಷ್ಮಿ ದೂರು ಹಿಂಪಡೆದರೂ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಿಲ್ಲ ಎಂದು ಸೀಮಾನ್ ಹೇಳಿದ್ದಾರೆ. ವಿಜಯಲಕ್ಷ್ಮಿ ದೂರನ್ನು ಹಿಂಪಡೆಯದ ಕಾರಣ 10 ವರ್ಷಗಳ ಹಿಂದೆ ದಾಖಲಾದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಸೀಮನ್ ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಬಾಕಿ ಇರುವ ಎಫ್‌ಐಆರ್ ಮತ್ತು ಇತರ ಎಲ್ಲಾ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಅವರು ಕೋರಿದರು.
ಸೆ.20ರಂದು ಅರ್ಜಿಯನ್ನು ಕೈಗೆತ್ತಿಕೊಂಡ ಹೈಕೋರ್ಟ್, ಪ್ರಕರಣದ ಸ್ಥಿತಿಗತಿ ಕುರಿತು ಪೊಲೀಸರಿಂದ ಸೂಚನೆಗಳನ್ನು ಪಡೆಯುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಸೂಚಿಸಿತ್ತು. ಈ ಆದೇಶದಲ್ಲಿ ಮಂಗಳವಾರ ಈ ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ, ಪ್ರಾಸಿಕ್ಯೂಷನ್ ಸ್ಟೇಟಸ್ ರಿಪೋರ್ಟ್ ಸಲ್ಲಿಸಿತ್ತು. ಈ ಕುರಿತು ಪರಿಶೀಲನೆ ನಡೆಸಿದ ಹೈಕೋರ್ಟ್, ಸೆ.29ರಂದು ವಿಜಯಲಕ್ಷ್ಮಿ ಕೋರ್ಟ್‌ಗೆ ಹಾಜರಾಗುವಂತೆ ಆದೇಶಿಸಿದೆ. ಈ ಬಗ್ಗೆ ಪೊಲೀಸರಿಗೂ ಸೂಚನೆ ನೀಡಲಾಗಿದೆ.
ತಿಂಗಳ ಹಿಂದೆ ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತ ಕಚೇರಿ ಎದುರು ಮಾಧ್ಯಮಗಳ ಜೊತೆ ವಿಜಯಲಕ್ಷ್ಮಿ ಮಾತನಾಡಿದ್ದರು. 2008ರಲ್ಲಿ ಸೀಮಾನ್ ಜೊತೆ ತಮಗೆ ಮದುವೆ ಆಗಿದೆ ಎಂದು ನಟಿ ವಿಜಯಲಕ್ಷ್ಮಿ ಹೇಳುತ್ತಿದ್ದಾರೆ. ಆದರೆ ಆತ ನನಗೆ ಮೋಸ ಮಾಡಿದ್ದು ಮಾತ್ರವಲ್ಲದೇ ಆತನ ಕಡೆಯವರಿಂದ ನನಗೆ ಬೆದರಿಕೆ ಹಾಕುತ್ತಿದ್ದಾನೆ ಎಂದಿದ್ದರು.
ವಾರದ ಹಿಂದೆ ನಟಿ ವಿಜಯಲಕ್ಷ್ಮಿ ತಮ್ಮ ವರಸೆ ಬದಲಿಸಿದ್ದರು. ತಮಿಳರ್ ಮುನ್ನೇಟ್ರ ಪಡೈ ವ್ಯವಸ್ಥಾಪಕ ಅಧ್ಯಕ್ಷೆ ವೀರಲಕ್ಷ್ಮಿ ಬೆಂಬಲದೊಂದಿಗೆ ಗೃಹನಿರ್ಬಂಧದಲ್ಲಿ ಇರುವುದಾಗಿ ನಟಿ ವಿಜಯಲಕ್ಷ್ಮಿ ಹೇಳಿದ್ದರು. ಸೀಮಾನ್ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದಿದ್ದರು. ಸೀಮಾನ್ ಸೂಪರ್, ಆತ ಬಹಳ ಪವರ್‌ಫುಲ್. ಆತನನ್ನು ಇಲ್ಲಿ ಯಾರು ಏನು ಮಾಡೋಕೆ ಸಾಧ್ಯವಿಲ್ಲ. ನಾನು ಮತ್ತೆ ಚೆನ್ನೈಗೆ ಬರಲ್ಲ. ಬೆಂಗಳೂರಿಗೆ ಹೋಗುತ್ತಿದ್ದೇನೆ. ಸೀಮಾನ್ ಪವರ್ ಮುಂದೆ ನನ್ನ ಸೋಲನ್ನು ಒಪ್ಪಿಕೊಳ್ಳುತ್ತಿದ್ದೇನೆ. ಆತನ ಚೆನ್ನಾಗಿರಬೇಕು, ರಾಜಕೀಯರಂಗದಲ್ಲಿ ಉನ್ನತ ಸ್ಥಾನಕ್ಕೇರಬೇಕು. ಆತನಿಂದ ನಾನು ಯಾವುದೇ ಹಣ ಪಡೆದಿಲ್ಲ ಎಂದಿದ್ದರು.
ದೂರು ವಾಪಸ್ ಪಡೆಯುವುದಾಗಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಪೊಲೀಸರು ಸ್ವೀಕರಿಸಿದ್ದರು. "ನಾವು ಇದನ್ನು ಕೋರ್ಟ್‌ಗೆ ಸಲ್ಲಿಸುತ್ತೇವೆ. ಈ ಪೆಟಿಷನ್ ಕ್ಲೋಸ್ ಮಾಡಲು ಕೆಲ ವಾರ ಅಥವಾ ತಿಂಗಳುಗಳು ಬೇಕಾಗುತ್ತದೆ. ಕೋರ್ಟ್ ಅದನ್ನು ನಿರ್ಧರಿಸುತ್ತದೆ" ಎಂದಿದ್ದರು.
ಬಳಿಕ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಸೀಮಾನ್‌ಗೆ ಪೊಲೀಸರು ಹೊಸ ಸಮನ್ಸ್ ನೀಡಿದ್ದರು. ಹಲವು ವರ್ಷಗಳಿಂದ ನಟಿ ವಿಜಯಲಕ್ಷ್ಮಿ ಸೀಮಾನ್ ವಿರುದ್ಧ ಗಂಭೀರ ಆರೋಪ ಮಾಡುತ್ತಾ ಬರುತ್ತಿದ್ದಾರೆ. ಕೆಲ ವರ್ಷಗಳಿಂದ ನಟಿ ವಿಜಯಲಕ್ಷ್ಮಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಆಕೆ ಮಾನಸಿಕ ಬಹಳ ನೊಂದಿದ್ದು ಪದೇ ಪದೆ ಫೇಸ್‌ಬುಕ್ ಲೈವ್ ಬಂದು ಹಲವು ವಿರುದ್ಧ ಆರೋಪ ಮಾಡಿದ್ದರು.


Click it and Unblock the Notifications










