ಮೊಮ್ಮಗನ ಎಡವಟ್ಟು.. ನಟ ಶಿವಾಜಿ ಗಣೇಶನ್ ಮನೆ ವಶಕ್ಕೆ ಕೋರ್ಟ್ ಆದೇಶ
ತಮಿಳು ಚಿತ್ರರಂಗದ ದಂತಕತೆ ಶಿವಾಜಿ ಗಣೇಶನ್. ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ್ ರೀತಿ ತಮಿಳಿನಲ್ಲಿ ಜನಮನ ಗೆದ್ದ ನಟ. ನೂರಾರು ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿ ಮೋಡಿ ಮಾಡಿದವರು. ಸದ್ಯ ಅವರ ಮಕ್ಕಳು, ಮೊಮ್ಮಕ್ಕಳು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ.
ಸದ್ಯ ಮೊಮ್ಮಗ ಮಾಡಿದ ಸಾಲಕ್ಕೆ ಪ್ರತಿಯಾಗಿ ಶಿವಾಜಿ ಗಣೇಶನ್ ಇಷ್ಟದ ಮನೆಯನ್ನು ವಶಕ್ಕೆ ಪಡೆಯುವಂತೆ ಚೆನ್ನೈ ಹೈಕೋರ್ಟ್ ಆದೇಶ ನೀಡಿದೆ. ಶಿವಾಜಿಗೆ ಪ್ರಭು ಹಾಗೂ ರಾಮ್ ಕುಮಾರ್ ಸೇರಿ ನಾಲ್ವರು ಮಕ್ಕಳು. ನಟ ಪ್ರಭು ಕನ್ನಡ ಸೇರಿ ತೆಲುಗು, ತಮಿಳು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಇನ್ನು ರಾಮ್‌ಕುಮಾರ್ ಕೂಡ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ರಾಮ್‌ಕುಮಾರ್ ಪುತ್ರ ಅಂದ್ರೆ ಶಿವಾಜಿ ಮೊಮ್ಮಗ ದುಷ್ಯಂತ್ 3 ಸಿನಿಮಾಗಳಲ್ಲಿ ನಟಿಸಿದ್ದಾರೆ. 2 ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಈಶಾನ್ ಪ್ರೊಡಕ್ಷನ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿ 2 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಸಿನಿಮಾಗಳು ಸೋತು ನಷ್ಟಕ್ಕೆ ಸಿಲುಕಿದರು. 'ಜಗಜಾಲ ಕಿಲಾಡಿ' ಎಂಬ ಸಿನಿಮಾ ಶುರು ಮಾಡಿದ್ದರು. ಅದಕ್ಕಾಗಿ ಧನಭಾಗ್ಯಂ ಎಂಟರ್‌ಪ್ರೈಸಸ್ ಸಂಸ್ಥೆಯಿಂದ 3.74 ಕೋಟಿ ರೂ. ಸಾಲ ಪಡೆದಿದ್ದರು. ವರ್ಷಕ್ಕೆ 30% ಬಡ್ಡಿ ಕೊಡುವುದಾಗಿ ಒಪ್ಪಂದವಾಗಿತ್ತು.
ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ದುಷ್ಯಂತ್ ವಿರುದ್ಧ ಧನಭಾಗ್ಯಂ ಎಂಟರ್‌ಪ್ರೈಸಸ್ ಸಂಸ್ಥೆ ಚೆನ್ನೈ ಹೈಕೋರ್ಟ್ ಮೆಟ್ಟಿಲೇರಿತ್ತು. ಸಾಲಕ್ಕೆ ಪ್ರತಿಯಾಗಿ ಮೇ 4, 2024 ರಂದು 'ಜಗಜಲ ಕಿಲಾಡಿ' ಚಿತ್ರದ ಹಕ್ಕುಗಳನ್ನು ಧನಭಾಗ್ಯಂ ಎಂಟರ್‌ಪ್ರೈಸಸ್ ಸಂಸ್ಥೆ ವರ್ಗಾಯಿಸಬೇಕೆಂದು ತೀರ್ಪು ನೀಡಿತ್ತು. ಆದರೆ ಆ ಸಿನಿಮಾ ನಿರ್ಮಾಣವಾಗಿಲ್ಲ, ಸಾಲದ ಹಣದಲ್ಲಿ ದುಷ್ಯಂತ್ ತಮ್ಮ ಹಳೆಯ ಸಾಲಗಳನ್ನು ತೀರಿಸಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.
'ಜಗಜಲ ಕಿಲಾಡಿ' ಸಿನಿಮಾ ರೈಟ್ಸ್ ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಈಶಾನ್ ಪ್ರೊಡಕ್ಷನ್ಸ್ ಸಂಸ್ಥೆ ವಾದಿಸಿದಾಗ ವಿವಾದ ಮತ್ತಷ್ಟು ಗಂಭೀರವಾಗಿದೆ. ಬಡ್ಡಿ ಸೇರಿ ಸಾಲ 9.39 ಕೋಟಿ ರೂ.ಗೆ ಬೆಳೆದಿದೆ. ಸಾಲಕ್ಕೆ ಪ್ರತಿಯಾಗಿ ಶಿವಾಜಿ ಗಣೇಶನ್ ಅವರ ಮನೆಯನ್ನು ವಶಪಡಿಸಿಕೊಳ್ಳಲು ಮತ್ತು ಹರಾಜಿಗೆ ಅನುಮತಿ ಕೋರಿ ಕಂಪನಿಯು ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿ ಅಬ್ದುಲ್ ಖುದ್ದೋಸ್ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಅಂತಿಮವಾಗಿ ಶಿವಾಜಿ ಗಣೇಶನ್ ಅವರ ಮನೆ ಸ್ವಾಧೀನಕ್ಕೆ ಕೋರ್ಟ್ ಆದೇಶ ನೀಡಿದೆ.
ಸದ್ಯ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 5ಕ್ಕೆ ನಿಗದಿಪಡಿಸಲಾಗಿದ್ದು, ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಶಿವಾಜಿ ಗಣೇಶನ್ ಮನೆ ಸೀಝ್ ಮಾಡಲು ಕೋರ್ಟ್ ಆದೇಶ ನೀಡಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ದಿಗ್ಗಜ ನಟ ಸಂಪಾದಿಸಿದ್ದನ್ನು ಮಕ್ಕಳು, ಮೊಮ್ಮಕ್ಕಳು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲವೇ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











