ನ್ಯಾಯಾಧೀಶರ ಪ್ರಶ್ನೆಗೆ 'ಪಾಸ್' ಎಂದ ವಿಶಾಲ್; "ಇದು ಸಿನಿಮಾ ಶೂಟಿಂಗ್ ಅಲ್ಲ" ಎಂದು ಎಚ್ಚರಿಕೆ
ಸಿನಿಮಾ ತಾರೆಯರು ಸ್ಟಾರ್, ಸೂಪರ್ ಸ್ಟಾರ್ ಎನ್ನುವುದೆಲ್ಲಾ ಬರೀ ಸಿನಿಮಾಗಳಲ್ಲಿ ಮಾತ್ರ. ಅವರ ಅಭಿಮಾನಿಗಳ ಪಾಲಿಗೆ ಅವರು ದೊಡ್ಡವರೇ ಇರಬಹುದು. ಕಾನೂನು, ನ್ಯಾಯಾಲಯದ ಮುಂದೆ ಎಲ್ಲರೂ ಸಾಮಾನ್ಯರೇ. ತಮಿಳು ನಟ ವಿಶಾಲ್ ಇತ್ತೀಚೆಗೆ ಕೋರ್ಟ್ ವಿಚಾರಣೆ ವೇಳೆ ಮಾತನಾಡಿದ ಪರಿಗೆ ನ್ಯಾಯಾಧೀಶರು ಗರಂ ಆಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಲೈಕಾ ಸಂಸ್ಥೆ ಜೊತೆಗಿನ ನಟ ವಿಶಾಲ್ ಕಿರಿಕ್ ಇದೀಗ ಕೋರ್ಟ್ ಮೆಟ್ಟಿಲೇರಿದೆ. ನಟ, ನಿರ್ಮಾಪಕ ವಿಶಾಲ್ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಜೊತೆಗಿನ ಒಪ್ಪಂದ ಉಲ್ಲಂಘಿಸಿದ್ದರು. ಹಾಗಾಗಿ ಸಂಸ್ಥೆ ಮದ್ರಾಸ್ ಹೈಕೋರ್ಟ್‌ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸಿತ್ತು. ಈ ಪ್ರಕರಣದಲ್ಲಿ ಹಿಂದೆ ನಟ ವಿಶಾಲ್‌ಗೆ ಬಿಗ್ ರಿಲೀಫ್ ಸಿಕ್ಕಿತ್ತು. ಮತ್ತೆ ಕೋರ್ಟ್ ಅರ್ಜಿಯ ವಿಚಾರಣೆ ನಡೆಸಿದೆ.

ಇತ್ತೀಚೆಗೆ ವಿಚಾರಣೆ ವೇಳೆ ಕೋರ್ಟ್‌ನಲ್ಲಿ ನಟ ವಿಶಾಲ್ ಹೇಳಿಕೆ ನೀಡುತ್ತಿದ್ದ ಪರಿಗೆ ನ್ಯಾಯಾಧೀಶರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣದ ಕ್ರಾಸ್ ಎಕ್ಸಾಮಿನೇಷನ್‌ಗೆ ನಿನ್ನೆ(ಆಗಸ್ಟ್ 1) ನ್ಯಾಯಾಧೀಶರಾದ ಪಿ.ಟಿ.ಆಶಾ ಅವರ ಮುಂದೆ ನಟ ವಿಶಾಲ್ ಖುದ್ದು ಹಾಜರಾಗಿದ್ದರು. ಆ ವೇಳೆ ಲೈಕಾ ಕಂಪನಿ ಪರವಾಗಿ ಹಿರಿಯ ವಕೀಲ ವಿ. ರಾಘವಾಚಾರಿ ವಾದ ಮಂಡಿಸಿ ಲೈಕಾ ಮತ್ತು ವಿಶಾಲ್ ನಡುವಿನ ಒಪ್ಪಂದದ ಬಗ್ಗೆ ಪ್ರಶ್ನಿಸಿದ್ದಾರೆ. ಪ್ರಶ್ನೆಗಳಿಗೆ ಉತ್ತರಿಸಿದ ವಿಶಾಲ್ "ಈ ಒಪ್ಪಂದದ ಬಗ್ಗೆ ನನಗೇನೂ ಗೊತ್ತಿಲ್ಲ.. ಖಾಲಿ ಕಾಗದದ ಮೇಲೆ ನನ್ನ ಸಹಿ ತೆಗೆದುಕೊಂಡಿದ್ದಾರೆ" ಎಂದಿದ್ದಾರೆ.
ವಿಶಾಲ್ ಮಾತಿಗೆ ಗರಂ ಆದ ನ್ಯಾಯಾಧೀಶರು, "ನೀವು ಹಾಕಿದ ಸಹಿಯನ್ನು ಹೇಗೆ ನಿರಾಕರಿಸುತ್ತೀರಿ? ನೀವು ತುಂಬಾ ಬುದ್ಧಿವಂತಿಕೆಯಿಂದ ಉತ್ತರಿಸುತ್ತಿದ್ದೀರಿ ಎಂದು ನೀವು ಭಾವಿಸಿದ್ದೀರಾ? ಇದು ಸಿನಿಮಾ ಶೂಟಿಂಗ್ ಅಲ್ಲ.. ಜಾಗರೂಕತೆಯಿಂದ ಉತ್ತರಿಸಿ. 'ಸಂಡೈಕೋಳಿ- 2' ಬಿಡುಗಡೆಗೂ 10 ದಿನ ಮುಂಚಿತವಾಗಿ ಹಣ ಹಿಂತಿರುಗಿಸುವುದಾಗಿ ನೀವು ಹೇಳಿದ್ದೀರಾ? ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ಈ ವೇಳೆ ವಿಶಾಲ್ ನ್ಯಾಯಾಧೀಶರಿಗೆ "ಪಾಸ್" ಎಂದು ಏನನ್ನೋ ಹೇಳಲು ಮುಂದಾದಾಗ ನ್ಯಾಯಾಧೀಶರು ಕೋಪಗೊಂಡು ಅಡ್ಡಿಪಡಿಸಿದ್ದಾರೆ ಎನ್ನಲಾಗ್ತಿದೆ. "ನೀವು ಇಲ್ಲಿ ಈ ರೀತಿ 'ಪಾಸ್' ಎಂದು ಹೇಳಬಾರದು. ಹೌದೋ ಅಲ್ಲವೋ ಅಷ್ಟೇ ಹೇಳಬೇಕು. ನೀವು ಲೈಕಾ ಹೊರತುಪಡಿಸಿ ಬೇರೆಯವರಿಂದ ಸಾಲ ತೆಗೆದುಕೊಂಡಿದ್ದೀರಾ?" ಎಂದು ಕೇಳಿದ್ದಾರೆ. ತಕ್ಷಣ ವಿಶಾಲ್, "ಹೌದು, ಆ ಸಾಲವನ್ನು ಲೈಕಾ ತೆಗೆದುಕೊಳ್ಳಬೇಕಿತ್ತು" ಎಂದು ಹೇಳಿದ್ದಾರೆ.
ಇನ್ನು ಕ್ರಾಸ್ ಎಕ್ಸಾಮಿನೇಷನ್ ಪೂರ್ಣಗೊಳ್ಳದ ಕಾರಣ ನ್ಯಾಯಾಧೀಶರು ವಿಚಾರಣೆಯನ್ನು ಇಂದಿಗೆ ಅಂದರೆ ಶುಕ್ರವಾರ 2ಕ್ಕೆ ಮುಂದೂಡಿದ್ದರು. ವಿಶಾಲ್ ಅವರನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದ್ದರು.
ಏನಿದು ಪ್ರಕರಣ?
ಫೈನಾನ್ಷಿಯರ್ ಅನ್ಬು ಚೆಳಿಯನ್ ಬಳಿ ವಿಶಾಲ್ ತನ್ನ ಸಿನಿಮಾ ನಿರ್ಮಾಣ ಸಂಸ್ಥೆಗಾಗಿ 21.29 ಕೋಟಿ ಸಾಲ ಪಡೆದಿದ್ದರು. ಈ ಹಣವನ್ನು ಅವರು ಮರುಪಾವತಿಸಲು ಸಾಧ್ಯವಾಗದೇ ಇದ್ದಾಗ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಫೈನಾನ್ಷಿಯರ್‌ಗೆ ಹಣ ವಾಪಸ್ ನೀಡಿತ್ತು. ಇದಕ್ಕೆ ಬದಲಾಗಿ ವಿಶಾಲ್ ಹಣ ವಾಪಸ್ ನೀಡುವವರೆಗೂ ಅವರ ಸಂಸ್ಥೆಯ ಸಿನಿಮಾಗಳ ಹಕ್ಕುಗಳನ್ನು ತಮಗೆ ಕೊಡುವಂತೆ ಲೈಕಾ ಸಂಸ್ಥೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದನ್ನು ಮೀರಿ ವಿಶಾಲ್ 'ವೀರಮೇ ವಾಗೈ ಸೂಡು' ಸಿನಿಮಾ ರಿಲೀಸ್ ಮಾಡಿದ್ದರು. ಹಾಗಾಗಿ ಲೈಕಾ ಸಂಸ್ಥೆ ಕೋರ್ಟ್ ಅನ್ನು ಆಶ್ರಯಿಸಿತ್ತು.


Click it and Unblock the Notifications











