'ಚೀನಾ' ತಲುಪಿದ ಕಾಲಿವುಡ್ 'ಮಹಾರಾಜ', ಇನ್ನೂ 89 ಕೋಟಿ ಗಳಿಸಿದರೆ 'ಬಾಹುಬಲಿ' ದಾಖಲೆ ಉಡೀಸ್...!
ಒಂದು ಕಡೆ ಕಮರ್ಷಿಯಲ್ ಹೀರೋ ಆಗಿದ್ದುಕೊಂಡೂ ಯಾವುದೇ ಇಮೇಜಿಗೆ ಅಂಟಿಕೊಳ್ಳದ ದಕ್ಷಿಣ ಭಾರತದ ಏಕೈಕ ಹೀರೋ ವಿಜಯ್ ಸೇತುಪತಿ. ಒಂದು ಸಿನಿಮಾ ಹಿಟ್ ಆಗುತ್ತಿದ್ದಂತೇ ಅದರ ಗೆಲುವನ್ನು ತಲೆಗೇರಿಸಿಕೊಂಡು ಇಂಥದ್ದೇ ಪಾತ್ರ ಮಾಡುತ್ತೀನಿ ಅಂತಾ ಹಠ ಹಿಡಿಯುವವರೇ ಹೆಚ್ಚು. ಇಂಥವರ ನಡುವೆ ಅದ್ಯಾವುದೇ ರೋಲಾದರೂ ಕೊಡಿ. ಕಥೆ ಚೆನ್ನಾಗಿದ್ದರೆ ಮಾಡ್ತೀನಿ ಎನ್ನುವ ವಿಜಯ್ ಸೇತುಪತಿ ವಯಸ್ಸಿಗೆ ಮೀರಿದ ಪಾತ್ರಗಳನ್ನು ಮಾಡಿದವರು. ಪ್ರತಿ ಚಿತ್ರದಲ್ಲಿಯೂ ಪ್ರಯೋಗಾತ್ಮಕವಾಗಿಯೇ ತಮ್ಮನ್ನು ಒಡ್ಡಿಕೊಂಡವರು.
ಇಂಥಾ ವಿಜಯ್ ಸೇತುಪತಿ ಅಭಿನಯದ ಮಹಾರಾಜ ಚಿತ್ರ ಈಗ ಚೀನಾದಲ್ಲಿ ತೆರೆಗೆ ಬಂದಿದೆ. ಅಲ್ಲಿಯೂ ಕೂಡ ನಿರೀಕ್ಷೆಯನ್ನು ಮೀರಿದ ಪ್ರೀತಿ ಗಳಿಸಿದೆ. ಹೌದು,ನಿಮಗೆ ಗೊತ್ತಿರಲಿ ಭಾರತ ಹಾಗೂ ಚೀನಾ ನಡುವಿನ ಗಡಿ ಒಪ್ಪಂದದ ನಂತರ ಇದೇ ಮೊದಲ ಬಾರಿಗೆ ಭಾರತೀಯ ಚಿತ್ರವೊಂದು ವರ್ಷಗಳ ನಂತರ ಚೀನಾದಲ್ಲಿ ತೆರೆಗೆ ಬರುತ್ತಿದೆ. ಮಹಾರಾಜ ಮೂಲಕ ಮತ್ತೊಮ್ಮೆ ಚೀನಾದ ಬಾಕ್ಸಾಫೀಸ್‌ನಲ್ಲಿ ಭಾರತದ ಕಲರವ ಶುರುವಾಗಿದೆ. ಇನ್ನೂ ಚೀನಾದಲ್ಲಿ ಮೊದಲಿಂದ ಭಾರತೀಯ ಚಿತ್ರಗಳಿಗೆ ಪ್ರೇಕ್ಷಕರಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಅಮೀರ್ ಖಾನ್ ಅಭಿನಯದ ದಂಗಲ್ ಕೇವಲ ಚೀನಾವೊಂದರಲ್ಲಿಯೇ 1000 ಕೋಟಿಯನ್ನು ಗಳಿಸಿದೆ. ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ.

ಕೇವಲ ದಮಗಲ್ ಮಾತ್ರ ಅಲ್ಲ ಅಮೀರ್ ಖಾನ್ ಅಭಿನಯದ ಸಿಕ್ರೇಟ್ ಸೂಪರ್ ಸ್ಟಾರ್, ಆಯುಶ್ಮಾನ್ ಖುರಾನ ಅಭಿನಯದ ಅಂಧಾದೂನ್, ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಕೂಡ ಚೀನಾದ ನೆಲದಲ್ಲಿ ಕಮಾಲ್ ಮಾಡಿವೆ. ಭರ್ಜರಿ ಕಮಾಯಿಯನ್ನೂ ಮಾಡಿವೆ. ಇಂತಹ ನೆಲದಲ್ಲಿ ಅನೇಕ ವರ್ಷಗಳ ನಂತರ ಭಾರತದ ಚಿತ್ರ ತೆರೆಗೆ ಬರುತ್ತಿದ್ದ ಹಿನ್ನೆಲೆ ನಿರೀಕ್ಷೆ ಇದ್ದೇ ಇತ್ತು. ಚಿತ್ರಕ್ಕೆ ಹೇಗೆ ಪ್ರತಿಕ್ರಿಯೆ ಸಿಗಬಹುದು ಎನ್ನುವ ಕುತೂಹಲ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಪ್ರೀಮಿಯರ್‌ನಲ್ಲಿಯೇ ಮಹಾರಾಜ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಪ್ರೀಮಿಯರ್‌ನಲ್ಲಿ ಮಹಾರಾಜ 5.4 ಕೋಟಿಯನ್ನು ಗಳಿಸಿದೆ.
ಇನ್ನೂ 20 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ಭಾರತದಲ್ಲಿ ಮಹಾರಾಜ ಚಿತ್ರ 100 ಕೋಟಿಯನ್ನು ಗಳಿಸಿತ್ತು. ಈಗ ಚೀನಾದಲ್ಲಿ ಕೇವಲ ಪ್ರೀಮಿಯರ್ ಪ್ರದರ್ಶನದಲ್ಲಿಯೇ ಚಿತ್ರ 5.4 ಕೋಟಿಯನ್ನು ಗಳಿಸಿದೆ. ಈ ಮೂಲಕ ಮಹಾರಾಜ ಚಿತ್ರದ ಒಟ್ಟಾರೆ ಗಳಿಕೆ 109 ಕೋಟಿಗೆ ತಲುಪಿದೆ. ಇನ್ನೂ ಪ್ರೀಮಿಯರ್‌ನಲ್ಲಿ ಸಿಕ್ಕ ಪ್ರತಿಕ್ರಿಯೆ, ಮಹಾರಾಜ ಚೀನಾದಲ್ಲಿ ಮ್ಯಾಜಿಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ ಎನ್ನುವ ಸುಳಿವನ್ನು ನೀಡಿದೆ. ಹೀಗಾಗಿಯೇ ಲೆಕ್ಕಾಚಾರವನ್ನು ಹಾಕುತ್ತಿರುವ ಅನೇಕರು ಬಾಹುಬಲಿ 2 ದಾಖಲೆಯನ್ನು ಮಹಾರಾಜ ಮುರಿಯಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಅಸಲಿಗೆ ಬಾಹುಬಲಿ 2 ಚೀನಾದಲ್ಲಿ 89 ಕೋಟಿಯನ್ನು ಗಳಿಸಿತ್ತು. ಈ ಮೂಲಕ ಚೀನಾದ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಭಾರತದ ಹತ್ತನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ದಾಖಲೆಯನ್ನು ಮಹಾರಾಜ ಮುರಿಯುವ ಎಲ್ಲ ಸಾಧ್ಯತೆ ಸದ್ಯಕ್ಕೆ ಕಂಡು ಬರುತ್ತಿದೆ. ಇನ್ನೂ 83.6 ಕೋಟಿಯನ್ನು ಮಹಾರಾಜ ಗಳಿಸಿದರೆ ಹತ್ತನೇ ಸ್ಥಾನ ಮಹಾರಾಜ ಚಿತ್ರದ ಪಾಲಾಗಲಿದೆ.
ಇನ್ನುಳಿದಂತೆ ಚೀನಾದಲ್ಲಿ 40,000 ಸ್ಕ್ರೀನ್‌ಗಳಲ್ಲಿ ಮಹಾರಾಜ ತೆರೆಗೆ ಬಂದಿದೆ. ಹೀಗಾಗಿ ಬಾಹುಬಲಿ 2 ಚಿತ್ರದ ದಾಖಲೆಯನ್ನು ಮಹಾರಾಜ ಮುರಿಯುವುದರಲ್ಲಿ ಅನುಮಾನ ಇಲ್ಲ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. 1000 ಕೋಟಿ ಗಳಿಸಿದ ಮೊದಲ ತಮಿಳು ಚಿತ್ರ ಎನ್ನುವ ಹೆಗ್ಗಳಿಕೆಗೆ ಕೂಡ ಮಹಾರಾಜ ಪಾತ್ರವಾದರು ಆಗಬಹುದು ಆ ಸಾಧ್ಯತೆ ಕೂಡ ಇದೆ ಎನ್ನುವ ಮಾತು ಕೂಡ ಸದ್ಯಕ್ಕೆ ತಮಿಳುನಾಡಿನೆಲ್ಲೆಡೆ ಕೇಳಿ ಬರುತ್ತಿದೆ.
ಅಂದ್ಹಾಗೇ ವಿಜಯ್ ಸೇತುಪತಿ ಮತ್ತು ಅನುರಾಗ್ ಕಶ್ಯಪ್ ಹೊರತು ಪಡಿಸಿ ಚಿತ್ರದಲ್ಲಿ ಮಮತಾ ಮೋಹನ್‌ದಾಸ್, ಅಭಿರಾಮಿ, ಭಾರತೀರಾಜಾ, ಸಿಂಗಂಪುಲಿ, ವಿನೋದ್ ಸಾಗರ್, ಸರವಣ ಸುಬ್ಬಯ್ಯ, ಮುನಿಶ್‌ಕಾಂತ್, ಅರುಳ್‌ದಾಸ್, ವೆಟ್ರಿವೇಲ್ ರಾಜ, ಸಚನಾ ನಮಿದಾಸ್, ಮುಂತಾದವರು ಇದ್ದಾರೆ. ಇನ್ನೂ ವಿಜಯ್ ಸೇತುಪತಿ ಅವರ ಪತ್ನಿ ಪಾತ್ರವನ್ನು ದಿವ್ಯಾ ಭಾರತಿ ನಿರ್ವಹಿಸಿದ್ಧಾರೆ. ಇನ್ನೂ ಕನ್ನಡದ ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡಿರುವುದು ಇನ್ನೊಂದು ವಿಶೇಷ. ನಿತಿಲನ್ ಸ್ವಾಮಿನಾಥನ್ ಈ ಚಿತ್ರವನ್ನು ನಿರ್ದೇಶಿಸಿದ್ಧಾರೆ. ಜಗದೀಶ್ ಪಳನಿಸ್ವಾಮಿ, ಸುಧನ್ ಸುಂದರಂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











