ವಿಜಯ್ ಸಿನಿಮಾದಿಂದ ಮಹೇಶ್ ಬಾಬು ಪತ್ನಿ ಹೊರಬಂದಿದ್ದೇಕೆ: ದಳಪತಿ- ನಮ್ರತಾ ಹಳೆಯ ವಿಚಾರ ವೈರಲ್
ತೆಲುಗು ಸ್ಟಾರ್ ಮಹೇಶ್ ಬಾಬು ಮತ್ತು ತಮಿಳು ನಟ ವಿಜಯ್ ಇಬ್ಬರೂ ದಕ್ಷಿಣ ಭಾರತದ ಸೂಪರ್ ಸ್ಟಾರ್ಸ್. ಅಷ್ಟೆಯಲ್ಲ ಇಬ್ಬರೂ ಉತ್ತಮ ಸ್ನೇಹಿತರು, ಬಾಲ್ಯದ ಸ್ನೇಹಿತರು. ತೆಲುಗು ಸ್ಟಾರ್ ಮಹೇಶ್ ಬಾಬು ಬಾಲ್ಯ ಕಳೆದಿದ್ದು ಚೆನ್ನೈನಲ್ಲಿ. ಆಗಲೇ ಇಬ್ಬರು ಸ್ನೇಹಿತರಾಗಿದ್ದರು. ದಳಪತಿ ವಿಜಯ್ ಓದಿದ ಕಾಲೇಜಿನಲ್ಲೇ ನಟ ಮಹೇಶ್ ಬಾಬು ಕೂಡ ಓದಿದ್ದರು. ಇಬ್ಬರ ಸ್ನೇಹ ಬಾಂಧವ್ಯವನ್ನು ಆಗಾಗ ಸಾಬೀತು ಪಡಿಸುತ್ತಿರುತ್ತಾರೆ.
ಇತ್ತೀಚಿಗಷ್ಟೆ ನಟ ಮಹೇಶ್ ಬಾಬು ಗ್ರೀನ್ ಇಂಡಿಯಾ ಚಾಲೆಂಜ್ ಸ್ವೀಕರಿಸಿ ನಟ ದಳಪತಿ ವಿಜಯ್ ಗೆ ಚಾಲೆಂಜ್ ಹಾಕಿದ್ದರು. ಗೆಳೆಯ ಮಹೇಶ್ ಬಾಬು ಚಾಲೆಂಜ್ ಸ್ವೀಕರಿಸಿದ್ದ ದಳಪತಿ ವಿಜಯ್ ಸಸಿನೆಟ್ಟಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದೀಗ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ದಳಪತಿ ವಿಜಯ್ ಅವರ ಹಳೆಯ ಸುದ್ದಿ ಈಗ ವೈರಲ್ ಆಗಿದೆ. ನಮ್ರತಾ ತಮಿಳು ಸ್ಟಾರ್ ವಿಜಯ್ ನಟನೆಯ ಸಿನಿಮಾಗೆ ಆಯ್ಕೆಯಾಗಿದ್ದರು. ಕೆಲವು ದೃಶ್ಯಗಳನ್ನು ಚಿತ್ರೀಕರಣ ಸಹ ಮಾಡಲಾಗಿತ್ತು. ಬಳಿಕ ನಮ್ರತಾ ಚಿತ್ರತಂಡಕ್ಕೆ ಶಾಕ್ ನೀಡಿದ್ದರು. ಸಿನಿಮಾದಿಂದ ಮಹೇಶ್ ಬಾಬು ಪತ್ನಿ ಹೊರ ನಡೆಯುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದು 2003ರಲ್ಲಿ ನಡೆದ ಕಥೆ. ಆದರೀಗ ವೈರಲ್ ಆಗಿದೆ. ಮುಂದೆ ಓದಿ...

ದಳಪತಿ ಸಿನಿಮಾದಿಂದ ಹೊರನಡದಿದ್ದ ನಮ್ರತಾ
ನಮ್ರತಾ, ಮಹೇಶ್ ಬಾಬು ಅವರನ್ನು ಮದುವೆಯಾಗುವ ಮೊದಲು ದಳಪತಿ ವಿಜಯ್ ನಟನೆಯ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದರು. 2003ರಲ್ಲಿ ಬಿಡುಗಡೆಯಾಗಿದ್ದ 'ತಿರುಮಲೈ' ಸಿನಿಮಾಗೆ ಮಹೇಶ್ ಬಾಬು ಪತ್ನಿ ನಮ್ರತಾ ಮೊದಲ ಆಯ್ಕೆಯಾಗಿದ್ದರು. ಚಿತ್ರಕ್ಕೆ ನಿರ್ದೇಶಕ ರಮಣ ಆಕ್ಷನ್ ಕಟ್ ಹೇಳಿದ್ದರು. ಮಾಜಿ ಮಿಸ್ ಇಂಡಿಯಾ ನಮ್ರತಾ, ವಿಜಯ್ ಜೊತೆ ಕೆಲವು ದೃಶ್ಯಗಳ ಚಿತ್ರೀಕರಣದಲ್ಲೂ ಭಾಗಿಯಾಗಿದ್ದರು. ಬಳಿಕ ಸಿನಿಮಾದಿಂದ ದಿಢೀರ್ ಅಂತ ಔಟ್ ಆಗಿದ್ದರು.

ವಿಜಯ್ ಸಿನಿಮಾದಿಂದ ಹೊರನಡೆದಿದ್ದೇಕೆ?
ನಮ್ರತಾ ಸಿನಿಮಾದಿಂದ ಹೊರನಡೆದಿದ್ದು ಅಚ್ಚರಿ ಮೂಡಿಸಿತ್ತು. ಈ ಬಗ್ಗೆ ಅನೇಕ ಸುದ್ದಿಗಳು ಹರಿದಾಡಿದ್ದವು. ಆದರೆ ಮೂಲಗಳ ಪ್ರಕಾರ ಕ್ರಿಯೇಟಿವ್ ಭಿನ್ನಾಭಿಪ್ರಾಯದ ಕಾರಣ ನಮ್ರತಾ ಸಿನಿಮಾದಿಂದ ಹೊರನಡೆದಿದ್ದರು ಎನ್ನುವ ಸುದ್ದಿ ವೈರಲ್ ಆಗಿತ್ತು.

ನಮ್ರತಾ ಜಾಗಕ್ಕೆ ಸೂರ್ಯ ಪತ್ನಿ ಎಂಟ್ರಿ
ನಮ್ರತಾ ಬಿಟ್ಟು ಹೋದ ಜಾಗಕ್ಕೆ ತಮಿಳಿನ ಮತ್ತೋರ್ವ ಖ್ಯಾತ ನಟ ಸೂರ್ಯ ಪತ್ನಿ ಜ್ಯೋತಿಕಾ ಎಂಟ್ರಿ ಕೊಟ್ಟಿದ್ದರು. ದಳಪತಿ ವಿಜಯ್ ಜೊತೆ ಜ್ಯೋತಿಕಾ ನಾಯಕಿಯಾಗಿ ನಟಿಸಿದರು. ಅಂದಹಾಗೆ ಜ್ಯೋತಿಕಾ ಕೂಡ ದಳಪತಿ ವಿಜಯ್ ಗೆ ಆಪ್ತ ಸ್ನೇಹಿತೆ. ಇಬ್ಬರ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ.

ಹಳೆಯ ಸುದ್ದಿ ಈಗ ವೈರಲ್
ಸುಮಾರು 18 ವರ್ಷಗಳ ಹಳೆಯ ವಿಚಾರ ಈಗ ವೈರಲ್ ಆಗಿದೆ. ಅಭಿಮಾನಿಗಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಲ್ಲಿ ಶೇರ್ ಮಾಡುತ್ತಿದ್ದಾರೆ. ಅಲ್ಲದೆ ನಟ ವಿಜಯ್ ಜೊತೆ ಮಹೇಶ್ ಬಾಬು ಪತ್ನಿ ನಮ್ರತಾ ನಟಿಸಿರುವ ಕೆಲವು ದೃಶ್ಯಗಳ ಫೋಟೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮದುವೆ ಬಳಿಕ ಸಿನಿಮಾ ಮಾಡಿಲ್ಲ ನಮ್ರತಾ
ಅಂದಹಾಗೆ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ 2000ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ವಂಶಿ ಸಿನಿಮಾ ಸೆಟ್ ನಲ್ಲಿ ಭೇಟಿಯಾಗಿ ಸ್ನೇಹಿತರಾಗಿದ್ದ ಈ ಜೋಡಿ ಪ್ರೀತಿಸಿ ಬಳಿಕ 2005ರಲ್ಲಿ ಹಸೆಮಣೆ ಏರಿದರು. ಮದುವೆ ಬಳಿಕ ನಮ್ರತಾ ತೆರೆಮೇಲೆ ಮಿಂಚಿಲ್ಲ. ನಮ್ರತಾ ಕೊನೆಯದಾಗಿ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಂಡದ್ದರು. 2004ರ ಬಳಿಕ ಮಹೇಶ್ ಬಾಬು ಪತ್ನಿ ಮತ್ತೆ ಬಣ್ಣ ಹಚ್ಚಿಲ್ಲ. ಬಳಿಕ ನಮ್ರತಾ ಕುಟುಂಬ ನಿಭಾಯಿಸುವ ಜೊತೆ ಮಹೇಶ್ ಬಾಬು ಸಿನಿಮಾ ಬದುಕನ್ನು ನೋಡಿಕೊಳ್ಳುತ್ತಿದ್ದಾರೆ. ಮಹೇಶ್-ನಮ್ರತಾ ತಾರಾ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ಮಹೇಶ್ ಬಾಬು ಸಿನಿಮಾ
ಅಂದಹಾಗೆ ಮಹೇಶ್ ಬಾಬು ಸದ್ಯ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಳಿಕ ಮಹೇಶ್ ಬಾಬು, ಖ್ಯಾತ ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇನ್ನು ತಮಿಳು ಸ್ಟಾರ್ ದಳಪತಿ ವಿಜಯ್ ಸದ್ಯ ಬೀಸ್ಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











